ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬುಧವಾರ ಸಂಜೆ 4:05 ಕ್ಕೆ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಸಮಾರಂಭ ಜರುಗಿತು. ಕರ್ನಾಟಕ ರಾಜಕಾರಣದ ಇತಿಹಾಸದಲ್ಲೇ ಅಭೂತಪೂರ್ವ ಮತ್ತು ಅತ್ಯಂತ ವಿಶಿಷ್ಟವಾದ ನೂತನ ದಾಖಲೆಯೊಂದಕ್ಕೆ ಸಾಕ್ಷಿಯಾಗುತ್ತಿದೆ.
ಸೌಹಾರ್ದತೆಯ ಸಂದೇಶ: ಸರ್ವಧರ್ಮ ಗುರುಗಳ ಉಪಸ್ಥಿತಿ:
ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನೂತನ ಮುಖ್ಯಮಂತ್ರಿಯೊಬ್ಬರು ಹಿಂದೂ ಧರ್ಮದ ಪೂಜ್ಯ ಸ್ವಾಮೀಜಿಗಳು, ಕ್ರಿಶ್ಚಿಯನ್ ಧರ್ಮದ ಫಾದರ್‌ಗಳು ಹಾಗೂ ಇಸ್ಲಾಂ ಧರ್ಮದ ಗೌರವಾನ್ವಿತ ಮೌಲ್ವಿಗಳು ಸೇರಿದಂತೆ ಸರ್ವಧರ್ಮಗಳ ಆಧ್ಯಾತ್ಮಿಕ ಗುರುಗಳ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಈ ಮೂಲಕ ಹೊಸ ಸರ್ಕಾರವು ಅಧಿಕಾರದ ಆರಂಭದಲ್ಲೇ ನಾಡಿಗೆ ಭಾವೈಕ್ಯತೆಯ ಸಂದೇಶ ರವಾನಿಸಿದೆ.
55ಕ್ಕೂ ಹೆಚ್ಚು ಧರ್ಮಗುರುಗಳಿಗೆ ಆಹ್ವಾನ:
ಸರ್ವಧರ್ಮ ಸಹಿಷ್ಣುತೆ, ಪರಸ್ಪರ ಸಹಬಾಳ್ವೆ ಹಾಗೂ ಶಾಂತಿ-ಸೌಹಾರ್ದತೆಯನ್ನು ಸಾರುವ ಉದ್ದೇಶದಿಂದ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ ರಾಜ್ಯದ ವಿವಿಧ ಧರ್ಮ, ಪಂಥ ಹಾಗೂ ಜಾತಿಗಳ ಸುಮಾರು 55ಕ್ಕೂ ಹೆಚ್ಚು ಪ್ರಮುಖ ಧರ್ಮಗುರುಗಳನ್ನು ಈ ಸಮಾರಂಭಕ್ಕೆ ಸಗೌರವವಾಗಿ ಆಹ್ವಾನಿಸಲಾಗಿದೆ.
ಐತಿಹಾಸಿಕ ಹೆಜ್ಜೆ: ಕೇವಲ ರಾಜಕೀಯ ಮುಖಂಡರು ಮತ್ತು ಗಣ್ಯರಷ್ಟೇ ಅಲ್ಲದೆ, ನಾಡಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಬಿಂಬಿಸುವ ಧರ್ಮಗುರುಗಳ ಸಮ್ಮುಖದಲ್ಲಿ ಈ ಪ್ರಮಾಣವಚನ ನಡೆಯುತ್ತಿರುವುದು ಇಡೀ ದೇಶದ ಗಮನ ಸೆಳೆದಿದೆ.

ವಿವಿಧ ಮಠಾಧೀಶರು ಮತ್ತು ಸರ್ವಧರ್ಮದ ಮುಖಂಡರ ಆಶೀರ್ವಾದದೊಂದಿಗೆ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಚುಕ್ಕಾಣಿ ಹಿಡಿಯುತ್ತಿದ್ದು, ಈ ನಡೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.



