ಚಂದ್ರವಳ್ಳಿ ನ್ಯೂಸ್, ಕನಕಪುರ:
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಮೊದಲ ಬಾರಿಗೆ ತಮ್ಮ ಹುಟ್ಟೂರಿಗೆ ಭೇಟಿ ನೀಡಿದರು. ಮುಖ್ಯಮಂತ್ರಿಯಾಗಿ ಆಗಮಿಸಿದ ನೆಚ್ಚಿನ ನಾಯಕನನ್ನು ಬರಮಾಡಿಕೊಳ್ಳಲು ಇಡೀ ಕ್ಷೇತ್ರವೇ ಹಬ್ಬದ ವಾತಾವರಣದಲ್ಲಿ ಮುಳುಗಿತ್ತು.
ಹೂಮಳೆಯ ಅದ್ಧೂರಿ ಸ್ವಾಗತ:
ಆರಂಭದಲ್ಲಿ ಹಾರೋಹಳ್ಳಿಗೆ ಆಗಮಿಸಿದ ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಶಾಸಕ ಇಕ್ಬಾಲ್ ಹುಸೇನ್, ಮಾಜಿ ಶಾಸಕ ಕೆ. ರಾಜು ಸೇರಿದಂತೆ ಪ್ರಮುಖ ಮುಖಂಡರು ಬರಮಾಡಿಕೊಂಡರು. ಬಳಿಕ ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ರಸ್ತೆಯುದ್ದಕ್ಕೂ ಸಾರ್ವಜನಿಕರು ಹಾಗೂ ಕಾರ್ಯಕರ್ತರು ಸಿಎಂ ಮೇಲೆ ಹೂಮಳೆ ಸುರಿಸಿ ಹರ್ಷ ವ್ಯಕ್ತಪಡಿಸಿದರು. ನಂತರ ಕನಕಪುರದ ತುಂಗಣಿ ಗೇಟ್ ಬಳಿ ಬೃಹತ್ ಸೇಬಿನ ಹಾರಗಳನ್ನು ಹಾಕುವ ಮೂಲಕ ಮುಖ್ಯಮಂತ್ರಿಗಳಿಗೆ ಅದ್ದೂರಿ ಸ್ವಾಗತ ಕೋರಲಾಯಿತು.
ಕನಕಪುರಕ್ಕೆ ಮೆಡಿಕಲ್ ಕಾಲೇಜು ಕನಸು ನನಸು:
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, "ಕನಕಪುರ ತಾಲೂಕಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬುದು ನನ್ನ ದೊಡ್ಡ ಆಸೆಯಾಗಿತ್ತು. ತಾಲೂಕು ಮಟ್ಟದಲ್ಲಿ ಮೆಡಿಕಲ್ ಕಾಲೇಜು ಬರುತ್ತಿರುವುದು ಇದೇ ಮೊದಲು. ಇಂದು ನನ್ನ ಕೈಯಿಂದಲೇ ಅದಕ್ಕೆ ಭೂಮಿಪೂಜೆ ನೆರವೇರಿದೆ. ನಮ್ಮ ಜನರಿಗೆ ಆಶ್ರಯ, ಆರೋಗ್ಯ ಮತ್ತು ಅಕ್ಷರ (ಶಿಕ್ಷಣ) ಸಿಗಬೇಕು. ಪ್ರತಿಯೊಬ್ಬರ ತಲೆಯ ಮೇಲೂ ಸೂರಿರಬೇಕು ಎಂಬುದು ನನ್ನ ಮೊದಲ ಆದ್ಯತೆ. ಇಲ್ಲಿನ ಯುವಕರು ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕು" ಎಂದರು.
ಕೈಗಾರಿಕೆಗಳಿಗೆ ಖಡಕ್ ಸೂಚನೆ: "ಹಾರೋಹಳ್ಳಿಯಲ್ಲಿ ದೊಡ್ಡ ಇಂಡಸ್ಟ್ರಿಯಲ್ ಟೌನ್ ಇದೆ. ಇಲ್ಲಿನ ಖಾಸಗಿ ಕಂಪನಿಗಳು ಸ್ಥಳೀಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು. ಆದರೆ, ಯಾರೂ ಯೂನಿಯನ್ ಮಾಡಿಕೊಂಡು ಮುಷ್ಕರ (ಸ್ಟ್ರೈಕ್) ನಡೆಸುವಂತಿಲ್ಲ" ಎಂದು ಸಿಎಂ ಸ್ಪಷ್ಟಪಡಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯಗೆ ಧನ್ಯವಾದ:
"ಸಿಎಂ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆ. ಬಹಳ ಸರಳತೆಯಿಂದ ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡಿ 2028 ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ನನಗೆ ಜಾತಿ, ಧರ್ಮದಲ್ಲಿ ನಂಬಿಕೆಯಿಲ್ಲ; ನಿಮ್ಮ ಪ್ರೀತಿಯೇ ಮುಖ್ಯ. ನಮ್ಮ 5 ಗ್ಯಾರಂಟಿ ಯೋಜನೆಗಳನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಇವು ಪ್ರತಿಯೊಬ್ಬರಿಗೂ ತಲುಪಬೇಕು. ಬೆಂಗಳೂರಿನಲ್ಲಿ ಕೆಲಸದಲ್ಲಿದ್ದರೂ ಕನಕಪುರದಲ್ಲೇ ವೋಟ್ ಉಳಿಸಿಕೊಳ್ಳಿ, ಆಗಲೇ ಎಲ್ಲಾ ಭಾಗ್ಯಗಳು ಸಿಗುತ್ತವೆ" ಎಂದು ಕರೆ ನೀಡಿದರು.
ಪ್ರಾರ್ಥನೆ ವಿಫಲವಾಗಲಿಲ್ಲ: ಭಾವನಾತ್ಮಕ ಮಾತುಗಳು
"ನಾನು ಈ ಜಿಲ್ಲೆಯ ಮಗನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ನೀವೆಲ್ಲ ನನಗಾಗಿ ಪ್ರಾರ್ಥನೆ ಮಾಡಿದ್ದೀರಿ, ಹರಕೆ ಹೊತ್ತಿದ್ದೀರಿ. ಹಿಂದೆ ಚಾಮುಂಡಿ ಬೆಟ್ಟದಲ್ಲಿ ನಿಂತು ನಾನು ಒಂದು ಮಾತು ಹೇಳಿದ್ದೆ—'ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ' ಎಂದು ನೀವೆಲ್ಲಾ ನನ್ನನ್ನು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಿಸಲು ಮಾಡಿದ ಪ್ರಾರ್ಥನೆಯ ಫಲವಾಗಿ ಇಂದು ನಾನು ಮುಖ್ಯಮಂತ್ರಿಯಾಗಿದ್ದೇನೆ" ಎಂದು ಭಾವುಕರಾದರು. ಇದೇ ವೇಳೆ ಶಾಸಕ ಇಕ್ಬಾಲ್ ಹುಸೇನ್ ಅವರ ಬಗ್ಗೆ ಸ್ನೇಹದಿಂದ ಕಾಲೆಳೆದ ಸಿಎಂ, "ಅವನಿಗೆ ನಾನು ಸಿಎಂ ಆಗಬೇಕೆಂಬ ಆಸೆಯಿತ್ತು, ಈಗ ಅದರಂತೆ ನಾನು ಸಿಎಂ ಆಗಿದ್ದೇನೆ" ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆ ಮರುನಾಮಕರಣದ ಮಹತ್ವ:
"ಈ ಭಾಗವನ್ನು 'ಬೆಂಗಳೂರು ದಕ್ಷಿಣ' ಜಿಲ್ಲೆ ಎಂದು ಮರುನಾಮಕರಣ ಮಾಡಿದಾಗ ಹಲವರು ನಕ್ಕಿದ್ದರು. ಆದರೆ ಹೆಸರು ಬದಲಾದ ಮೇಲೆ ಇಲ್ಲಿನ ಜಮೀನಿನ ಬೆಲೆ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ.
ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್ ಹೆಸರನ್ನು ಬದಲಾಯಿಸಲು ಸಾಧ್ಯವೇ? ನಾವೆಲ್ಲರೂ ಬೆಂಗಳೂರು ಜಿಲ್ಲೆಯವರಾದ್ದರಿಂದ ಆ ಹೆಸರನ್ನು ಇಟ್ಟಿದ್ದೇನೆ. ಹಾರೋಹಳ್ಳಿ ಇಂದು ದೊಡ್ಡ ನಗರವಾಗಿ ಬೆಳೆಯುತ್ತಿದೆ. ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದಾಗ ಇಲ್ಲಿಗೆ ದಯಾನಂದ್ ಸಾಗರ್ ಕಾಲೇಜು ತಂದಿದ್ದೆ, ಈಗ ಸರ್ಕಾರಿ ಮೆಡಿಕಲ್ ಕಾಲೇಜು ತರುತ್ತಿದ್ದೇನೆ. ಸಿಲ್ಕ್ ಮತ್ತು ಮಿಲ್ಕ್ (ರೇಷ್ಮೆ ಮತ್ತು ಹಾಲು) ನಮ್ಮ ತಾಲೂಕಿನ ಶಕ್ತಿ. ರೈತರು ಯಾರೂ ಬೇಸಾಯ ಬಿಡಬೇಡಿ" ಎಂದು ಕಿವಿಮಾತು ಹೇಳಿದರು.
ಜೆಡಿಎಸ್ ಕಾರ್ಯಕರ್ತರಿಗೆ ಮುಕ್ತ ಆಹ್ವಾನ:
ಹಳೆಯ ರಾಜಕೀಯ ವಿದ್ಯಮಾನಗಳನ್ನು ನೆನೆದ ಸಿಎಂ, "ಬಿಜೆಪಿಯನ್ನು ದೂರ ಇಡಬೇಕೆಂದು ಹಿಂದೆ ಅನಿತಾ ಕುಮಾರಸ್ವಾಮಿ ಅವರ ಗೆಲುವಿಗೆ ಬೆಂಬಲ ನೀಡಿದ್ದೆ. ಆಮೇನಾಯಿತು ಎಂಬುದು ನಿಮಗೆ ಗೊತ್ತಿದೆ. ಈಗ ಜೆಡಿಎಸ್ ಕಾರ್ಯಕರ್ತರಿಗೂ ಹೇಳುತ್ತಿದ್ದೇನೆ; ನಾನು ಕೇವಲ ಕಾಂಗ್ರೆಸ್‌ನವರಿಗಷ್ಟೇ ಅಲ್ಲ, ನಿಮಗೂ ಡಿಕೆ ಶಿವಕುಮಾರ್ ಇದ್ದೇನೆ. ನನ್ನನ್ನು ಬಳಸಿಕೊಂಡು ಕ್ಷೇತ್ರದ ಅಭಿವೃದ್ಧಿ ಮಾಡಿಕೊಳ್ಳುವುದು ನಿಮಗೆ ಬಿಟ್ಟಿದ್ದು. ಈ ತಾಲೂಕಿನ ಮಗನಿಗೆ ಶಕ್ತಿ ನೀಡಿ ಸಿಎಂ ಮಾಡಿದ್ದೀರಿ, ಇದಕ್ಕಿಂತ ಹೆಚ್ಚಿನ ಶಕ್ತಿಯನ್ನು 2028ರ ಚುನಾವಣೆಯಲ್ಲಿ ನೀಡಬೇಕು" ಎಂದು ವಿನಂತಿಸಿದರು.
ಹಾರೋಹಳ್ಳಿಯಲ್ಲಿ ನಡೆದ ಈ ಕೃತಜ್ಞತಾ ಸಮರ್ಪಣಾ ಸಭೆಯಲ್ಲಿ ಬಮೂಲ್ ಅಧ್ಯಕ್ಷ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಡಿ.ಕೆ. ಸುರೇಶ್, ಶಾಸಕ ಇಕ್ಬಾಲ್ ಹುಸೇನ್, ಎಂಎಲ್ಸಿಗಳಾದ ಎಸ್. ರವಿ, ಸುಧಾಮದಾಸ್, ಪ್ರಮುಖ ಮುಖಂಡರಾದ ದುಂತೂರು ವಿಶ್ವನಾಥ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.



