ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತಮ್ಮ ಸ್ವಂತ ಊರು ಪರಿವಾರ ಬಂಧು ಬಳಗವನ್ನು ತೊರೆದು ದೂರದ ಸೈನ್ಯದಲ್ಲಿ ಕಾರ್ಯ ನಿರ್ವಹಿಸುವ ನಮ್ಮಂತಹ ಸೈನಿಕರು ದಿನನಿತ್ಯದಲ್ಲಿ ಯಾರಿಂದಲಾದರೂ ಯಾರಿಗಾದರೂ ಒಂದು ಚೇಷ್ಟೆ ಮಾಡಿ ಕಾಲೆಳೆದು ಕೀಟಲೆ ಮಾಡಿಕೊಂಡು ಒಬ್ಬಂಟಿತನವನ್ನು ಮರೆಯಲು ಏನಾದರೂ ಒಂದು ಖುಷಿಯ ಸಂಗತಿಗಳನ್ನು ಹುಟ್ಟಿಸಿ ಎಲ್ಲರೊಂದಿಗೆ ಖುಷಿಯಾಗಿ ಕಾಲ ಕಳೆಯುವುದು ಒಂದು ಸಾಮಾನ್ಯ ಸಂಗತಿ ಏಕೆಂದರೆ ಪರಿವಾರದ ನೆನಪುಗಳನ್ನು ವಿರಹ ಬಾದೆಗಳನ್ನು ಮರೆಯಲು ಯಾವುದಾದರೂ ಹಾಸ್ಯ ಸಂಗತಿಗಳನ್ನು ಹುಟ್ಟಿಹಾಕಿ ನಗೆಗಡಲಲ್ಲಿ ತೇಲುವುದು ಸಹ ನಮ್ಮಂತಹ ಸೈನ್ಯದಲ್ಲಿರುವವರ ಒಂದು ಹವ್ಯಾಸ ಮತ್ತು ಜೀವನದ ಒಂದು ಭಾಗವಾಗಿದೆ.
ಅದರಲ್ಲೂ ಈಗಿನಂತೆ ಹಿಂದೆ ಮೊಬೈಲ್ ಎಂಬ ಮಾರಿ ಇಲ್ಲದ ಕಾಲದಲ್ಲಿ ಈ ರೀತಿಯ ಹಾಸ್ಯಗಳೇ ನಮ್ಮಂಥವರ ಮನರಂಜನೆ ಆಗಿರುತ್ತಿತ್ತು ಆದರೆ ಈಗಂತೂ ಎಲ್ಲರ ಕೈಯಲ್ಲೂ ಹೈಲು ಎಂಬ ಮೊಬೈಲು ಇರುವ ಕಾರಣ ಎಲ್ಲರೂ ಅವರವರ ಮೊಬೈಲಿನಲ್ಲಿಯೇ ನಿರತರಾಗಿರುವಂತಹ ಇಂತಹ ಕಾಲದಲ್ಲಿ ನಾವು ಹಿಂದೆ ಅನುಭವಿಸಿ ಆನಂದಿಸಿದ ಆ ಸುಂದರ ಕ್ಷಣಗಳು ಈಗಂತೂ ತುಂಬಾ ಕಡಿಮೆ ಆದರೂ ಕೆಲವೊಮ್ಮೆ ಹಿಂದಿನ ಎರಡು ಕೀಟಲೆ ತಮಾಷೆಯ ಪ್ರಸಂಗಗಳು ಆಗಾಗ ನೆನಪಿಗೆ ಬಂದು ಒಂದು ರೀತಿಯ ಮೋಜನ್ನು ನೀಡುತ್ತವೆ ಅದನ್ನು ನಿಮ್ಮ ಜೊತೆ ಹಂಚಿಕೊಳ್ಳುವ ಆಸೆ.
ನಮ್ಮ ನಾಡಿನ ದಕ್ಷಿಣ ಕನ್ನಡ ಜಿಲ್ಲೆಯ ರಾಬರ್ಟ್ ಎಂಬುವಾತ ನಮಗಿಂತಲೂ ಹಿರಿಯನಿದ್ದ ಮತ್ತು ಆಫೀಸ್ ನಲ್ಲಿ ಒಳ್ಳೆಯ ರೈಟರ್ ಆಗಿದ್ದ ಅವರು ಅದೆಂತ ತಮಾಷೆಗಾರ ಎಂದರೆ ಆತ ಇರುವ ಜಾಗದಲ್ಲಿ ಯಾರಿಗಾದರೂ ನಗಿಸಿ ಬೀಳುವಷ್ಟು ಕಿಲಾಡಿ ಅವರು ನಮ್ಮ ರೂಮಿನಲ್ಲಿ ಇದ್ದರು ಅದೇ ರೂಮಿನಲ್ಲಿ ಇನ್ನೊಬ್ಬ ಮುಖರ್ಜಿ ಎಂಬುವ ಬಂಗಾಳಿ ಇದ್ದ ಅವನು ನಮ್ಮ ಡಿ.ಸಿ ಮನೆಯಲ್ಲಿ ಸಹಾಯಕ ಕೆಲಸಗಾರನಾಗಿದ್ದ ಆತನಿಗೆ ಸುತಾರಾಂ ಕಿವಿ ಕೇಳಿಸುತ್ತಿರಲಿಲ್ಲ ಅವನನ್ನು ಉದ್ದೇಶಿಸಿ ನಮ್ಮ ರಾಬರ್ಟ್ ಯಾವಾಗಲೂ ಮಾತನಾಡಿಸುತ್ತಿದ್ದ ರೀತಿಯೇ ವಿಶೇಷವಾಗಿತ್ತು ಮತ್ತು ಅದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿ ಬಿಡುತ್ತಿತ್ತು ಆ ಮುಖರ್ಜಿಗೆ ರಾಬರ್ಟ್ ಯಾವಾಗಲೂ ಏಯ್ ಮುಖರ್ಜಿ ಎಂದು ಬಾಯಲ್ಲಿ ಕೆಟ್ಟ ಕೆಟ್ಟದಾಗಿ ಮಾತಾಡಿ ಕೈ ಸನ್ನೆಯಲ್ಲಿ ಮಾತ್ರ ಊಟ ಮಾಡಿದೆಯೋ ಟೀ ಕುಡಿದೆಯೋ ಎನ್ನುವಂತಹ ರೀತಿಯಲ್ಲಿ ಸನ್ನೆ ಮಾಡಿದರೆ ಆ ಮುಖರ್ಜಿ ಮಾತ್ರ ತುಂಬಾ ಸರಳವಾಗಿ ಆಯ್ತು ತಿಂದೆ ಕುಡಿದೆ ಎಂದು ತಲೆ ಅಲ್ಲಾಡಿಸುತ್ತಾ ಉತ್ತರ ಕೊಡುತ್ತಿದ್ದ ಅದನ್ನು ನೋಡಿ ರೂಮಿನಲ್ಲಿ ಇದ್ದಂತಹ ನಾವುಗಳು ನಕ್ಕು ನಕ್ಕು ಬೀಳುತ್ತಿದ್ದೆವು ಈ ರೀತಿ ಅನೇಕ ಹಾಸ್ಯ ಚಟುವಟಿಕೆಗಳು ನಮ್ಮ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿರುತ್ತಿದ್ದವು.
ಒಮ್ಮೆ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಇದ್ದೆವು ಅಲ್ಲಿ ನಮ್ಮೊಂದಿಗೆ ಒಬ್ಬ ತಮಿಳುನಾಡಿನ ಮಹಾರಾಜನ್ ಎಂಬುವವನು ಇದ್ದ ಪಾಪ ಆ ಮಹಾರಾಜನ್ ನ ತಂದೆ ತಾಯಿ ತನ್ನ ಮಗ ಮುಂದೆ ಮಹಾರಾಜನಂತಿರಬೇಕು ಎಂದು ಅದೆಷ್ಟೋ ಆಸೆಯಿಂದ ಅವನಿಗೆ ಆ ಹೆಸರಿಟ್ಟಿದ್ದರೋ ಏನೋ ಆದರೆ ಹಣೆಬರಹಕ್ಕೆ ಹೊಣೆ ಯಾರು ಎಂಬುವಂತೆ ಆ ಮಹಾರಾಜನ್ ನಮ್ಮ ಬಟಾಲಿಯನ್ ನ ಸುಬೇದಾರ್ ಮೇಜರ್ ಮನೆಯ ಆಳಾಗಿ ಅವನ ಆ ಮುದ್ದಾದ ಹೆಸರಿಗೆ ವಿರುದ್ಧವಾಗಿದ್ದ. ಕಪ್ಪು ಬಣ್ಣದ ಧಡೂತಿ ದೇಹದ ಆ ಮಹಾರಾಜನ್ ನಮಗಿಂತಲೂ ಹಿರಿಯನಿದ್ದ ನಾನಿನ್ನು ಆಗ ತಾನೇ ತರಬೇತಿ ಮುಗಿಸಿ ಎರಡು ವರ್ಷವಾಗಿತ್ತು ನಾವು ಹಳಬರ ಮುಂದೆ ಬಚ್ಚಾಗಳಂತೆ ಇದ್ದೆವು. ಅಂದರೆ ನಾವಿನ್ನು ಚಿಗುರುವ ಸಸಿಯಂತಿದ್ದರೆ ಮಹಾರಾಜನ್ ಬೇರು ಬಿಟ್ಟುಕೊಂಡ ಗಿಡದಂತೆ ಆಗಿ ಹೋಗಿದ್ದ ನಮ್ಮ ಸೈನ್ಯ ಪರಿಸರದಲ್ಲಿ ಜೂನಿಯರ್ ಅಂದ್ರೆ ಹಿಂದಿನ ಕಾಲದಲ್ಲಿ ತುಂಬಾ ಅಸಡ್ಡೆ ಮಾಡುವಂತಹ ಪದ್ಧತಿ ಇತ್ತು. ಒಮ್ಮೆ ನಾನು ನನ್ನ ಹಾಸಿಗೆ ಮೇಲೆ ಕುಳಿತು ಹಾಯಾಗಿ ಮಯೂರ ಪುಸ್ತಕ ಓದುತ್ತಾ ಕುಳಿತಿದ್ದೆ.
ನನ್ನ ಬಳಿ ಬಂದ ಮಹಾರಾಜನ್ ಏಯ್ ವೆಂಕಟೇಶ್ ನೀವೆಲ್ಲ ಹೊಸ ಹುಡುಗರು ಯಾವುದಾವುದೋ ಹೊಸ ಹೊಸ ಕ್ರೀಮ್ ಹಾಕಿಕೊಂಡು ಶೈನಿಂಗ್ ಹೊಡೆಯುತ್ತಿರುತ್ತೀರಾ ನಾನು ಎಲ್ಲಿಗೋ ಹೊರಗಡೆ ಹೋಗಬೇಕು ಯಾವುದಾದರೂ ಒಂದು ಒಳ್ಳೆಯ ಕ್ರೀಮ್ ಕೊಡು ಎಂದು ಮಾತಾಡುತ್ತಾ ಬಂದವನೇ ನನ್ನ ಅಲ್ಮೇರದಲ್ಲಿ ಕೈ ಹಾಕಿ ಒಂದು ಕ್ರೀಮ್ ಎತ್ತಿಕೊಂಡು ಸಿಕ್ಕಿದ್ದೇ ಚಾನ್ಸ್ ಎಂದುಕೊಂಡು ನನ್ನ ಅಪ್ಪಣೆ ಇಲ್ಲದೆ ಕ್ರೀಮ್ ಅನ್ನು ಮುಖಕ್ಕೆ ಬಳಿದುಕೊಂಡ ನಾನು ಓರೆಗಣ್ಣಿನಿಂದ ಅವನನ್ನು ವೀಕ್ಷಿಸುತ್ತದೆ ನನಗೆ ತಡೆಯಲಾಗದಷ್ಟು ನಗು ಉಕ್ಕಿ ಬರುತ್ತಿತ್ತು ಆದರೆ ಅವನು ಸೀನಿಯರ್ ಆಗಿದ್ದರಿಂದ ನಾನು ಒತ್ತಾಯಪೂರ್ವಕವಾಗಿ ನನ್ನ ನಗೆಬುಗ್ಗೆಯನ್ನು ತಡೆದುಕೊಂಡೆ ಮತ್ತು ಅವನೇ ಪ್ರತಿಕ್ರಿಯಿಸಲಿ ಎಂದು ಕಾಯುತ್ತಿದ್ದೆ. ಇದ್ದಕ್ಕಿದ್ದಂತೆ ಮಹಾರಾಜನ್ ಚಡಪಡಿಸುತ್ತಾ ಅರೇ ಇದೇನಿದು ನನ್ನ ಮುಖವೆಲ್ಲ ಉರಿಯುತ್ತಿದೆ ಎಂದು ಹಿಂಗು ತಿಂದ ಮಂಗನತೆ ಅಬ್ಬರಿಸ ಹತ್ತಿದ ಆಗ ನಾನು ನಾಟಕೀಯವಾಗಿ ನೋಡಿ ಓ ಈ ಕ್ರೀಮು ಹಚ್ಚಿಕೊಂಡಿರಾ ಇದು ಮೈ ನೋವಿಗೆ ಹಚ್ಚುವ ಹಿಮಾಲಯ ಕಂಪನಿಯ ರುಮಾಲಯ ಕ್ರೀಮ್ ಇದನ್ನೇಕೆ ನೀನು ಹಚ್ಚಿದೆ ಪಕ್ಕದಲ್ಲಿಯೇ ಇರುವ ಪೇರ್ ಎವರ್ ಕ್ರೀಂ ಮುಖಕ್ಕೆ ಹಚ್ಚಿಕೊಳ್ಳಬೇಕಿತ್ತು ಎಂದೆ. ಮೊದಲೇ ಮುಖ ಉರಿಯ ಬಾಧೆಯಲ್ಲಿ ರೋಧಿಸುತ್ತಿದ್ದ ಅವನು ನನ್ನ ಮೇಲೆ ಸಿಟ್ಟಾಗಿ ನನ್ನದೇ ತಪ್ಪೇನೋ ಅನ್ನುವಂತೆ ಅದನ್ನು ಮೊದಲೇ ಏಕೆ ಹೇಳಲಿಲ್ಲ ಎಂದು ಕೇಳಿದ ಅದಕ್ಕೆ ನಾನು ಅಯ್ಯೋ ನನಗೆ ಹೇಳಲಿಕ್ಕೆ ಎಲ್ಲಿಬಿಟ್ರಿ ನಾನು ನೋಡಿ ಹೇಳುವ ಮೊದಲೇ ನಿಮ್ಮ ಮುಖಕ್ಕೆ ಹಾಕಿಕೊಂಡಿರಲ್ಲ ನನ್ನದೇನು ತಪ್ಪಿಲ್ಲ ಎಂದು ಜಾರಿಕೊಂಡೆ.
ನಮ್ಮ ರೂಮಿನಲ್ಲಿ ಎಲ್ಲರಿಗೂ ಸೀನಿಯರ್ ಆದಂತಹ BHM (ಬಟಾಲಿಯನ್ ಹವಲ್ದಾರ್ ಮೇಜರ್) ಇದನ್ನೆಲ್ಲಾ ನೋಡುತ್ತಿದ್ದ ಅವರೇ ಮಹಾರಾಜನ್ ಗೆ ಬೈದು ಪುಗಸಟ್ಟೆ ಸಿಕ್ಕರೆ ಫಿನಾಯಿಲ್ ಕುಡಿಯುವವನ ಹಾಗೆ ಬಂದು ವೆಂಕಟೇಶನ ಒಪ್ಪಿಗೆ ಇಲ್ಲದೆ ಸ್ವತಃ ಆ ಕ್ರೀಂ ಹಚ್ಚಿಕೊಂಡು ಅನುಭವಿಸುತ್ತಿದ್ದೀಯಲ್ಲೋ ಅನುಭವಿಸು ಮೂರ್ಖ ಎಂದು ಮಹಾರಾಜನ್ ಗೆ ಬೈದು ದಬಾಯಿಸಿದರು ಮತ್ತು ಎಲ್ಲರು ಅವನನ್ನು ನೋಡಿ ಅಪಹಾಸ್ಯ ಮಾಡಿ ನಕ್ಕು ನಕ್ಕು ಬಿದ್ದರೂ ಪಾಪ ಮಹಾರಾಜನ್ ಮಾತ್ರ ಬೆಪ್ಪನಾಗಿ ಮುಖ ತೊಳೆದುಕೊಳ್ಳಲು ಬಚ್ಚಲಿಗೆ ಹಾರಿಕೊಂಡು ಹೋದ.
ಲೇಖನ: ವೆಂಕಟೇಶ ಹೆಚ್, ಚಿತ್ರದುರ್ಗ (ಹೈದರಾಬಾದ್). 7760023887.




