ಚಂದ್ರವಳ್ಳಿ ನ್ಯೂಸ್, ಬಿರ್ಭುಮ್ (ಪಶ್ಚಿಮ ಬಂಗಾಳ):
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರ ಸೊಸೆ ಬ್ರಿಸ್ಟಿ ಮುಖರ್ಜಿ (28) ಅವರು ಬಿರ್ಭುಮ್ ಜಿಲ್ಲೆಯಲ್ಲಿರುವ ತಮ್ಮ ಸ್ವಗೃಹದಲ್ಲೇ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮಂಗಳವಾರ ಮಧ್ಯಾಹ್ನ ಪೊಲೀಸರು ಖಚಿತಪಡಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಸೋದರಸಂಬಂಧಿ ನಿಹಾರ್ ಮುಖರ್ಜಿ ಅವರ ಪುತ್ರಿಯಾಗಿರುವ ಬ್ರಿಸ್ಟಿ ಮುಖರ್ಜಿ, ಮನೆಯ ಎರಡನೇ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸಾವಿನ ಸುತ್ತ ಅನುಮಾನ: ಬ್ರಿಸ್ಟಿ ಅವರ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿದೆಯೇ ಎಂಬುದನ್ನು ಪೊಲೀಸರು ಇನ್ನು ಸ್ಪಷ್ಟಪಡಿಸಿಲ್ಲ.
ತನಿಖೆ ಚುರುಕು: ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನ (ಫೊರೆನ್ಸಿಕ್) ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಮರಣೋತ್ತರ ಪರೀಕ್ಷೆ: ಶವವನ್ನು ವಶಕ್ಕೆ ಪಡೆದಿರುವ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದು, ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ಏನೆಂಬುದು ಬೆಳಕಿಗೆ ಬರಬೇಕಿದೆ.
ಸಾವು ಅನುಮಾನಾಸ್ಪದವಾಗಿರುವುದರಿಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಮಾಹಿತಿ ಕಲೆಹಾಕುತ್ತಿದ್ದಾರೆ.




