ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಮೂಲಸೌಕರ್ಯ ವೃದ್ಧಿ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇದರ ಭಾಗವಾಗಿ ಚಿತ್ರದುರ್ಗ ಮತ್ತು ಚಿಕ್ಕಜಾಜೂರಿನಲ್ಲಿ ಎರಡು ನೂತನ ರಸ್ತೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ದಿನಾಂಕ 30 ಆಗಸ್ಟ್ 2026 (ಭಾನುವಾರ) ರಂದು ಚಾಲನೆ ದೊರೆಯಲಿದೆ.
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಈ ಎರಡೂ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ವೇಳಾಪಟ್ಟಿ: ಚಿತ್ರದುರ್ಗ (LC No. 22): ಬೆಳಿಗ್ಗೆ 11:00 ಗಂಟೆಗೆ ಲೆವೆಲ್ ಕ್ರಾಸಿಂಗ್ ಸಂಖ್ಯೆ 22 ರ ಬದಲಾಗಿ ನಿರ್ಮಿಸಲಾಗುವ ರಸ್ತೆ ಮೇಲ್ಸೇತುವೆಗೆ ಶಂಕುಸ್ಥಾಪನೆ.
ಚಿಕ್ಕಜಾಜೂರು (LC No. 01): ಮಧ್ಯಾಹ್ನ 2:30 ಗಂಟೆಗೆ ಲೆವೆಲ್ ಕ್ರಾಸಿಂಗ್ ಸಂಖ್ಯೆ 01 ರ ಬದಲಾಗಿ ನಿರ್ಮಿಸಲಾಗುವ ರಸ್ತೆ ಮೇಲ್ಸೇತುವೆಗೆ ಶಂಕುಸ್ಥಾಪನೆ.
ಯೋಜನೆಯ ಮುಖ್ಯ ಉದ್ದೇಶಗಳು ಹಾಗೂ ಅನುಕೂಲಗಳು:
ಸುರಕ್ಷತೆ ಮತ್ತು ಸಂಚಾರ ಸುಗಮ: ಪ್ರಸ್ತುತ ಇರುವ ಲೆವೆಲ್ ಕ್ರಾಸಿಂಗ್‌ಗಳನ್ನು ತೆರವುಗೊಳಿಸಿ ರಸ್ತೆ ಮೇಲ್ಸೇತುವೆ ನಿರ್ಮಿಸುವುದರಿಂದ ರೈಲು ಮತ್ತು ರಸ್ತೆ ವಾಹನಗಳ ಅಪಘಾತದ ಅಪಾಯ ತಪ್ಪಲಿದ್ದು, ಸಾರ್ವಜನಿಕ ಸುರಕ್ಷತೆ ಹೆಚ್ಚಲಿದೆ.
ಸಂಚಾರ ದಟ್ಟಣೆಗೆ ಮುಕ್ತಿ: ಗೇಟ್ ಹಾಕಿದಾಗ ಉಂಟಾಗುತ್ತಿದ್ದ ಸುದೀರ್ಘ ಕಾಯುವಿಕೆ ಹಾಗೂ ವಾಹನ ದಟ್ಟಣೆಗೆ ಶಾಶ್ವತ ಪರಿಹಾರ ಸಿಗಲಿದ್ದು, ವಾಹನ ಸವಾರರಿಗೆ ಸಮಯ ಉಳಿತಾಯವಾಗಲಿದೆ.
ಪ್ರಾದೇಶಿಕ ಅಭಿವೃದ್ಧಿ: ಸುಧಾರಿತ ಸಾರಿಗೆ ಸಂಪರ್ಕದಿಂದ ಚಿತ್ರದುರ್ಗ ಹಾಗೂ ಚಿಕ್ಕಜಾಜೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳಿಗೆ ವೇಗ ಸಿಗಲಿದೆ.
ಭಾರತೀಯ ರೈಲ್ವೆಯನ್ನು ಆಧುನೀಕರಣಗೊಳಿಸುವ ಮತ್ತು ಪ್ರಯಾಣಿಕರಿಗೆ ಸುರಕ್ಷಿತ, ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿರಂತರ ಶ್ರಮದ ಭಾಗವಾಗಿ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಸ್ಥಳೀಯ ಸಾರ್ವಜನಿಕರು, ಪ್ರಯಾಣಿಕರು ಹಾಗೂ ರಸ್ತೆ ಬಳಕೆದಾರರು ಪೂರ್ಣ ಸಹಕಾರ ನೀಡಬೇಕಾಗಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್ ಧರ್ಮರಾಜ್ ಕಾಳಗೊಂಡ ಅವರು ವಿನಂತಿಸಿದ್ದಾರೆ.




