ಚಂದ್ರವಳ್ಳಿ ನ್ಯೂಸ್, ವಿಜಯಪುರ:
ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದ ಆಲಮೇಲ ತಾಲ್ಲೂಕಿನ ಮೊರಟಗಿ ಗ್ರಾಮದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ನಿನ್ನೆ ರಾತ್ರಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು, ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಈ ದಾರುಣ ಘಟನೆ ಇಡೀ ಜಿಲ್ಲೆಯನ್ನು ಕಂಗೆಡಿಸಿದೆ.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಅವರು ಪರಿಸ್ಥಿತಿ ಪರಿಶೀಲನೆ ನಡೆಸಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಸಚಿವರ ಭೇಟಿ, ಪರಿಶೀಲನೆ:
ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಸಚಿವ ಎಂ.ಬಿ. ಪಾಟೀಲ್ ಅವರು ಸ್ಥಳೀಯ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ರಮೇಶ್ ಭೂಸನೂರ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಮೊರಟಗಿ ಗ್ರಾಮಕ್ಕೆ ಭೇಟಿ ನೀಡಿದರು. ಘಟನಾ ಸ್ಥಳವನ್ನು ವೀಕ್ಷಿಸಿದ ಸಚಿವರು, ಮೃತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ತೀವ್ರ ಕರಳುಬೆನೆ ವ್ಯಕ್ತಪಡಿಸಿದರು.
"ಮನೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವುದು ನನ್ನ ಮನಕಲಕಿದೆ. ತಕ್ಷಣವೇ ಕಾರ್ಯಪ್ರವೃತ್ತರಾಗಿ ಸಂತ್ರಸ್ತರಿಗೆ ಅಗತ್ಯ ನೆರವು ಮತ್ತು ತಕ್ಷಣದ ಪರಿಹಾರ ಕಾರ್ಯಗಳನ್ನು ವೇಗವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ," ಎಂದು ಸಚಿವರು ತಿಳಿಸಿದರು.
ಏಕೈಕ ಮಗುವಿನ ರಕ್ಷಣೆಗೆ ನಿಂತ ಸರ್ಕಾರ: 20 ಲಕ್ಷ ಠೇವಣಿ
ಈ ಭೀಕರ ದುರಂತದಲ್ಲಿ ಇಡೀ ಕುಟುಂಬವನ್ನು ಕಳೆದುಕೊಂಡು ಕೇವಲ ಒಂದು ಮಗು ಮಾತ್ರ ಪವಾಡಸದೃಶವಾಗಿ ಬದುಕುಳಿದಿದೆ. ಅನಾಥವಾಗಿರುವ ಈ ಮಗುವಿನ ಭವಿಷ್ಯಕ್ಕೆ ನೆರವಾಗಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಸ್ಥಿರ ಠೇವಣಿ: ಮಗುವಿನ ಹೆಸರಿನಲ್ಲಿ ಸರ್ಕಾರದಿಂದ 20 ಲಕ್ಷ ರೂಪಾಯಿಗಳ ಮುದ್ದತಿ ಠೇವಣಿ (FD) ಇಡಲಾಗುವುದು.
ಸಂಪೂರ್ಣ ಜವಾಬ್ದಾರಿ: ಮಗುವಿನ ಶಿಕ್ಷಣ, ಆರೈಕೆ ಹಾಗೂ ಉತ್ತಮ ಬದುಕಿಗಾಗಿ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ನೆರವು ಮತ್ತು ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಸಚಿವರ ಸಂತಾಪ:
"ಅಗಲಿದ ಆತ್ಮಗಳಿಗೆ ಭಗವಂತ ಚಿರಶಾಂತಿ ನೀಡಲಿ ಮತ್ತು ಈ ತೀವ್ರ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಇಂತಹ ಹೃದಯವಿದ್ರಾವಕ ಘಟನೆಗಳು ಮತ್ತೆಂದೂ ಮರುಕಳಿಸದಿರಲಿ," ಎಂದು ಸಚಿವ ಎಂ.ಬಿ. ಪಾಟೀಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.



