ಚಂದ್ರವಳ್ಳಿ ನ್ಯೂಸ್, ರಾಮನಗರ:
ಬೆಂಗಳೂರಿನಿಂದ 100 ಕಿ.ಮೀ. ವ್ಯಾಪ್ತಿಯಲ್ಲಿರುವ ಪ್ರಮುಖ ನಗರಗಳಿಗೆ ಹಾಗೂ ಕರಾವಳಿಯ ಬಂದರು ನಗರಿ ಮಂಗಳೂರಿಗೆ ಚತುಷ್ಪಥ (ನಾಲ್ಕು ಪಥಗಳ) ರೈಲ್ವೆ ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಪ್ರಕಟಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಎಲೆಕೇರಿ ಬಳಿ ನೂತನವಾಗಿ ನಿರ್ಮಿಸಿರುವ ರಸ್ತೆ ಮೇಲ್ಸೇತುವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದಲ್ಲಿ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಮಂಡಿಸಿದ ಕರ್ನಾಟಕದ ರೈಲ್ವೆ ಬೇಡಿಕೆಗಳಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಪ್ರಮುಖ ರೈಲ್ವೆ ಯೋಜನೆಗಳ ಅಪ್‌ಡೇಟ್ಸ್:
ಬೆಂಗಳೂರು - ತುಮಕೂರು ಮಾರ್ಗ: ಈ ಚತುಷ್ಪಥ ಮಾರ್ಗದ ಸಮೀಕ್ಷೆ (ಸರ್ವೇ) ಈಗಾಗಲೇ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಮುಂದಿನ ಒಂದೂವರೆ ಇಂದ ಎರಡು ವರ್ಷಗಳಲ್ಲಿ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ.
ಬೆಂಗಳೂರು - ಮೈಸೂರು ಮಾರ್ಗ: ಈ ಭಾಗದಲ್ಲೂ ಚತುಷ್ಪಥ ರೈಲು ಮಾರ್ಗ ನಿರ್ಮಾಣಕ್ಕಾಗಿ ಶೀಘ್ರದಲ್ಲೇ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
ಇತರ ನಗರಗಳಿಗೆ ಸಂಪರ್ಕ: ಬೆಂಗಳೂರಿನಿಂದ ಗೌರಿಬಿದನೂರು ಮಾರ್ಗವಾಗಿ ಹಿಂದೂಪುರ ಹಾಗೂ ಕೋಲಾರಕ್ಕೂ ಚತುಷ್ಪಥ ಹಳಿ ನಿರ್ಮಿಸುವ ಬೇಡಿಕೆಯನ್ನು ಪರಿಗಣಿಸಲಾಗುವುದು.
ಬೆಂಗಳೂರು - ಮಂಗಳೂರು ಚತುಷ್ಪಥಕ್ಕೆ ಆದ್ಯತೆ:
ರಾಜಧಾನಿ ಮತ್ತು ಕರಾವಳಿ ನಡುವೆ ತ್ವರಿತ ರೈಲು ಸಂಚಾರಕ್ಕಾಗಿ ಸಕಲೇಶಪುರ-ಗುಂಡ್ಯ ನಡುವೆ ಸಮಾನಾಂತರವಾಗಿ ರಸ್ತೆ ಮತ್ತು ರೈಲು ಮಾರ್ಗ ನಿರ್ಮಿಸಬೇಕೆಂಬ ಎಂ.ಬಿ. ಪಾಟೀಲ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಸೋಮಣ್ಣ, "ಇದು ಅತ್ಯಂತ ಉಪಯುಕ್ತ ಸಲಹೆಯಾಗಿದೆ. ಮಂಗಳೂರಿಗೆ ಚತುಷ್ಪಥ ರೈಲು ಸಂಪರ್ಕ ಕಲ್ಪಿಸುವುದರಿಂದ ಆರ್ಥಿಕವಾಗಿ ಅನೇಕ ಪ್ರಯೋಜನಗಳಾಗಲಿದ್ದು, ಇದು ನಮ್ಮ ಆದ್ಯತೆಯಾಗಿದೆ," ಎಂದರು.
ವಿಶೇಷ ರೈಲಿನಲ್ಲಿ ಸಚಿವರಿಬ್ಬರ ಜಂಟಿ ಪರಿಶೀಲನೆ:
ರೈಲ್ವೆ ಮೂಲಸೌಕರ್ಯದ ಗುಣಮಟ್ಟ ಮತ್ತು ಸುರಕ್ಷತೆಯನ್ನು ಪರಿಶೀಲಿಸಲು ಬಳಸುವ SPIC ಎಂಬ ವಿಶೇಷ ರೈಲ್ವೆ ವಾಹನದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ರಾಜ್ಯ ಸಚಿವ ಎಂ.ಬಿ. ಪಾಟೀಲ್ ಅವರು ಬೆಂಗಳೂರಿನಿಂದ ಚನ್ನಪಟ್ಟಣದವರೆಗೆ ಒಟ್ಟಿಗೆ ಪ್ರಯಾಣಿಸಿದರು.
ಮನವಿ ಪತ್ರ ಹಸ್ತಾಂತರ:
ಪ್ರಯಾಣದ ಅವಧಿಯಲ್ಲಿ ಕರ್ನಾಟಕದಲ್ಲಿ ಸದ್ಯ ಪ್ರಗತಿಯಲ್ಲಿರುವ ಹಾಗೂ ಪ್ರಸ್ತಾವಿತ ರೈಲ್ವೆ ಯೋಜನೆಗಳ ಕುರಿತು ಇಬ್ಬರೂ ಸಚಿವರು ಸುದೀರ್ಘ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ರಾಜ್ಯದ ರೈಲ್ವೆ ಬೇಡಿಕೆಗಳ ಅಧಿಕೃತ ಪತ್ರವನ್ನು ಎಂ.ಬಿ. ಪಾಟೀಲ್ ಅವರು ಕೇಂದ್ರ ಸಚಿವರಿಗೆ ಹಸ್ತಾಂತರಿಸಿದರು.
ರಾಮೋಹಳ್ಳಿ ರೈಲ್ವೆ ಕಾಮಗಾರಿ ವೀಕ್ಷಣೆ:
ಚನ್ನಪಟ್ಟಣಕ್ಕೆ ತೆರಳುವ ಮಾರ್ಗ ಮಧ್ಯೆ ಇಬ್ಬರೂ ಸಚಿವರು ಬೆಂಗಳೂರಿನ ಕುಂಬಳಗೋಡು ಸಮೀಪದ ರಾಮೋಹಳ್ಳಿಯಲ್ಲಿ ನಡೆಯುತ್ತಿರುವ ರೈಲ್ವೆ ಕೆಳ ಸೇತುವೆ ಕಾಮಗಾರಿಯನ್ನು ವೀಕ್ಷಿಸಿದರು. ಮಳೆಗಾಲದಲ್ಲಿ ಇಲ್ಲಿ ನೀರು ನಿಲ್ಲದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಿ, ತ್ವರಿತವಾಗಿ ಕೆಲಸ ಮುಗಿಸುವಂತೆ ಅಧಿಕಾರಿಗಳಿಗೆ ಜಂಟಿ ಸೂಚನೆ ನೀಡಿದರು.



