ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ:
ಜಮೀನು ಮಾರಾಟದ ಹಣ ಸರಿಯಾಗಿ ಕೈಸೇರದೆ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಮರಳುಕುಂಟೆ ರಾಮಾಂಜಿನಪ್ಪ (ಆತ್ಮಹತ್ಯೆಗೆ ಶರಣಾಗಿದ್ದಾರೆ/ಅಂತ್ಯ ಕಂಡಿದ್ದಾರೆ).
ನಗರದ ವಾಪಸಂದ್ರ ಬಡಾವಣೆಯ ಹಾಲು ಉತ್ಪಾದಕರ ಸಹಕಾರ ಸಂಘದ (ಡೈರಿ) ಮೇಲ್ಭಾಗದಲ್ಲಿರುವ ರೈತ ಸಂಘದ ಕಚೇರಿಯ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಆತ್ಮಹತ್ಯೆಗೂ ಮುನ್ನ ರಾಮಾಂಜಿನಪ್ಪ ಅವರು ಡೆತ್‌ನೋಟ್‌ಬರೆದಿಟ್ಟಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜಮೀನು ಮಾರಾಟದ ಬಾಕಿ ಹಣ ಬಾರದೇ ತೀವ್ರ ಮಾನಸಿಕ ನೊಂದಿದ್ದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಘಟನೆಯ ಹಿನ್ನೆಲೆ: ರಾಮಾಂಜಿನಪ್ಪ ಅವರು ತಮ್ಮ ಮಾಲೀಕತ್ವದ 35 ಗುಂಟೆ ಜಮೀನನ್ನು ರವೀಂದ್ರರೆಡ್ಡಿ ಎಂಬುವರಿಗೆ ಒಟ್ಟು ₹77 ಲಕ್ಷಕ್ಕೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ ರವೀಂದ್ರರೆಡ್ಡಿ ಮುಂಗಡ ಹಾಗೂ ಕಂತುಗಳ ರೂಪದಲ್ಲಿ ಕೇವಲ ₹57.50 ಲಕ್ಷ ಮಾತ್ರ ಪಾವತಿಸಿದ್ದರು. ಬಾಕಿ ಉಳಿದಿದ್ದ ₹19.50 ಲಕ್ಷ ರೂಪಾಯಿಯನ್ನು ನೀಡದೆ ಕಳೆದ 10 ತಿಂಗಳುಗಳಿಂದ ಸತಾಯಿಸುತ್ತಾ ಕಾಲಹರಣ ಮಾಡುತ್ತಿದ್ದರೆನ್ನಲಾಗಿದೆ.
ಬರಬೇಕಾದ ಹಣ ಕೈಸೇರದೆ, ತೀವ್ರ ಆರ್ಥಿಕ ಸಂಕಷ್ಟ ಹಾಗೂ ಹತಾಶೆಗೆ ಒಳಗಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಪತ್ತೆಯಾದ ಡೆತ್‌ನೋಟ್ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.




