ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಜವಗೊಂಡನಹಳ್ಳಿ ಸಮೀಪವಿರುವ ಶಾಹಿ ಹಾಗೂ ಎಎಂಡಿ ಗಾರ್ಮೆಂಟ್ಸ್ ಬಳಿ, ಕೇಂದ್ರ ಸರ್ಕಾರದ ನೂತನ ಪ್ರಾವಿಡೆಂಟ್ ಫಂಡ್ ನಿಯಮವನ್ನು ವಿರೋಧಿಸಿ ಕಾರ್ಮಿಕರು, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕಾಂಗ್ರೆಸ್ ಮುಖಂಡ ಸಿ.ಬಿ. ಪಾಪಣ್ಣ ನೇತೃತ್ವದಲ್ಲಿ ಮಂಗಳವಾರ ತೀವ್ರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ಬಳಿಕ ತಾಲೂಕು ತಹಶೀಲ್ದಾರ್ ಎಂ. ಸಿದ್ದೇಶ್ ಅವರಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸಿ.ಬಿ ಪಾಪಣ್ಣ, ಈ ಭಾಗದಲ್ಲಿ ಕೈಗಾರಿಕಾ ಗಾರ್ಮೆಂಟ್ಸ್ ತರಲು ತಾವು ಹಿಂದೆ ಶ್ರಮಿಸಿದ್ದಾಗಿ ಸ್ಮರಿಸಿದರು. ಪ್ರಸ್ತುತ ಇಲ್ಲಿ 3,000ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಹೊಸ PF ನಿಯಮ ಕಾರ್ಮಿಕರಿಗೆ ಮಾರಕವಾಗಿದೆ ಹಾಗೂ ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಗೋ. ಬಸವರಾಜ್ ಮಾತನಾಡಿ, ಕೇಂದ್ರ ಸರ್ಕಾರವು ಹೊಸ ಪಿಎಫ್ ನಿಯಮವನ್ನು ತಕ್ಷಣವೇ ವಾಪಸ್ ಪಡೆಯಬೇಕು ಮತ್ತು ಕಾರ್ಮಿಕರ ಪಿಎಫ್ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ಕರವೇ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ರಾಮಕೃಷ್ಣಪ್ಪ, ಗೌರವ ಅಧ್ಯಕ್ಷ ಗೋ. ಬಸವರಾಜ್, ಪ್ರಧಾನ ಕಾರ್ಯದರ್ಶಿ ಡಿ.ಕೆ.ಎಸ್. ದಾದಾಪೀರ್, ನಗರಾಧ್ಯಕ್ಷ ಮಹಮ್ಮದ್ ಜಾಕಿರ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಹಾಗೂ 2000ಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಂಡಿದ್ದರು.




