ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಹುಬ್ಬಳ್ಳಿ-ಧಾರವಾಡದ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಎನ್. ಭೂಷಣ್ ಬೋರಸೆ ಅವರಿಗೆ ಗಂಭೀರ ಕ್ರಿಮಿನಲ್ ಪ್ರಕರಣಗಳ ಆರೋಪಿಗಳು ಕಚೇರಿಯಲ್ಲೇ ಸನ್ಮಾನ ಮಾಡಿರುವ ಘಟನೆ ಇದೀಗ ತೀವ್ರ ವಿವಾದ ಹಾಗೂ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಎನ್. ಶಶಿಕುಮಾರ್ ಅವರ ವರ್ಗಾವಣೆಯ ನಂತರ ತೆರವಾದ ಸ್ಥಾನಕ್ಕೆ ನೂತನ ಕಮಿಷನರ್ ಆಗಿ ಭೂಷಣ್ ಬೋರಸೆ ಅಧಿಕಾರ ಸ್ವೀಕರಿಸಿದ್ದರು. ಈ ಶುಭಕೋರುವ ನೆಪದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿಯಾಗಿರುವ ಅಮಿತ್ ಬದ್ದಿ, ಆಯುಕ್ತರ ಕಚೇರಿಗೆ ತೆರಳಿ ಸನ್ಮಾನ ಮಾಡಿದ್ದಾನೆ. ಇದರ ಬೆನ್ನಲ್ಲೇ, ಎನ್ಡಿಪಿಎಸ್ (ಮಾದಕ ವಸ್ತು ನಿಯಂತ್ರಣ ಕಾಯ್ದೆ) ಪ್ರಕರಣದಲ್ಲಿ ಆರೋಪಿಯಾಗಿರುವ ಖೇತ್ಸಿಂಗ್ ರಾಜಪುರೋಹಿತ ಕೂಡ ನೂತನ ಕಮಿಷನರ್ಗೆ ಹೂಗುಚ್ಛ ನೀಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಹೇಳಿಕೆಗೂ, ಘಟನೆಗೂ ವ್ಯತಿರಿಕ್ತತೆ:
ಅಧಿಕಾರ ವಹಿಸಿಕೊಂಡ ಕೂಡಲೇ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಡ್ರಗ್ಸ್ ದಂಧೆ ಹಾಗೂ ಅಪರಾಧ ಚಟುವಟಿಕೆಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಭೂಷಣ್ ಬೋರಸೆ ಖಡಕ್ ಎಚ್ಚರಿಕೆ ನೀಡಿದ್ದರು. ಆದರೆ, ಈ ಎಚ್ಚರಿಕೆ ನೀಡಿದ ಬೆನ್ನಲ್ಲೇ ಡ್ರಗ್ಸ್ ಪ್ರಕರಣದ ಆರೋಪಿಯಿಂದಲೇ ಅವರು ಸನ್ಮಾನಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿಯ ಜೊತೆಗೆ ವ್ಯಂಗ್ಯಕ್ಕೂ ಗುರಿಯಾಗಿದೆ.
ಸಾಮಾನ್ಯವಾಗಿ ಅಪರಾಧ ಹಿನ್ನೆಲೆ ಉಳ್ಳವರು ಪೊಲೀಸ್ ಠಾಣೆ ಅಥವಾ ಆಯುಕ್ತರ ಕಚೇರಿಯತ್ತ ಸುಳಿಯಲು ಭಯಪಡುತ್ತಾರೆ. ಆದರೆ, ಇಂತಹ ಗಂಭೀರ ಪ್ರಕರಣಗಳ ಆರೋಪಿಗಳು ರಾಜಾರೋಷವಾಗಿ ಕಮಿಷನರ್ ಕಚೇರಿಗೆ ಪ್ರವೇಶಿಸಿ ಹೂಗುಚ್ಛ ನೀಡಿ ಫೋಟೋಗೆ ಪೋಸ್ ಕೊಡುವಷ್ಟು ಧೈರ್ಯ ತೋರಿರುವುದು ಪೊಲೀಸ್ ವ್ಯವಸ್ಥೆಯ ಭದ್ರತೆ ಹಾಗೂ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.




