ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೈಸ್ ರಸ್ತೆ ಯೋಜನೆಗೆ ಭೂಮಿ ನೀಡಿ ಕಳೆದ 25 ವರ್ಷಗಳಿಂದ ಸೂಕ್ತ ಪರಿಹಾರ ಸಿಗದೆ ವಂಚಿತರಾಗಿದ್ದ ರೈತರಿಗೆ ಕೊನೆಗೂ ದೊಡ್ಡ ಮಟ್ಟದ ಸಮಾಧಾನ ಸಿಕ್ಕಿದೆ. ಭೂಮಿ ನೀಡಿದ ರೈತರಿಗೆ 1 ಎಕರೆಗೆ ಗರಿಷ್ಠ 15 ಅಭಿವೃದ್ಧಿಪಡಿಸಿದ ನಿವೇಶನಗಳನ್ನು (ಸೈಟ್) ಪರಿಹಾರವಾಗಿ ನೀಡಲು ಗೃಹ ಸಚಿವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಸಕ್ಷಮ ಪ್ರಾಧಿಕಾರದಿಂದ ಅಗತ್ಯ ಅನುಮತಿಗಳನ್ನು ಪಡೆದುಕೊಂಡು ಪರಿಹಾರ ರೂಪದಲ್ಲಿ ಈ ನಿವೇಶನಗಳನ್ನು ರೈತರಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಉಪಸಮಿತಿಯು ಕೈಗೊಂಡಿರುವ ಈ ಶಿಫಾರಸು ಹಾಗೂ ತೀರ್ಮಾನವನ್ನು ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟ ಸಭೆಯ ಮುಂದೆ ಮಂಡಿಸಿ ಅಂತಿಮ ಅನುಮೋದನೆ ಪಡೆಯಲಾಗುವುದು.
ಹೈಕೋರ್ಟ್ ತೀವ್ರ ತರಾಟೆ: ನೈಸ್ ರಸ್ತೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ಕಾಲು ಶತಮಾನ (25 ವರ್ಷ) ಕಳೆದರೂ ಪರಿಹಾರ ನೀಡದಿರುವುದನ್ನು ಕಂಡು ಇತ್ತೀಚೆಗಷ್ಟೇ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.
ಸಂತ್ರಸ್ತ ರೈತರಿಗೆ ಪರಿಹಾರ ನೀಡದೆ ವಿಳಂಬ ಮಾಡುತ್ತಿರುವ ಸರ್ಕಾರದ ಕ್ರಮವನ್ನು "ಅಮಾನವೀಯ" ಎಂದು ಕಟುವಾಗಿ ಟೀಕಿಸಿ ತರಾಟೆಗೆ ತೆಗೆದುಕೊಂಡಿತ್ತು. ನ್ಯಾಯಾಲಯದ ಈ ಚಾಟಿ ಹಾಗೂ ರೈತರ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಜಾಗೃತಗೊಂಡ ಸರ್ಕಾರ, ಸಂಪುಟ ಉಪಸಮಿತಿ ಮೂಲಕ ಈ ದಿಟ್ಟ ಪರಿಹಾರ ಸೂತ್ರವನ್ನು ಕಂಡುಕೊಂಡಿದೆ.




