ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಯೊಬ್ಬರ ವರ್ಚಸ್ಸಿಗೆ ಹನಿಟ್ರ್ಯಾಪ್ ಹೆಸರಿನಲ್ಲಿ ಮಸಿ ಬಳಿಯಲು ರೂಪಿಸಿದ್ದ ವ್ಯವಸ್ಥಿತ ಷಡ್ಯಂತ್ರವನ್ನು ಪ್ರಶ್ನಿಸಿದ್ದಕ್ಕೆ, ನಮ್ಮ ಪಕ್ಷದ ಸಾಮಾಜಿಕ ಜಾಲತಾಣದ ಯುವ ಕಾರ್ಯಕರ್ತರನ್ನು ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯ ಅಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಅಧಿಕೃತ ಪ್ರಕರಣ ದಾಖಲಿಸದೆ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಶಂಕರ್ ಎಂಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿರುವುದಲ್ಲದೆ, ಮತ್ತೊಬ್ಬ ಕಾರ್ಯಕರ್ತ ಮೋಹನ್ ಹಾಗೂ ಅವರ ಕುಟುಂಬದವರಿಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಕುಮಾರಸ್ವಾಮಿ ಅವರ ಪ್ರಮುಖ ಆರೋಪಗಳು ಮತ್ತು ಆಕ್ರೋಶದ ನುಡಿಗಳು: ಅಮಾಯಕರ ಮೇಲೆ ಪೊಲೀಸರ ದೌರ್ಜನ್ಯ: ಯಾವುದೇ ಕಾನೂನುಬದ್ಧ ಪ್ರಕರಣ ದಾಖಲಿಸದೆ ಬೆಳ್ಳಂಬೆಳಗ್ಗೆ ಜೆಡಿಎಸ್ ಸೋಶಿಯಲ್ ಮೀಡಿಯಾ ಕಾರ್ಯಕರ್ತ ಶಂಕರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಂತರ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪಕ್ಷದ ಕಾನೂನು ವಿಭಾಗದವರು ದೂರು ದಾಖಲಿಸಿದ ಮೇಲೆ, ಆ ಯುವಕನಿಂದಲೇ ಆತನ ಪತ್ನಿಗೆ ಕರೆ ಮಾಡಿಸಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದಷ್ಟೇ ಹೇಳಿಸಿ ಕರೆ ಕಟ್ ಮಾಡಲಾಗಿದೆ. ಇದು ಸರ್ಕಾರದ ಕಪಟ ನಾಟಕ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ನೈಜ ಅಪರಾಧಿಯನ್ನು ಬಿಟ್ಟು ಹುಡುಗರ ಬೆನ್ನತ್ತಿದ್ದಾರೆ: ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ನಡೆಸಿ, ದೃಶ್ಯಗಳನ್ನು ಚಿತ್ರೀಕರಿಸಿ ಚಾರಿತ್ರ್ಯಹರಣಕ್ಕೆ ಕಾರಣನಾದ ನೀಚನನ್ನು ಬಿಟ್ಟು, ಆ ನೀಚತನವನ್ನು ಪ್ರಶ್ನಿಸಿದ ತಮ್ಮನ್ನು ನೇರವಾಗಿ ಎದುರಿಸಲಾಗದೆ ಸೋಶಿಯಲ್ ಮೀಡಿಯಾ ಹುಡುಗರ ಮೇಲೆ ಪ್ರತಾಪ ತೋರಿಸಲಾಗುತ್ತಿದೆ ಎಂದು ದೂರಿದ್ದಾರೆ.
ಮಾಧ್ಯಮದ ಮುಸುಕುಧಾರಿ ಸಂಚುಕೋರ ಮುಕ್ತ: ಎಲ್ಲವನ್ನೂ ರೆಕಾರ್ಡ್ ಮಾಡಿ ಈ ಕೃತ್ಯವೆಸಗಿದ 'ಮಾಧ್ಯಮದ ಮುಸುಕು' ಹಾಕಿಕೊಂಡಿರುವ ಸಂಚುಕೋರ ರಾಜಾರೋಷವಾಗಿ ತಿರುಗಾಡುತ್ತಿದ್ದರೆ, ಆ ನೈಜ ಅಪರಾಧಿಯನ್ನು ಮುಟ್ಟದೆ ನಮ್ಮ ಕಾರ್ಯಕರ್ತರ ಮೇಲೆ ಬಿದ್ದಿರುವುದು ಲಜ್ಜೆಗೆಡಿತನ ಎಂದಿದ್ದಾರೆ.
ನನ್ನ ಬಳಿ ಬರಲಿ, ಅಮಾಯಕರೇಕೆ?: "ಪ್ರಶ್ನೆ ಮಾಡಿದ್ದು ನಾನು, ಸಿಬಿಐ ತನಿಖೆಗೆ ಒತ್ತಾಯಿಸಿದ್ದು ನಾನು. ಧೈರ್ಯವಿದ್ದರೆ ನನ್ನ ಬಳಿಗೇ ನಿಮ್ಮ ಪೊಲೀಸರನ್ನು ಕಳಿಸಬೇಕಿತ್ತು, ಅಮಾಯಕರ ಮೇಲೇನು ನಿಮ್ಮ ಪ್ರತಾಪ?" ಎಂದು ಪ್ರಶ್ನಿಸಿರುವ ಅವರು, ಈಗ ಮತ್ತೊಬ್ಬ ಕಾರ್ಯಕರ್ತ ಮೋಹನ್ ಮನೆ ಮುಂದೆ ಪೊಲೀಸರು ಗಲಾಟೆ ಮಾಡಿ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ಕೈಕಟ್ಟಿ ಕೂರುವುದಿಲ್ಲ - ಹೆಚ್ಡಿಕೆ ಎಚ್ಚರಿಕೆ:
ನಮ್ಮವರಿಗೆ ಸುಖಾಸುಮ್ಮನೆ ಕಿರುಕುಳ ನೀಡಿದರೆ ಯಾವುದೇ ಕಾರಣಕ್ಕೂ ಸುಮ್ಮನೆ ಕೂರುವುದಿಲ್ಲ. ಇದನ್ನು ರಾಜಕೀಯವಾಗಿಯೂ ಹಾಗೂ ಕಾನೂನಾತ್ಮಕವಾಗಿಯೂ ಗಟ್ಟಿಯಾಗಿ ಎದುರಿಸಲು ಸಿದ್ಧರಿದ್ದೇವೆ ಎಂದು ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಕಡಕ್ ಎಚ್ಚರಿಕೆ ನೀಡಿದ್ದಾರೆ.




