ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಜ್ಯೋತಿ’ ಉಚಿತ ವಿದ್ಯುತ್ ಯೋಜನೆಯ ಫಲಾನುಭವಿಗಳ ಮರು ಪರಿಶೀಲನೆಯ (Re-verification) ಗಡುವನ್ನು ಇಂಧನ ಇಲಾಖೆಯು ವಿಸ್ತರಿಸಿ ಆದೇಶ ಹೊರಡಿಸಿದೆ.
ಅರ್ಹ ಫಲಾನುಭವಿಗಳು ಮರು ಪರಿಶೀಲನೆ ಅರ್ಜಿ ಸಲ್ಲಿಸಲು ಮತ್ತೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಸೆಪ್ಟೆಂಬರ್ 30 ಅನ್ನು ಅಂತಿಮ ದಿನಾಂಕವಾಗಿ ನಿಗದಿಪಡಿಸಲಾಗಿದೆ.ಗೃಹಜ್ಯೋತಿ ಯೋಜನೆ ಆರಂಭವಾಗಿ ಮೂರು ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ, ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ಹೊರಗಿಡಲು ಹಾಗೂ ಅರ್ಹರನ್ನು ಗುರುತಿಸಲು ಸರ್ಕಾರವು ಈ ಪರಿಶೀಲನೆಗೆ ಸೂಚನೆ ನೀಡಿತ್ತು.
ಮೊದಲಿಗೆ ಜುಲೈ 31 ರವರೆಗೆ ಗಡುವು ನೀಡಲಾಗಿತ್ತಾದರೂ, ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಅದನ್ನು ಆಗಸ್ಟ್ ಅಂತ್ಯದವರೆಗೆ ವಿಸ್ತರಿಸಲಾಗಿತ್ತು. ಆದಾಗ್ಯೂ, ಇನ್ನೂ ಲಕ್ಷಾಂತರ ಫಲಾನುಭವಿಗಳು ಅರ್ಜಿ ಸಲ್ಲಿಕೆಯಿಂದ ದೂರ ಉಳಿದಿರುವುದರಿಂದ ಸೆಪ್ಟೆಂಬರ್ ಅಂತ್ಯದವರೆಗೂ ಮತ್ತೊಮ್ಮೆ ಕಾಲಾವಕಾಶ ನೀಡಲಾಗಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ 22 ಲಕ್ಷ ಫಲಾನುಭವಿಗಳು ಬಾಕಿ: ಬೆಸ್ಕಾಂ (BESCOM) ವ್ಯಾಪ್ತಿಯಲ್ಲಿ ಒಟ್ಟು 68 ಲಕ್ಷ ಫಲಾನುಭವಿಗಳ ಪೈಕಿ ಆಗಸ್ಟ್ ಅಂತ್ಯದ ವೇಳೆಗೆ 46 ಲಕ್ಷ ಫಲಾನುಭವಿಗಳ ಮರು ಪರಿಶೀಲನೆ ಪೂರ್ಣಗೊಂಡಿದೆ.
ವಿವಿಧ ಕಾರಣಗಳಿಂದ ಇನ್ನೂ 22 ಲಕ್ಷ ಫಲಾನುಭವಿಗಳು ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಸಿಬ್ಬಂದಿ ಮತ್ತೊಮ್ಮೆ ಮನೆ ಮನೆಗೆ ತೆರಳಿ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವಿವಿಧ ಎಸ್ಕಾಂಗಳಲ್ಲಿ ಸಲ್ಲಿಕೆಯಾದ ಮರುಪರಿಶೀಲನೆ ಅರ್ಜಿಗಳ ವಿವರ:
ಎಸ್ಕಾಂ (ESCOM)ಸಲ್ಲಿಕೆಯಾದ ಒಟ್ಟು ಅರ್ಜಿಗಳು
ಬೆಸ್ಕಾಂ (BESCOM) 46,70,588, ಹೆಸ್ಕಾಂ (HESCOM) 28,02,935, ಸೆಸ್ಕ್ (CESC) 15,80,597, ಮೆಸ್ಕಾಂ (MESCOM) 14,52,632, ಜೆಸ್ಕಾಂ (GESCOM) 12,00,851, ಹೆಚ್.ಆರ್.ಇ.ಸಿ.ಎಸ್ (HRECS) 77,904 ಒಟ್ಟು (Total) 1,17,85,507.
ಮರುಪರಿಶೀಲನೆ ಯಶಸ್ವಿಯಾಗಿದೆಯೇ ಎಂದು ತಿಳಿಯುವುದು ಹೇಗೆ?
ನೀವು ಈಗಾಗಲೇ ಗೃಹಜ್ಯೋತಿ ಮರುಪರಿಶೀಲನೆ ಅರ್ಜಿ ಸಲ್ಲಿಸಿದ್ದರೆ, ನಿಮ್ಮ ಆಗಸ್ಟ್ ತಿಂಗಳ ವಿದ್ಯುತ್ ಬಿಲ್‌ನ ಮೇಲ್ಭಾಗದಲ್ಲಿ ‘GJSURVEYED’ ಎಂದು ನಮೂದಾಗಿರುತ್ತದೆ. ಒಂದು ವೇಳೆ ನೀವು ತಡವಾಗಿ ಅರ್ಜಿ ಸಲ್ಲಿಸಿದ್ದರೆ, ಈ ವಿವರವು ಸೆಪ್ಟೆಂಬರ್ ತಿಂಗಳ ಬಿಲ್‌ನಲ್ಲಿ ನಮೂದಾಗಿ ಬರಲಿದೆ.
ಸಹಾಯವಾಣಿ ಸಂಖ್ಯೆಗಳು:ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಬೆಸ್ಕಾಂ ವ್ಯಾಪ್ತಿಯ ಗ್ರಾಹಕರು ಯಾವುದೇ ಸಂಶಯ ಅಥವಾ ಮಾಹಿತಿಗಾಗಿ ಈ ಕೆಳಗಿನ ಬೆಸ್ಕಾಂ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ: 9480816111, 9480816112, 9480816113, 9480816114.




