ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಡದಿ ಉಪನಗರ ಯೋಜನೆಯನ್ನು ವಿರೋಧಿಸಿ ಭೈರಮಂಗಲದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರು ಹಾಗೂ ರೈತ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ದಬ್ಬಾಳಿಕೆಯನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.
ಸತ್ಯಾಗ್ರಹನಿರತರನ್ನು ಪೊಲೀಸರು ಬಂಧಿಸಿ ಚನ್ನಪಟ್ಟಣ ಪೊಲೀಸ್ ಭವನದಲ್ಲಿ ಕೂಡಿಹಾಕಿದ್ದ ಸ್ಥಳಕ್ಕೆ ಭೇಟಿ ನೀಡಿದ ಹೆಚ್.ಡಿ.ಕೆ., ರೈತರೊಂದಿಗೆ ಮಾತುಕತೆ ನಡೆಸಿ, ಹಣ್ಣು ನೀಡುವ ಮೂಲಕ ಅವರ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.
ಪೊಲೀಸರ ದೌರ್ಜನ್ಯಕ್ಕೆ ಆಕ್ರೋಶ: ಪ್ರತಿಭಟನಾನಿರತ ಮಹಿಳೆಯರ ಮೇಲೆ ನಿರ್ದಯವಾಗಿ ದಬ್ಬಾಳಿಕೆ ನಡೆಸಿದ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು.
ಉನ್ನತಾಧಿಕಾರಿಗಳ ಜತೆ ಚರ್ಚೆ: ಭೈರಮಂಗಲದಲ್ಲಿ ಪೊಲೀಸ್ ದೌರ್ಜನ್ಯದ ಸಂದರ್ಭದಲ್ಲಿ ವಿಕೃತಿ ಮೆರೆದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ವಲಯದ ಉಪ ಪೊಲೀಸ್ ಮಹಾನಿರೀಕ್ಷಕರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಹೆಚ್.ಡಿ. ಕುಮಾರಸ್ವಾಮಿ ಮಾತುಕತೆ ನಡೆಸಿದರು.
ಕಠಿಣ ಎಚ್ಚರಿಕೆ: ಮುಂಬರುವ ದಿನಗಳಲ್ಲಿ ರೈತರ ಮೇಲೆ ಇಂತಹ ದೌರ್ಜನ್ಯದ ಘಟನೆಗಳು ಮರುಕಳಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಹೆಚ್.ಡಿ.ಕೆ. ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.




