ಚಂದ್ರವಳ್ಳಿ ನ್ಯೂಸ್, ತುಮಕೂರು:
"ನಾನು ಕೇಳುತ್ತಿರುವ ನಿರ್ದಿಷ್ಟ ಪ್ರಶ್ನೆಗಳಿಗೆ ನೇರವಾಗಿ ಉತ್ತರ ನೀಡದೆ, ಕೇವಲ 'ಎಕ್ಸ್' (ಟ್ವಿಟರ್) ವೇದಿಕೆಯಲ್ಲಿ ಸಬೂಬು ನೀಡಿ ಜಾರಿಕೊಳ್ಳುತ್ತಿರುವುದು ಏಕೆ?" ಎಂದು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತುಮಕೂರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರ ಕಾರ್ಯವೈಖರಿ ಹಾಗೂ ಹೇಳಿಕೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಖರ್ಗೆ ವಿರುದ್ಧ ಗಂಭೀರ ಆರೋಪ ಹಾಗೂ ಸವಾಲು:"ಸಚಿವ ಪ್ರಿಯಾಂಕ್ ಖರ್ಗೆ ಅವರು ಕ್ಯಾಮೆರಾ ಮುಂದೆ ಬಂದು ಮಾತನಾಡದೆ ಎಕ್ಸ್ ವೇದಿಕೆಯಲ್ಲಿ ಜಾರಿಕೊಳ್ಳುತ್ತಿದ್ದಾರೆ.
'ಬೆಟ್ಟ ಅಗೆದು ಇಲಿ ಹಿಡಿದಂತೆ' ಏನೋ ಬಿಡುಗಡೆ ಮಾಡಿದ್ದಾರೆ. ನೀವು ಮಾಡುತ್ತಿರುವುದೇ ಚಿತ್ರಾನ್ನ, ಇನ್ನು ಯಾರಿಗೆ ಮೃಷ್ಟಾನ್ನ ಕೊಟ್ಟಿದ್ದೀರಿ? ಮಿಸ್ಟರ್ ಪ್ರಿಯಾಂಕ್ ಖರ್ಗೆ, ನನ್ನ ಹತ್ತಿರ ನಿಮ್ಮ ಆಟ ನಡೆಯುವುದಿಲ್ಲ.
ನಾನು ಕದ್ದು ಓಡಿಹೋಗುವವನಲ್ಲ, ಪಲಾಯನ ಮಾಡುವವನೂ ಅಲ್ಲ. ಬನ್ನಿ, ನಿಮ್ಮೊಂದಿಗೆ ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ" ಎಂದು ಬಹಿರಂಗ ಸವಾಲು ಹಾಕಿದರು.
ಮುಂದುವರಿದು ಮಾತನಾಡಿದ ಅವರು, "ರೆಸಾರ್ಟ್ನಲ್ಲಿ ಕುಳಿತು ಓಎಂಆರ್ (OMR) ಶೀಟ್ ತಿದ್ದಿಸಿದ ಅಧಿಕಾರಿಯನ್ನು ದೆಹಲಿಯಿಂದ ದೇವನಹಳ್ಳಿ ರೆಸಾರ್ಟ್ಗೆ ಕರೆತಂದು ಕೂರಿಸಿಕೊಂಡು, ಆ ನಂತರ ಸಿಐಡಿ (CID) ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದು ಏಕೆ? 24 ಮಂದಿಗೆ ಉದ್ಯೋಗ ನೀಡಿದ್ದೀರಲ್ಲ, ಅವರು ಯಾರು ಯಾರ ಸಂಬಂಧಿಕರು ಎಂಬುದನ್ನು ಸ್ಪಷ್ಟಪಡಿಸಿ. ನಿರುದ್ಯೋಗಿ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ.
OMR ಶೀಟ್ಗಳನ್ನು ಕಾರ್ಬನ್ ಬಳಸಿ ತಂದಿರುವ ವಿಚಾರ ತನಿಖೆ ಹಾಗೂ ಎಫ್ಎಸ್ಎಲ್ ವರದಿಯಲ್ಲಿ ಸಾಬೀತಾಗಿದೆ. ಸತ್ಯ ಹೀಗಿರುವಾಗ ನೀವು ಅಕ್ರಮವನ್ನು ಸಮರ್ಥಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ" ಎಂದು ಕಿಡಿಕಾರಿದರು.
ದೆಹಲಿಯಲ್ಲಿ ಸುದೀರ್ಘ ಸುದ್ದಿಗೋಷ್ಠಿ: ಪ್ರಕರಣವನ್ನು ಇಲ್ಲಿಗೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದ ಕೇಂದ್ರ ಸಚಿವರು, "ನಾಳೆ ದೆಹಲಿಯಲ್ಲಿ ಈ ಅಕ್ರಮಕ್ಕೆ ಸಂಬಂಧಿಸಿದಂತೆ ಸುದೀರ್ಘವಾಗಿ ಮಾಧ್ಯಮಗಳ ಮುಂದೆ ಎಲ್ಲಾ ದಾಖಲೆಗಳೊಂದಿಗೆ ಮಾತನಾಡುತ್ತೇನೆ. ಲಕ್ಷಾಂತರ ನಿರುದ್ಯೋಗಿ ಯುವಕರ ಹಿತಬಲಿಕೊಡಲು ನಾವು ಬಿಡುವುದಿಲ್ಲ" ಎಂದು ಎಚ್ಚರಿಸಿದರು.
2028ರ ಚುನಾವಣೆಗೆ ರಾಜ್ಯ ರಾಜಕಾರಣಕ್ಕೆ ವಾಪಸ್ – ಡಿಕೆಶಿಗೆ ಟಾಂಗ್! ರಾಜ್ಯ ರಾಜಕಾರಣಕ್ಕೆ ಮರಳುವಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, "ನಾನು ಖಂಡಿತ ರಾಜ್ಯ ರಾಜಕಾರಣಕ್ಕೆ ಮರಳುತ್ತೇನೆ, ಆದರೆ ಅದು ಈಗ ಅಲ್ಲ, 2028ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ. ಮುಂದಿನ ಏಳೂವರೆ ವರ್ಷ ತಾನೇ ಗೂಟ ಹೊಡೆದುಕೊಂಡು ಇರುತ್ತೇನೆ ಎಂದು ಕೆಲವರು ಬೀಗುತ್ತಿದ್ದಾರೆ. ಆಗ ನೋಡೋಣ ಯಾರ ಗೂಟ ಇರುತ್ತೋ ಅಥವಾ ಜನರೇ ಯಾರ ಗೂಟ ಕಿತ್ತಾಕುತ್ತಾರೋ" ಎಂದು ಹೇಳುವ ಮೂಲಕ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.




