ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಲ್ಲಿ ನಟ ದರ್ಶನ್ಗೆ ಹೈಕೋರ್ಟ್ನಿಂದ ಮಹತ್ವದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಪ್ರಕರಣದ ಎ14 ಆರೋಪಿ ಪ್ರದೋಷ್ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿದ್ದ 59ನೇ ಸೆಷನ್ಸ್ ಕೋರ್ಟ್ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಸೆಷನ್ಸ್ ಕೋರ್ಟ್ ಪ್ರದೋಷ್ನನ್ನು ಮಾಫಿ ಸಾಕ್ಷಿಯನ್ನಾಗಿ ಮಾಡಲು ಅನುಮತಿ ನೀಡಿದ್ದನ್ನು ವಿರೋಧಿಸಿ, ಪ್ರಕರಣದ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ನಿನ್ನೆ ಕಾಯ್ದಿರಿಸಿದ್ದ ಆದೇಶವನ್ನು ಇಂದು ಪ್ರಕಟಿಸಿದ್ದು, ದರ್ಶನ್ ಅವರ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ.
ಹೈಕೋರ್ಟ್ ನೀಡಿದ ಆದೇಶದಲ್ಲೇನಿದೆ?:
ಮರು ಆದೇಶಕ್ಕೆ ಸೂಚನೆ: ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಪ್ರದೋಷ್ ಮಾಫಿ ಸಾಕ್ಷಿಯಾಗುವ ಕುರಿತು ವಿಚಾರಣಾ ನ್ಯಾಯಾಲಯವೇ (ಸೆಷನ್ಸ್ ಕೋರ್ಟ್) ಮತ್ತೊಮ್ಮೆ ಪರಿಶೀಲಿಸಿ ಹೊಸದಾಗಿ ಆದೇಶ ಹೊರಡಿಸುವಂತೆ ಸೂಚಿಸಿದೆ.
ಮರು ವಿಚಾರಣೆ ಅಗತ್ಯವಿಲ್ಲ: ಈ ವಿಷಯವಾಗಿ ಹೊಸದಾಗಿ ಯಾವುದೇ ವಿಚಾರಣೆ ನಡೆಸುವ ಅಗತ್ಯವಿಲ್ಲ. ನ್ಯಾಯಾಲಯವು ದಾಖಲೆಗಳನ್ನು ಮರುಪರಿಶೀಲಿಸಿ ಒಂದು ವಾರದೊಳಗೆ ಹೊಸ ಆದೇಶ ಪ್ರಕಟಿಸಬೇಕೆಂದು ನಿರ್ದೇಶಿಸಿದೆ.
ಹೇಳಿಕೆಗೆ ತಡೆ ಇಲ್ಲ: ಪ್ರದೋಷ್ ಈಗಾಗಲೇ ನೀಡಿರುವ ಮಾಫಿ ಸಾಕ್ಷಿ ಹೇಳಿಕೆಗೆ ಹೈಕೋರ್ಟ್ ಯಾವುದೇ ತಡೆ ನೀಡಿಲ್ಲ.
ಪ್ರಸ್ತುತ ವಿಚಾರಣಾ ನ್ಯಾಯಾಲಯವು ಹೈಕೋರ್ಟ್ನ ಮಾರ್ಗದರ್ಶನದಂತೆ ಕೇವಲ ಮರು ಆದೇಶ ಪ್ರಕಟಿಸಬೇಕಿದ್ದು, ಮುಂದಿನ ಹಂತದಲ್ಲಿ ಕೋರ್ಟ್ ಯಾವ ತೀರ್ಮಾನ ತಳೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.




