ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದಲ್ಲಿ ಅಕ್ಟೋಬರ್ 03ರಂದು ಜರುಗಲಿರುವ ಐತಿಹಾಸಿಕ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆಯನ್ನು ಅತ್ಯಂತ ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನಡೆಸಲು ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿಯ ಶೋಭಾಯಾತ್ರೆಯಲ್ಲಿ ಸುಮಾರು 3 ರಿಂದ 4 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಯಾವುದೇ ಲೋಪಗಳಿಗೆ ಅವಕಾಶವಿಲ್ಲದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು.
ಬೃಹತ್ ಜನಸಂದಣಿ ನಿರೀಕ್ಷೆ: ಕಳೆದ 20 ವರ್ಷಗಳಿಂದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸಹಯೋಗದಲ್ಲಿ ಈ ಉತ್ಸವ ನಡೆಯುತ್ತಿದ್ದು, ಈ ಬಾರಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಕ್ರೀಡಾಂಗಣದಿಂದ ಚಂದ್ರವಳ್ಳಿವರೆಗೆ ಶೋಭಾಯಾತ್ರೆ ಸಾಗಲಿದೆ.
ಭದ್ರತೆ ಮತ್ತು ಕಣ್ಗಾವಲು: ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಶೀಘ್ರದಲ್ಲೇ ಪೊಲೀಸರಿಂದ ರೂಟ್ ಮಾರ್ಚ್ (ಪಥಸಂಚಲನ) ನಡೆಸಲಾಗುತ್ತದೆ. ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳು, ವಾಚ್ ಟವರ್‌ಗಳು ಹಾಗೂ ಪೊಲೀಸ್ ಇಲಾಖೆಯಿಂದ 5-6 ಡ್ರೋನ್ ಕ್ಯಾಮೆರಾ ಕಣ್ಗಾವಲು ಇರಿಸಲಾಗುತ್ತದೆ.
ನಿಷೇಧಿತ ಕ್ರಮಗಳು: ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಬಂಟಿಂಗ್ಸ್, ಪೇಪರ್ ಬ್ಲಾಸ್ಟರ್ಸ್ ಹಾಗೂ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪೊಲೀಸ್ ಅನುಮತಿ ಇಲ್ಲದೆ ಖಾಸಗಿಯವರು ಡ್ರೋನ್ ಹಾರಿಸುವುದನ್ನು ಸಹ ನಿಷೇಧಿಸಲಾಗಿದೆ.
ಪ್ರಸಾದ ವಿತರಣೆಗೆ ಕಟ್ಟುನಿಟ್ಟು: ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯಾಗದಂತೆ ಮುಖ್ಯ ರಸ್ತೆಗಳಲ್ಲಿ ಪ್ರಸಾದ ವಿತರಣೆಯನ್ನು ನಿಷೇಧಿಸಲಾಗಿದ್ದು, ಅಡ್ಡ ರಸ್ತೆಗಳಲ್ಲಿ ವ್ಯವಸ್ಥೆ ಮಾಡಬೇಕು. ಆಹಾರ ಇಲಾಖೆ ಅಧಿಕಾರಿಗಳು ಗುಣಮಟ್ಟ ಪರಿಶೀಲಿಸಿದ ನಂತರವಷ್ಟೇ ಪ್ರಸಾದ ವಿತರಣೆಗೆ ಅವಕಾಶವಿರುತ್ತದೆ.
ಮೂಲಭೂತ ಸೌಕರ್ಯ: ಆಗಮಿಸುವ ಭಕ್ತರಿಗೆ ಕುಡಿಯುವ ನೀರು ಹಾಗೂ ಮೊಬೈಲ್ ಟಾಯ್ಲೆಟ್ ವ್ಯವಸ್ಥೆಯನ್ನು ಸೂಕ್ತ ಸ್ಥಳಗಳಲ್ಲಿ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ. ವಾಹನಗಳು ಮತ್ತು ವೇದಿಕೆಗಳ ಫಿಟ್‌ನೆಸ್ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಹಿಂದೂ ಮಹಾಗಣಪತಿ ಪ್ರತಿಷ್ಠಾಪನಾ ಸಮಿತಿಯ ಸಂಘಟಕರು ಉಪಸ್ಥಿತರಿದ್ದರು.




