ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಪ್ರಸಿದ್ಧ ಮುಜರಾಯಿ 'ಬಿ' ವರ್ಗದ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವರ 2026ರ ಸಾಲಿನ ದಸರಾ ಮಹೋತ್ಸವದ ಪ್ರಯುಕ್ತ ಆಚರಿಸಲಾಗುವ ಅಂಬಿನೋತ್ಸವ ಹಾಗೂ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಸರಪಳಿ ಪವಾಡ ಕಾರ್ಯಕ್ರಮದ ಕುರಿತು ಸಮಾಲೋಚಿಸಲು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಈ ಸಭೆಯು ದಿನಾಂಕ 08.10.2026ರ ಗುರುವಾರ ಮಧ್ಯಾಹ್ನ 3.00 ಗಂಟೆಗೆ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಪ್ರಾಂಗಣದಲ್ಲಿ ಜರುಗಲಿದೆ.
ಹಿರಿಯೂರು ತಾಲೂಕು ತಹಶೀಲ್ದಾರ್ ಅವರು ಈ ಸಭಾ ಸೂಚನಾ ಪತ್ರವನ್ನು ಹೊರಡಿಸಿದ್ದು, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಹಕಾರ ಮತ್ತು ಸಲಹೆಗಳನ್ನು ನೀಡುವಂತೆ ಕೋರಿದ್ದಾರೆ.
ಈ ಸಭೆಯಲ್ಲಿ ಹಿರಿಯೂರು ಉಪವಿಭಾಗ ಪೊಲೀಸ್ ಉಪಾಧೀಕ್ಷಕರು, ನಗರಸಭಾ ಪೌರಾಯುಕ್ತರು, ಪೊಲೀಸ್ ನಿರೀಕ್ಷಕರು (ಹಿರಿಯೂರು ನಗರ ಠಾಣೆ), ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರು, ದೇವಸ್ಥಾನದ ಆಡಳಿತಾಧಿಕಾರಿಗಳು, ಪ್ರಧಾನ ಅರ್ಚಕರು, ಕೈವಾಡಸ್ಥರು ಹಾಗೂ ನಗರದ ಸಮಸ್ತ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ.




