ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮುಂಬರುವ ಹಿರಿಯೂರು ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಹಿಂದುಳಿದ ಕಾಡುಗೊಲ್ಲ ಸಮುದಾಯದ ಮುಖಂಡ, ವಿಶ್ವೇಶ್ವರಯ್ಯ ಜಲನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಪಕ್ಷದ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಎಐಸಿಸಿ/ಕೆಪಿಸಿಸಿ ವೀಕ್ಷಕರ ಎದುರು ಬೃಹತ್ ಶಕ್ತಿ ಪ್ರದರ್ಶನ ನಡೆಸಿ ಬಲವಾಗಿ ಆಗ್ರಹಿಸಿದ್ದಾರೆ.
ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಕುಂದು-ಕೊರತೆಗಳ ಪರಿಶೀಲನೆಗಾಗಿ ಹಿರಿಯೂರಿಗೆ ಆಗಮಿಸಿದ್ದ ಕೆಪಿಸಿಸಿ ವೀಕ್ಷಕ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ಅವರನ್ನು ನಗರದ ರಂಜಿತಾ ಹೋಟೆಲ್ ಮುಂಭಾಗ ನೂರಾರು ಮುಖಂಡರು ಹಾಗೂ ಬೆಂಬಲಿಗರು ಭೇಟಿಯಾದರು. ಈ ವೇಳೆ ಸಣ್ಣ ಚಿತ್ತಯ್ಯ ಅವರ ಪರ ಜೈಕಾರ ಕೂಗಿ, ಭಾವಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಟಿಕೆಟ್ಗೆ ಒತ್ತಾಯಿಸಿದರು.
ಕಾಡುಗೊಲ್ಲ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯದ ಕೂಗು:
ಹಿರಿಯೂರು ಕ್ಷೇತ್ರದಲ್ಲಿ 50 ಸಾವಿರಕ್ಕೂ ಹೆಚ್ಚು ಹಾಗೂ ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯಲ್ಲಿ ಸುಮಾರು 3.5 ಲಕ್ಷಕ್ಕೂ ಅಧಿಕ ಕಾಡುಗೊಲ್ಲ ಸಮುದಾಯದ ಮತದಾರರಿದ್ದಾರೆ. ಕಳೆದ 50 ವರ್ಷಗಳಿಂದ ಈ ಜನಾಂಗಕ್ಕೆ ಸೂಕ್ತ ರಾಜಕೀಯ ಅವಕಾಶ ಸಿಕ್ಕಿಲ್ಲ. ಹಿರಿಯೂರು ಮಾತ್ರವಲ್ಲದೆ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಹಲವು ಕ್ಷೇತ್ರಗಳಲ್ಲಿ ಈ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಸಣ್ಣ ಚಿತ್ತಯ್ಯ ಅವರಿಗೆ ಟಿಕೆಟ್ ನೀಡಿದರೆ ಮಧ್ಯ ಕರ್ನಾಟಕ ಭಾಗದ ಸುಮಾರು 20 ವಿಧಾನಸಭಾ ಹಾಗೂ 2 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಲಾಭವಾಗಲಿದೆ ಎಂದು ಕಾರ್ಯಕರ್ತರು ವೀಕ್ಷಕರಿಗೆ ಮನವರಿಕೆ ಮಾಡಿಕೊಟ್ಟರು.
ಸಾಮಾಜಿಕ ನ್ಯಾಯಕ್ಕೆ ಆಗ್ರಹ: ಮುಖಂಡ ಕೆ.ಆರ್. ಹಳ್ಳಿ ರವಿ ಮಾತನಾಡಿ, "ಕಾಡುಗೊಲ್ಲ ಜನಾಂಗದ ಜೊತೆಗೆ ಮಾದಿಗ, ಒಕ್ಕಲಿಗ ಹಾಗೂ ಇತರೆ ಹಿಂದುಳಿದ ಸಮುದಾಯಗಳ ಸಂಪೂರ್ಣ ಬೆಂಬಲ ಸಣ್ಣ ಚಿತ್ತಯ್ಯ ಅವರಿಗಿದೆ. ನೀರಾವರಿ ತಜ್ಞರಾಗಿ ಬರದ ನಾಡು ಹಿರಿಯೂರಿಗೆ ಕೊಡುಗೆ ನೀಡುವ ಕನಸು ಹೊಂದಿರುವ ಅವರಿಗೆ ಈ ಉಪಚುನಾವಣೆಯಲ್ಲಿ ಟಿಕೆಟ್ ನೀಡಿದರೆ, 2028ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರಲಿದೆ. ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ಅವರಿಗೆ ಅವಕಾಶ ನೀಡಬೇಕು" ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ವಕೀಲ ಯತೀಶ್, ಎಸ್.ಆರ್. ತಿಪ್ಪೇಸ್ವಾಮಿ, ತಿಮ್ಮರಾಯಪ್ಪ, ಮಹೇಶ್, ಎಸ್.ಟಿ. ಮಂಜುನಾಥ್, ಗುರುಮೂರ್ತಿ, ಖಾಲಿದ್ ಹುಸೇನ್, ಪುಟ್ಟರಾಜು, ನಾಯಿದ್, ನೌಶಾದ್, ಬಿ.ಕೆ. ಉಗ್ರಮೂರ್ತಿ, ಕೇಶವಮೂರ್ತಿ, ಪೆರಿಸ್ವಾಮಿ, ಕೃಷ್ಣಮೂರ್ತಿ, ಕೃಷ್ಣಾಪುರ ಅರಳಿಕೆರೆ ಕೃಷ್ಣಮೂರ್ತಿ, ಹನುಮಂತರಾಯ, ಚಿದಾನಂದ ಗೌಡ, ಕೂನಿಕೆರೆ ತಿಮ್ಮರಾಯಪ್ಪ, ಕೋಡಿಹಳ್ಳಿ ತಿಪ್ಪೇಸ್ವಾಮಿ, ಗೊಲ್ಲಹಳ್ಳಿ ಹನುಮಂತಪ್ಪ, ಜಿ.ಎಲ್. ಮೂರ್ತಿ, ಪ್ರದೀಪ್, ಪಿ.ಆರ್. ದಾಸ್, ರಂಗಸ್ವಾಮಿ ಸೇರಿದಂತೆ ನೂರಾರು ಮುಖಂಡರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.




