ಎಂ.ಎಲ್ ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಿಶೇಷ ರಾಜಕೀಯ ವಿಶ್ಲೇಷಣೆ
ಚಿತ್ರದುರ್ಗ ಜಿಲ್ಲೆಯ ಅತ್ಯಂತ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ ಹಿರಿಯೂರು, ಸದ್ಯ ರಾಜಕೀಯ ಸಂಚಲನದ ಕೇಂದ್ರಬಿಂದುವಾಗಿದೆ. ಮಾಜಿ ಸಚಿವರು ಹಾಗೂ ಕ್ಷೇತ್ರದ ಶಾಸಕರಾಗಿದ್ದ ಡಿ. ಸುಧಾಕರ್ ಅವರ ಅಕಾಲಿಕ ನಿಧನದ ನಂತರ, ಹಿರಿಯೂರಿನಲ್ಲಿ ಉಪಚುನಾವಣೆಯ ಕಹಳೆ ಮೊಳಗುವ ಮುನ್ನವೇ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಅಭ್ಯರ್ಥಿಗಳ ಕುರಿತ ಚರ್ಚೆಗಳು ಧೂಳೆಬ್ಬಿಸುತ್ತಿವೆ. ಆದರೆ, ಕೇವಲ ಒಂದೂವರೆ ವರ್ಷದ ಅವಧಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಚುನಾವಣೆ ಎದುರಿಸಬೇಕೇ ಎಂಬ ಗೊಂದಲ ಕೆಲವು ಅಭ್ಯರ್ಥಿಗಳನ್ನು ಕಾಡುತ್ತಿದ್ದರೆ, ಇತ್ತ ಮತದಾರ ಪ್ರಭು ಮಾತ್ರ ಈ ಬಾರಿ "ಹೊರಗಿನವರಿಗೆ ಮಣೆ ಇಲ್ಲ, ಶೋಕಿ ನಾಯಕರಿಗೆ ಜಾಗವಿಲ್ಲ" ಎಂಬ ಸ್ಪಷ್ಟ ಸಂದೇಶ ನೀಡಲು ಸದ್ದಿಲ್ಲದೆ ಸಜ್ಜಾಗುತ್ತಿದ್ದಾನೆ.
ಹರಿದು ಬರುತ್ತಿರುವ ‘ಹೊರಗಿನ’ ಅಭ್ಯರ್ಥಿಗಳ ಪಟ್ಟಿ!:
ಸದ್ಯದ ಚರ್ಚೆಗಳ ಪ್ರಕಾರ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಸಹೋದರ ಡಿ.ಕೆ ಸುರೇಶ್, ಸುಧಾಕರ್ ಸುಹಾಸ್, ಪೂರ್ಣಿಮಾ ಶ್ರೀನಿವಾಸ್, ರವೀಂದ್ರಪ್ಪ, ಬೇತೂರ್ ಪಾಳ್ಯ ರಾಜು, ಬೆಂಗಳೂರಿನ ಬಿಬಿಎಂಪಿ ಸದಸ್ಯ ಹಾಗೂ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ,ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜ್, ಮಾಜಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಮತ್ತು ಅವರ ಪುತ್ರ ಡಾ.ಸಿದ್ಧಾರ್ಥ ಗುಂಡಾರ್ಪಿ, ಮಾಗಡಿ ಜಯರಾಮಯ್ಯ, ಉದ್ಯಮಿ ಬೊಮ್ಮೇನಹಳ್ಳಿ ಬಾಬು, ಪಾವಗಡ ವೆಂಕಟರಾಮಣಪ್ಪ ಇವರ 2ನೇ ಪುತ್ರಿಯ ಗಂಡ ಸೇರಿದಂತೆ ಹಲವರ ಹೆಸರುಗಳು ಗಾಳಿಯಲ್ಲಿ ತೇಲಿಬರುತ್ತಿವೆ. ಇಷ್ಟು ಮಂದಿ ಅಲ್ಲದೆ ದಿನ ಕಳೆದಂತೆ ಘಟಾನುಘಟಿ ನಾಯಕರ ಹೆಸರುಗಳು ಸೇರಿಕೊಳ್ಳುವ ಸಾಧ್ಯತೆ ಇದೆ. ಕ್ಷೇತ್ರ ಪ್ರತಿಷ್ಠಿತವಾಗಿರುವುದರಿಂದ ಪಟ್ಟಿ ದೊಡ್ಡದಾಗಿಯೇ ಕಾಣುತ್ತಿದೆ. ಆದರೆ, ಇಲ್ಲಿ ಕಾಡುತ್ತಿರುವ ಯಕ್ಷಪ್ರಶ್ನೆ ಎಂದರೆ—"ಹಿರಿಯೂರಿನ ಮಣ್ಣಿನ ಮಗನಿಗೆ ಮಣೆ ಯಾವಾಗ?".









ಸ್ಥಳೀಯ ಅಭ್ಯರ್ಥಿಗಳ ಕಡೆಗಣನೆ ಏಕೆ? ಮತದಾರರ ಆತ್ಮಾವಲೋಕನದ ಸಮಯ:
ಹಿರಿಯೂರು ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ಕಡೆಗಣಿಸುವ ಪ್ರವೃತ್ತಿ ಹಿಂದಿನಿಂದಲೂ ನಡೆದುಬಂದಿದೆ. ಆದರೆ, ಸ್ಥಳೀಯ ಅಭ್ಯರ್ಥಿಯೊಬ್ಬ ಸೋತರೂ ಗೆದ್ದರೂ ಜನರ ಮಧ್ಯೆಯೇ ಇರುತ್ತಾನೆ. ಕ್ಷೇತ್ರದ ಮೂಲಭೂತ ಸಮಸ್ಯೆಗಳಿಗಾಗಿ, ತಾಲೂಕಿನ ಅಭಿವೃದ್ಧಿಗಾಗಿ ಜನರ ಜೊತೆ ನಿಂತು ಸಾಮಾಜಿಕ ಹೋರಾಟ ಮಾಡುತ್ತಾನೆ. ಚುನಾವಣೆ ಬಂದಾಗ ಮಾತ್ರ "ನಾನು ಸ್ಥಳೀಯ ಅಭ್ಯರ್ಥಿ" ಎಂದು ಬಿಂಬಿಸಿಕೊಳ್ಳುವುದಲ್ಲ; ಸೋಲು-ಗೆಲುವಿನ ಹಂಗಿಲ್ಲದೆ ಜನರ ಒಡನಾಟದಲ್ಲಿ ಇರುವವರಿಗೆ ಮತದಾರರು ಕೈಹಿಡಿಯಬೇಕಿದೆ. ಈ ಬಾರಿ ಹೊರಗಿನವರಿಗೆ ಅವಕಾಶ ಕೊಟ್ಟು ಸ್ಥಳೀಯ ನಾಯಕತ್ವವನ್ನು ಹತ್ತಿಕ್ಕಲು ಮತದಾರರು ಸಿದ್ಧರಿಲ್ಲ ಎಂಬ ವಾತಾವರಣ ನಿರ್ಮಾಣವಾಗುತ್ತಿದೆ.
‘ಕುರುಡು ಕಾಂಚಾಣ’ದ ಆರ್ಭಟ ಮತ್ತು ಲೀಡರ್‌ಗಳ ಹಬ್ಬದ ವಾತಾವರಣ!:
ಹಿರಿಯೂರು ತಾಲೂಕಿನ ರಾಜಕೀಯದ ದೊಡ್ಡ ದುರಂತವೆಂದರೆ ಹಳ್ಳಿಗಳಲ್ಲಿ ತುಂಬಿ ತುಳುಕುತ್ತಿರುವ ನಾಯಕರ (ಲೀಡರ್‌ಗಳ) ಸಂಖ್ಯೆ! ಒಂದೊಂದು ಊರಿನಲ್ಲಿ 50 ರಿಂದ 60 ಜನ ಲೀಡರ್‌ಗಳಿದ್ದಾರೆ. ಈ ಲೀಡರ್‌ಗಳಿಗೆ ಕ್ಷೇತ್ರದ ಅಭಿವೃದ್ಧಿಗಿಂತ "ಕುರುಡು ಕಾಂಚಾಣ" ಕುಣಿಸುವ ಹೊರಗಿನ ನಾಯಕರೇ ಬೇಕಾಗಿದ್ದಾರೆ.
ಹೊಸ ಅಭ್ಯರ್ಥಿ ಅಥವಾ ಹಣವಿರುವ ನಾಯಕರು ಕ್ಷೇತ್ರಕ್ಕೆ ಕಾಲಿಟ್ಟರೆ ಸಾಕು, ಈ ಸ್ಥಳೀಯ ಲೀಡರ್‌ಗಳಿಗೆ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಹಳ್ಳಿಗಳಿಗೆ ಬರುವ ಮುಂಚೆಯೇ ಪಟಾಕಿ ಸಿಡಿಸಿ, ಭರ್ಜರಿ ಹೂವಿನ ಹಾರ ಹಾಕಿ, "ಅಣ್ಣ, ನೀವು ಈ ಕ್ಷೇತ್ರದಲ್ಲಿ ನಿಂತರೆ ಸಾಕು, ನಿಮ್ಮ ಗೆಲುವು ಖಂಡಿತ!" ಎಂದು ಸುಳ್ಳು ಲೆಕ್ಕಾಚಾರದ ಜ್ಯೋತಿಷ್ಯ ಹೇಳಿ ನಾಯಕರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾರೆ.
ನಾಟಕ ಮತ್ತು ಪ್ರಚಾರದ ಗಿಮಿಕ್:
"ಅಣ್ಣ, ಕ್ರಿಕೆಟ್ ಪಂದ್ಯಾವಳಿ ಇದೆ, ಅಣ್ಣ ಆ ಕಾರ್ಯಕ್ರಮ ಇದೆ..." ಎಂದು ಹೇಳಿ ಹೊಸ ನಾಯಕರಿಂದ 5 ರಿಂದ 10 ಸಾವಿರ, ಅಬ್ಬಬ್ಬಾ ಎಂದರೆ 20,000 ರೂಪಾಯಿ ಕೊಡಿಸುತ್ತಾರೆ. ಅದನ್ನು ಇಟ್ಟುಕೊಂಡು ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ದೊಡ್ಡದಾಗಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಇವರ ಆಟ ಎಷ್ಟರಮಟ್ಟಿಗಿರುತ್ತದೆ ಎಂದರೆ, ಬಂದ ನಾಯಕ ಹಣ ಖಾಲಿ ಮಾಡಿಕೊಂಡು ಕೈಬಿಟ್ಟು ಹೋದರೆ, "ಇವ್ರು ಹೋದ್ರೆ ಏನಾಯ್ತು ಅಣ್ಣ, ಇನ್ನೊಬ್ಬರು ಬರ್ತಾರೆ!" ಎಂದು ಮತ್ತೊಬ್ಬ ಮುಗ್ದ ನಾಯಕನ ಹುಡುಕಾಟಕ್ಕೆ ಹೊರಡುತ್ತಾರೆ. ಇಂತಹ ಸ್ವಾರ್ಥಿ ಲೀಡರ್‌ಗಳಿಂದಲೇ ಕ್ಷೇತ್ರದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಜನಪರ ಕಾಳಜಿಯಿಂದಲ್ಲ.
ಫೇಸ್‌ಬುಕ್ ಶೋಕಿ ಬಿಡಿ; ಹಳ್ಳಿಗಳ ಕುಡಿಯುವ ನೀರಿನ ದಾಹ ನೀಗಿಸಿ!:
ಸಾಮಾಜಿಕ ಜಾಲತಾಣಗಳಲ್ಲಿ ಕಾರು, ಐಷಾರಾಮಿ ಜೀವನದ ಶೋಕಿ ಮಾಡಿಕೊಂಡು, ಹಾರ-ತುರಾಯಿ ಹಾಕಿಸಿಕೊಂಡು ತಿರುಗುವ ನಾಯಕರಿಗೆ ಹಿರಿಯೂರಿನ ವಾಸ್ತವ ಪರಿಸ್ಥಿತಿ ಗೊತ್ತಿಲ್ಲ. ಇಂದು ತಾಲೂಕಿನ ಹಳ್ಳಿಗಳಲ್ಲಿ ಜನ ಕುಡಿಯುವ ನೀರಿಗಾಗಿ ಕೊಡ ಹಿಡಿದು ಮೈಲುಗಟ್ಟಲೆ ಅಲೆಯುವ, ಪರದಾಡುವ ಪರಿಸ್ಥಿತಿ ಬಂದೊದಗಿದೆ.
ಹೊಸ ನಾಯಕರಿಗೆ ಮತ್ತು ಶೋಕಿ ರಾಜಕಾರಣಿಗಳಿಗೆ ಮತದಾರರ ನೇರ ಸವಾಲು ಇದೇ:
"ನಿಮಗೆ ತಾಕತ್ತಿದ್ದರೆ, ಜನರ ಮೇಲೆ ನಿಜವಾದ ಕಾಳಜಿ ಇದ್ದರೆ, ಮೊದಲು ಹಳ್ಳಿ ಕಡೆ ಮುಖ ಮಾಡಿ. ಕುಡಿಯುವ ನೀರಿಲ್ಲದ ಹಳ್ಳಿಗಳಿಗೆ ಸ್ವಂತ ಖರ್ಚಿನಲ್ಲಿ 5 ರಿಂದ 10 ಬೋರ್‌ವೆಲ್ ಕೊರೆಸಿ ನೀರು ಕೊಡಿ. ಜನರ ದಾಹ ನೀಗಿಸಿ. ಆಗ ನಿಮ್ಮನ್ನು ಜನ ನಿಜವಾದ ಲೀಡರ್ ಎಂದು ಒಪ್ಪಿಕೊಳ್ಳುತ್ತಾರೆ. ಅದನ್ನು ಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಶೋಕಿ ಮಾಡಿಕೊಂಡು ಬಂದು ಮತ ಕೇಳಿದರೆ, ಈ ಬಾರಿ ಮತದಾರರು ತಕ್ಕ ಪಾಠ ಕಲಿಸುವುದು ಗ್ಯಾರಂಟಿ."
ಹಿರಿಯೂರು ಕ್ಷೇತ್ರದ ಮತದಾರರು ಈ ಬಾರಿ ಜಾಗೃತರಾಗಿದ್ದಾರೆ. ಹಣದ ಬಲದಿಂದ, ಲೀಡರ್‌ಗಳ ಹಾರ-ತುರಾಯಿ ಮತ್ತು ಫೇಸ್‌ಬುಕ್ ಪ್ರಚಾರದಿಂದ ಚುನಾವಣೆ ಗೆಲ್ಲಬಹುದು ಅಂದುಕೊಂಡಿರುವ ಭ್ರಮಾಧೀನ ನಾಯಕರಿಗೆ ಈ ಉಪಚುನಾವಣೆ ಶಾಕ್ ನೀಡಲಿದೆ. ಹಗಲು-ರಾತ್ರಿ ಕ್ಷೇತ್ರದ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವ, ಸ್ಥಳೀಯ ಸಮಸ್ಯೆಗಳಿಗೆ ಧ್ವನಿಯಾಗುವ ನಾಯಕನಿಗೆ ಮಾತ್ರ ಹಿರಿಯೂರಿನ ಜನ ಪಟ್ಟ ಗಟ್ಟಲಿದ್ದಾರೆ. ಶೋಕಿ ನಾಯಕರ ನಾಟಕಕ್ಕೆ ಹಿರಿಯೂರಿನಲ್ಲಿ ಇನ್ನು ಆಟ ನಡೆಯಲ್ಲ!.



