ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದಲ್ಲಿ ಸೆಪ್ಟೆಂಬರ್ 27 ರಂದು ಭಾನುವಾರ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಮತ್ತು ವಿಸರ್ಜನಾ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಡಿ. ನಾರಾಯಣ ರೆಡ್ಡಿ ತಿಳಿಸಿದ್ದಾರೆ.
ನಗರದ ಹುಳಿಯಾರು ರಸ್ತೆಯ ತುಳಸಿ ಕಲ್ಯಾಣ ಮಂಟಪದ ಬಳಿ ಸುದ್ದಿಗೋಷ್ಠಿ ನಡೆಸಿ ಅವರು ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದ ಪ್ರಮುಖ ವಿವರಗಳು: ಧಾರ್ಮಿಕ ಪೂಜೆ: ಇಂದು ಬೆಳಿಗ್ಗೆ 9 ಗಂಟೆಗೆ ವಿನಾಯಕನಿಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ. ಬಳಿಕ ಅಲಂಕರಿಸಿದ ಟ್ರಾಕ್ಟರ್‌ನಲ್ಲಿ ಗಣೇಶನನ್ನು ವೇದಿಕೆ ಬಳಿಗೆ ಕರೆತರಲಾಗುತ್ತದೆ.
ವೇದಿಕೆ ಕಾರ್ಯಕ್ರಮ ಹಾಗೂ ದಿಕ್ಸೂಚಿ ಭಾಷಣ: ಬೆಳಿಗ್ಗೆ 11.30ಕ್ಕೆ ನಗರದ ಹುಳಿಯಾರು ರಸ್ತೆಯ ಮೋರ್ ಮುಂಭಾಗದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಭಜರಂಗದಳದ ದಕ್ಷಿಣ ಪ್ರಾಂತದ ನರೇಶ್ ರೆಡ್ಡಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಶೋಭಾಯಾತ್ರೆಯ ಮಾರ್ಗ: ಹುಳಿಯಾರು ರಸ್ತೆ, ಚರ್ಚ್ ರೋಡ್, ಆಸ್ಪತ್ರೆ ಸರ್ಕಲ್ ನಿಂದ ರಂಜಿತ್ ಹೋಟೆಲ್ ತಲುಪಿ, ಅಲ್ಲಿಂದ ಪುನಃ ಗಾಂಧಿ ಸರ್ಕಲ್ ವರೆಗೆ ಬೃಹತ್ ಮೆರವಣಿಗೆ ಸಾಗಲಿದೆ. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಪಾಲ್ಗೊಳ್ಳಲಿವೆ.
ಆರತಿ ಹಾಗೂ ವಿಸರ್ಜನೆ: ರಾತ್ರಿ 8 ಗಂಟೆಗೆ ಗಾಂಧಿ ವೃತ್ತದಲ್ಲಿ ಗಣೇಶನಿಗೆ ಮಹಾಮಂಗಳಾರತಿ ಕಾರ್ಯಕ್ರಮ ನಡೆಯಲಿದೆ. ನಂತರ ರಾತ್ರಿ ಸುಮಾರು 9 ಗಂಟೆಗೆ ಬಬ್ಬೂರು ಫಾರಂ ಸಮೀಪದ ತೋಟಗಾರಿಕೆ ಕಾಲೇಜು ಹಿಂಭಾಗದ ಬಾವಿಯಲ್ಲಿ ಗಣೇಶನ ವಿಸರ್ಜನೆ ನೆರವೇರಲಿದೆ.
ತಾಲ್ಲೂಕಿನ ಸಮಸ್ತ ಹಿಂದೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಹಾಗೂ ಶೋಭಾಯಾತ್ರೆ ಸುಗಮವಾಗಿ ನಡೆಯಲು ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆ ಸಹಕರಿಸಬೇಕು ಎಂದು ಡಿ. ನಾರಾಯಣ ರೆಡ್ಡಿ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿಎಚ್‌ಪಿ ಅಧ್ಯಕ್ಷ ಪ್ರಶಾಂತ್, ಸಹಕಾರ್ಯದರ್ಶಿ ವೆಂಕಟೇಶ್ ಜಿ., ಜಿಲ್ಲಾ ಸುರಕ್ಷಾ ಪ್ರಮುಖ್ ಚೇತನ್, ಆಲೂರು ದೇಸಾಯಿ, ತಾಲ್ಲೂಕು ಸಂಯೋಜಕ್ ಧನುಷ್ ಎಸ್., ಸಹ ಸಂಯೋಜಕ ವಾಸು ಗೋವಿಂದಾಚಾರ್, ಕಾರ್ಯದರ್ಶಿ ರಾಘವೇಂದ್ರ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.




