ಎಂ.ಎಲ್ ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಎಂದರೆ ಕೇವಲ ಒಂದು ವಿಧಾನಸಭಾ ಕ್ಷೇತ್ರವಲ್ಲ; ಅದು ಮಳೆಯಿಂದ ಮರೆಯಾದ, ವಾರ್ಷಿಕ 500 ಎಂಎಂ ಗಿಂತ ಕಡಿಮೆ ಮಳೆ ಬೀಳುವ ಮತ್ತು ಮಳೆಯಿಂದ ಮರೆಯಾದ ಸದಾ ಬರಗಾಲಕ್ಕೆ ತುತ್ತಾಗುವ ಭೂ ಪ್ರದೇಶದಲ್ಲಿ ಶೇಂಗಾ, ಹತ್ತಿ, ಕಡಲೆ, ತೆಂಗು-ಅಡಕೆ, ದಾಳಿಂಬೆ ಬೆಳೆಯುವ ಕಷ್ಟಜೀವಿ ರೈತರ ನಾಡು.
ಪ್ರಪಂಚದ ಅತಿ ಹಳೆಯ ಕಲ್ಲಿನ ಅಣೆಕಟ್ಟುಗಳಲ್ಲಿ ಒಂದಾದ ವಾಣಿ ವಿಲಾಸ ಸಾಗರವನ್ನು (ಮಾರಿ ಕಣಿವೆ) ಮಡಿಲಲ್ಲಿಟ್ಟುಕೊಂಡ ಹೆಮ್ಮೆಯ ಭೂಮಿ ವೇದಾವತಿ ಒಡಲಿನ ಹಿರಿಯೂರು.
ಆದರೆ, ಇಂದು ಅನಿವಾರ್ಯ ಕಾರಣಗಳಿಂದಾಗಿ ಹಿರಿಯೂರು ಉಪ ಚುನಾವಣೆಯ ಹೊಸ್ತಿಲಲ್ಲಿ ನಿಂತಿದೆ. ದುರಂತವೆಂದರೆ, ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಮಟ್ಟದಲ್ಲಿ ಈ ಕ್ಷೇತ್ರಕ್ಕೊಂದು ಕೆಟ್ಟ ಹೆಸರು ಅಂಟಿಕೊಳ್ಳುತ್ತಿದೆ. ಅದು "ದುಡ್ಡು ಸುರಿದರೆ ಹಿರಿಯೂರಿನಲ್ಲಿ ಗೆದ್ದು ಬರಬಹುದು!", ಹಿರಿಯೂರು ಕ್ಷೇತ್ರಕ್ಕೆ ಹೋಗಿ ಗೆದ್ದು ಬನ್ನಿ ಎನ್ನುವ ಸಂದೇಶ ಪ್ರತಿ ಚುನಾವಣೆಯಲ್ಲೂ ಕೇಳಿ ಬರುತ್ತದೆ.
ರಾಜಕೀಯ ಪಕ್ಷಗಳ ಪಾಲಿಗೆ ಇದೊಂದು ಕೇವಲ ‘ಪ್ರತಿಷ್ಠೆಯ ಕಣ’ ಇರಬಹುದು, ಆದರೆ ಹಿರಿಯೂರಿನ ಜನಸಾಮಾನ್ಯರಿಗೆ ಇದು ಮುಂದಿನ ಭವಿಷ್ಯದ ಪ್ರಶ್ನೆ. ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ, ಹೊರಗಿನಿಂದ ಬಂದು ದುಡ್ಡಿನ ಚೀಲ ಸುರಿಯುವವರ ಆಮಿಷಕ್ಕೆ ನಮ್ಮ ಸ್ವಾಭಿಮಾನವನ್ನು ಅಡವಿಟ್ಟಂತಾಗುತ್ತದೆ.
ಹೊರಗಿನವರ ಆಮಿಷ vs ಸ್ಥಳೀಯರ ಅಸಹಾಯಕತೆ
ಚುನಾವಣೆ ಬಂದಾಗಲೆಲ್ಲ ಕ್ಷೇತ್ರದ ಹೊರಗಿನವರು, ಹೊರ ಜಿಲ್ಲೆಗಳ, ಬೇರೆ ಪ್ರಾಂತ್ಯಗಳ ನಾಯಕರು ಹಿರಿಯೂರಿನತ್ತ ಲಗ್ಗೆ ಇಡುತ್ತಾರೆ. ಅವರ ಬಳಿ ಅಧಿಕಾರವಿದೆ, ಕೋಟ್ಯಂತರ ರೂಪಾಯಿಗಳ ಹಣದ ಬಲವಿದೆ, ಬಣ್ಣ ಬಣ್ಣದ ಭರವಸೆಗಳ ಮೂಟೆಗಳಿವೆ. ಐದು ನೂರು ರೂ.ಗಳ ನೋಟಿನ ಕಂತೆಗಳನ್ನು ತೆಗೆದು ಕ್ಷೇತ್ರದಲ್ಲೆಲ್ಲಾ ತೂರಲಾಗುತ್ತದೆ. ದೇವಸ್ಥಾನ, ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ನು, ಪ್ರತಿಭಾ ಪುರಸ್ಕಾರ ಎಂದು ಭಾವನಾತ್ಮಕವಾಗಿ ಮತ್ತು ಧಾರ್ಮಿಕವಾಗಿ ಹಿರಿಯೂರು ಜನತೆಯ ಮನಸ್ಸುಗಳನ್ನು ದುಡ್ಡಿನಲ್ಲಿ ಕಟ್ಟಿ ಹಾಕಲಾಗುತ್ತದೆ. ತಾಮ್ರದ ಬಿಲ್ಲೆ(ದುಡ್ಡು) ತಂದೆ ಮಕ್ಕಳನ್ನ ಅಗಲಿಸಿತು, ದುಡ್ಡಿನ ಮುಂದೆ ದೆವ್ವ ನಿಲ್ಲಲ್ಲ, ಇನ್ನೂ ಜನ(ಮತದಾರ) ಯಾವ ಲೆಕ್ಕ ದುಡ್ಡಿ ಬಿಸಾಕಿ ಗೆದ್ದು ಬರುತ್ತೇವೆಂಬ ಹಮ್ಮು ಬಿಮ್ಮುಗಳಿಂದ ಕೂಡಿದ ಹೊರಗಿನ ಅಭ್ಯರ್ಥಿಗಳ ಮನಸ್ಥಿತಿ ಮತ್ತು ಪಕ್ಕಾ ವ್ಯವಹಾರಿಕ ಲೆಕ್ಕಾಚಾರ.
ಕ್ಷಣಿಕ ಆಮಿಷಗಳು: ಕ್ಷೇತ್ರವನ್ನು ಕಾಡಿ ತಿನ್ನುತ್ತಿರುವ ಬರಗಾಲ, ಮಳೆ ಕೊರತೆ, ಉದ್ಯೋಗ ಹುಡುಕಿ ಗುಳೆ ಹೋಗುವುದು, ಪರಿಸ್ಥಿತಿಗೆ ದಾನನಾಗುವ ಬಡ, ಮಧ್ಯಮ, ಶ್ರೀಮಂತ ಕುಟುಂಬಗಳು ಸೇರಿ ಮತದಾರರ ತತ್ಕಾಲದ ಅಗತ್ಯಗಳನ್ನು, ಬಡತನವನ್ನು ಬಂಡವಾಳ ಮಾಡಿಕೊಳ್ಳುವ ಈ ಹೊರಗಿನ ಅಭ್ಯರ್ಥಿಗಳು, ಚುನಾವಣೆಯ ಒಂದು ವಾರ ಹಣ-ಹೆಂಡದ ಹೊಳೆ ಹರಿಸುತ್ತಾರೆ.
ಸ್ಥಳೀಯ ಅಭ್ಯರ್ಥಿಗಳ ಮಿತಿ: ನಮ್ಮದೇ ನೆಲದ, ನಮ್ಮ ಕಷ್ಟ-ಸುಖ ಬಲ್ಲ ಸ್ಥಳೀಯ ಅಭ್ಯರ್ಥಿಗಳಿಗೆ ಹೊರಗಿನವರಂತೆ ಸರಿಸಮನಾಗಿ ದುಡ್ಡು ಹಂಚುವ ಆರ್ಥಿಕ ಶಕ್ತಿ ಇರುವುದಿಲ್ಲ. ಪರಿಣಾಮವಾಗಿ, ಸ್ಥಳೀಯ ನಾಯಕರು ಜನರ ನಿಜವಾದ ಅಗತ್ಯಗಳನ್ನು ಪೂರೈಸಲು ಬಯಸಿದರೂ, ಈ 'ದುಡ್ಡಿನ ದಣಿ'ಗಳ ಮುಂದೆ ಅಸಹಾಯಕರಾಗುತ್ತಿದ್ದಾರೆ. ದುಡ್ಡು ಎಲ್ಲವನ್ನು ನೀಡುತ್ತದೆ ಎನ್ನುವುದು ಚುನಾವಣೆ ಫಲಿತಾಂಶಗಳಿಂದ ನೋಡಬಹುದಾಗಿದೆ.
ಬುದ್ಧಿವಂತ ಮತದಾರರ ಯೋಚಿಸಬೇಕಾದ ಪ್ರಶ್ನೆ: ಚುನಾವಣೆಯ ಒಂದು ದಿನ ಐದು ನೂರು ಅಥವಾ ಸಾವಿರ ರೂಪಾಯಿ ಕೊಟ್ಟು ವೋಟು ಕೊಳ್ಳುವ ಹೊರಗಿನ ರಾಜಕಾರಣಿ, ಮುಂದಿನ ಐದು ವರ್ಷ ನಿಮ್ಮ ಊರಿನ ರಸ್ತೆ, ಕುಡಿಯುವ ನೀರು, ಆಸ್ಪತ್ರೆಯ ಕಷ್ಟಗಳಿಗೆ ಸಿಗುತ್ತಾರೆಯೇ?, ಶಾಲಾ ಮಕ್ಕಳಿಗೆ ಹಾಸ್ಟೆಲ್, ಉನ್ನತ ಶಿಕ್ಷಣಕ್ಕಾಗಿ ಸಾಲ ಸೌಲಭ್ಯ ಸೇರಿದಂತೆ ತಕ್ಷಣದ ಬೇಕು ಬೇಡಗಳಿಗೆ ಖಂಡಿತ ಇವರ್ಯಾರು ಸಿಗುವುದಿಲ್ಲ. ಗೆದ್ದ ಮರುದಿನವೇ ಅವರು ಹಿರಿಯೂರನ್ನು ಮರೆತು ತಮ್ಮ ಸ್ವಂತ ಊರುಗಳಲ್ಲೋ, ಬೆಂಗಳೂರಿನಲ್ಲೋ ರಾಜಭೋಗ ಅನುಭವಿಸುತ್ತಾರೆ.
ಅಭಿವೃದ್ಧಿ ಕಾಣದ ದುಸ್ಥಿತಿ: ಕಣ್ಣೀರಿಡುತ್ತಿರುವ ರೈತರು, ಕಡೆಗಣಿಸಲ್ಪಟ್ಟ ಜನಸಾಮಾನ್ಯರು
ಹಣ ಬಲದಿಂದ ಗೆದ್ದು ಬರುವವರಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿ ಇರುವುದಿಲ್ಲ. ಖರ್ಚು ಮಾಡಿರುವ ದುಡ್ಡಿಗೆ ಬಡ್ಡಿ, ಚಕ್ರ ಬಡ್ಡಿ ಸೇರಿಸಿ ಕೋಟಿ ಕೋಟಿ ಲೆಕ್ಕಗಳಲ್ಲಿ ವ್ಯವಹಾರ ಮಾಡುವರು. ವ್ಯಾಪಾರಕ್ಕಾಗಿ ಬಂದವರು ವ್ಯವಹಾರವನ್ನೇ ಮಾಡಬೇಕಲ್ಲ. ಇಂಥಹ ಮನಸ್ಥಿತಿಗಳುಳ್ಳವರ ಮಧ್ಯ ಇಂದು ಹಿರಿಯೂರು ತಾಲೂಕಿನಾದ್ಯಂತ ಜನಸಾಮಾನ್ಯರು ಮತ್ತು ರೈತರು ಅನುಭವಿಸುತ್ತಿರುವ ಸಂಕಷ್ಟಗಳು ನೂರಾರಿದ್ದು ಕೇಳುವವರಿಲ್ಲದಾಗಿದೆ.
ರೈತರ ಜ್ವಲಂತ ಸಮಸ್ಯೆಗಳು: ಭದ್ರಾ ಮೇಲ್ದಂಡೆ ಯೋಜನೆಯ ಸಮರ್ಪಕ ಅನುಷ್ಠಾನ, ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ಜಮೀನುಗಳಿಗೂ ನೀರು ತಲುಪಿಸುವ ಕಾಯಕ ಇನ್ನೂ ಮರೀಚಿಕೆಯಾಗಿದೆ. ಇನ್ನು ತೆಂಗು-ಅಡಕೆ ಬೆಳೆಗಾರರು ನುಸಿ ರೋಗ ಮತ್ತು ಇಳುವರಿ ಕುಸಿತದಿಂದ ಕಂಗಾಲಾಗಿದ್ದಾರೆ. ಅವರಿಗೆ ಸೂಕ್ತ ಪರಿಹಾರವಾಗಲಿ, ವೈಜ್ಞಾನಿಕ ಮಾರುಕಟ್ಟೆ ವ್ಯವಸ್ಥೆಯಾಗಲಿ ಸಿಕ್ಕಿಲ್ಲ.
ಕಳೆದ 2019ರಿಂದ ನಿರತಂರವಾಗಿ ವಾಣಿ ವಿಲಾಸ ಸಾಗರ ಡ್ಯಾಂ ಭರ್ತಿಯಾಗುತ್ತಿದೆ. ಜಿಲ್ಲಾಡಳಿತ, ಸೋತು ಗೆದ್ದು ಆಡಳಿತ ಮಾಡಿದವರು, ಮುಂದೆ ಆಡಳಿತ ಮಾಡಲು ಹವಣಿಸುತ್ತಿರುವ ಮನಸ್ಸುಗಳು ಇಂದಿಗೂ ವಿವಿ ಸಾಗರ ಅಚ್ಚುಕಟ್ಟು ರೈತರಿಗಾಗಿ ಒಂದು ಬೆಳೆ ಪದ್ಧತಿ ಜಾರಿ ಮಾಡದೆ, ಸ್ಥಗಿತಕೊಂಡಿರುವ ವಾಣಿ ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸದೆ ಹಾಗೆ ಕಾಲಹರಣ ಮಾಡಲಾಗುತ್ತಿದೆ.
ನನೆಗುದಿಗೆ ಬಿದ್ದ ಮೂಲಸೌಕರ್ಯ: ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟಿವೆ. ಶುದ್ಧ ಕುಡಿಯುವ ನೀರಿನ ಸಮಸ್ಯೆ ತಾಲೂಕಿನ ಹಲವೆಡೆ ಇನ್ನೂ ಜೀವಂತವಾಗಿದೆ. ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳು ಬರಲೇ ಇಲ್ಲ. ಮುಚ್ಚಿರುವ ಕೈಗಾರಿಕೆಗಳು ತೆರೆಯುತ್ತಿಲ್ಲ. ಸ್ಥಳೀಯ ಅಭಿವೃದ್ಧಿಗೆ ಅಡ್ಡಲಾಗಿ ನಿಲ್ಲುವ ವಿನಾ ಕಾರಣ ತೊಂದರೆಗಳನ್ನ ನೀಡುತ್ತಾ ಚೋರಿತನ ಮೈಗೂಡಿಸಿಕೊಂಡಿರುವ ಮೈಗಳ್ಳರ ಉಪಟಳ ಬೇರೆ. ಇವು ಹಿರಿಯೂರು ಕ್ಷೇತ್ರವನ್ನ ಮತ್ತಷ್ಟು ಅಭಿವೃದ್ಧಿಯಿಂದ ದೂರು ಇಟ್ಟಿವೆ.
ಸ್ವಾಭಿಮಾನಕ್ಕೆ ಬಿದ್ದ ಪೆಟ್ಟು: "ಹಿರಿಯೂರಿನ ಜನರನ್ನು ದುಡ್ಡಿನಿಂದ ಕೊಳ್ಳಬಹುದು" ಎಂದು ರಾಜ್ಯ ಮಟ್ಟದ ನಾಯಕರು ಲಘುವಾಗಿ ಮಾತನಾಡುವಾಗ ಪ್ರತಿ ಹಿರಿಯೂರಿನ ಪ್ರಜೆಯ ಸ್ವಾಭಿಮಾನಕ್ಕೂ ಧಕ್ಕೆಯಾಗುತ್ತದೆ. ಈ ಕಳಂಕವನ್ನು ತೊಡೆದುಹಾಕಬೇಕಾದ ಜವಾಬ್ದಾರಿ ಕ್ಷೇತ್ರದ ಯುವಕ, ಯುವತಿಯರು ಸೇರಿದಂತೆ ಹಿರಿಯ ಜೀವಿಗಳ ಮೇಲಿದೆ.
"ನಮ್ಮ ನೆಲದ ಮಗನೇ ನಮಗೆ ಬೇಕು":
ಕ್ಷೇತ್ರದ ಈ ಪ್ರಸ್ತುತ ಸ್ಥಿತಿಯ ಕುರಿತು ಹಿರಿಯೂರಿನ ಹಿರಿಯರು ರೈತ ಪರ ಚಿಂತಕರು, ಕ್ಷೇತ್ರದ ಸ್ವಾಭಿಮಾನಿಗಳು ಮತದಾರರ ಕಣ್ಣು ತೆರೆಸುವಂತಹ ಮಹತ್ವದ ಎಚ್ಚರಿಕೆಯನ್ನು ನೀಡಿದ್ದಾರೆ,
"ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಇಂದು ಹೊರಗಿನಿಂದ ಬಂದು ದುಡ್ಡು ಚೆಲ್ಲುವ ವಲಸೆ ರಾಜಕಾರಣಿಗಳ ಅಗತ್ಯವಿಲ್ಲ. ನಮಗೆ ಬೇಕಿರುವುದು ನಮ್ಮ ನೆಲದ ಮಣ್ಣಿನ ವಾಸನೆ ಗೊತ್ತಿರುವ, ನಮ್ಮ ಹಳ್ಳಿಗಳ ಗಲ್ಲಿ-ಗಲ್ಲಿಗಳನ್ನು ಬಲ್ಲ ಸ್ಥಳೀಯ ಅಭ್ಯರ್ಥಿ.
ದುಡ್ಡು ಕೊಟ್ಟು ವೋಟು ಕೊಳ್ಳುವವರು ಹಿರಿಯೂರನ್ನು ತಮ್ಮ ವ್ಯಾಪಾರದ ಕೇಂದ್ರ ಮಾಡಿಕೊಳ್ಳುತ್ತಾರೆಯೇ ಹೊರತು, ಬಡವರು, ಶೋಷಿತರು, ಹಿಂದುಳಿವದವರು, ಅಲ್ಪಸಂಖ್ಯಾತರು, ರೈತರ ಕಣ್ಣೀರು ಒರೆಸುವುದಿಲ್ಲ. ವೇದಾವತಿಯ ಒಡಲನ್ನು ಕಾಯಲು, ನಮ್ಮ ಹಸಿರು ಸಾಲುಗಳ ಸಂಕಷ್ಟಕ್ಕೆ ಸ್ಪಂದಿಸಲು ಸ್ಥಳೀಯ ನಾಯಕತ್ವಕ್ಕೆ ನಾವು ಶಕ್ತಿ ತುಂಬಬೇಕು. ದುಡ್ಡಿಗೆ ನಮ್ಮ ಮತವನ್ನು ಮಾರಿಕೊಂಡು ಮುಂದಿನ ಪೀಳಿಗೆಯ ಭವಿಷ್ಯವನ್ನು ಕತ್ತಲೆಗೆ ತಳ್ಳಬೇಡಿ" ಎನ್ನುವುದು ದಲಿತ ಮುಖಂಡ ಧನಂಜಯ, ಮಾಜಿ ನಗರಸಭಾ ಸದಸ್ಯರು, ಬ್ಯಾಡರಹಳ್ಳಿ ಓಬಳೇಶ್, ಹೆಚ್.ಆರ್. ತಿಮ್ಮಯ್ಯ, ರೈತ ಪರ ಚಿಂತಕರು, ಕಾಂಗ್ರೆಸ್ ಮುಖಂಡ ಸಾದತ್ ವುಲ್ಲಾ, ಪದ್ಮನಾಭ ಮಾಜಿ ನಗರಸಭಾ ಸದಸ್ಯರು ಇತರರ ಕಳಕಳಿಯ ಮನವಿಯಾಗಿದೆ.
ಭಾವನಾತ್ಮಕ ಕರೆ: ಹಿರಿಯೂರು ಮಾರಾಟಕ್ಕಿಲ್ಲ!
ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು. ಈ ಉಪ ಚುನಾವಣೆ ಕೇವಲ ಒಬ್ಬ ಶಾಸಕನನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲ; ಇದು ಹಿರಿಯೂರಿನ ನೈತಿಕತೆ ಮತ್ತು ಸ್ವಾಭಿಮಾನದ ಪರೀಕ್ಷೆ.
ಹೊರಗಿನಿಂದ ಬರುವ ಆಮಿಷಗಳಿಗೆ ಮರುಳಾಗದೆ, ಸ್ಥಳೀಯ ಅಭ್ಯರ್ಥಿಗಳ ಯೋಗ್ಯತೆ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿಯನ್ನು ನೋಡಿ ವೋಟ್‌ಹಾಕಬೇಕಿದೆ. ನಮ್ಮ ಕಷ್ಟಕ್ಕೆ ಧಾವಿಸುವ, ನಮ್ಮ ಊರಲ್ಲೇ ಸಿಗುವ ಸ್ಥಳೀಯ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ, "ಹಿರಿಯೂರು ದುಡ್ಡಿಗೆ ಬಗ್ಗುವ ಕ್ಷೇತ್ರವಲ್ಲ, ಅದು ಸ್ವಾಭಿಮಾನದ ಭದ್ರಕೋಟೆ" ಎಂಬುದನ್ನು ಇಡೀ ರಾಜ್ಯಕ್ಕೆ ಸಾಬೀತುಪಡಿಸೋಣ.
ನೆನಪಿರಲಿ, ಮತ ಮಾರಾಟಕ್ಕಿಟ್ಟರೆ ಅಭಿವೃದ್ಧಿ ಮರೀಚಿಕೆಯಾಗುತ್ತದೆ!. ಭವಿಷ್ಯದ ಯುವ ಪೀಳಿಗೆ ಸಂಕಷ್ಟಗಳಿಗೆ ಗುರಿಯಾಗಲಿದೆ ಎಚ್ಚರ ಎಚ್ಚರ.




