ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಒಂದು ಕಾಲದಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರ ಅಂದ್ರೆ ಅದು ಜಾತ್ಯತೀತ ಜನತಾದಳದ ಭದ್ರ ಕೋಟೆ. ಜೆಡಿಎಸ್ ಧ್ವಜ ಹಾರಾಡಿದರೆ ಅಲ್ಲಿನ ಕಾರ್ಯಕರ್ತರ ಎದೆಯಲ್ಲಿ ಹೊಸದೊಂದು ಹುಮ್ಮಸ್ಸು, ಹೆಮ್ಮೆ ಮೂಡುತ್ತಿತ್ತು. ಆದರೆ, ಇಂದಿನ ಪರಿಸ್ಥಿತಿ ಹಾಗಿಲ್ಲ. ನಾಯಕರ ನಡುವಿನ ಭಿನ್ನಾಭಿಪ್ರಾಯ, ಸಮನ್ವಯತೆಯ ಕೊರತೆ, ನನಗಿಲ್ಲದ ನಾಯಕತ್ವ ಬೇರೆಯವರಿಗೇಕೆ, ಅಪನಂಬಿಕೆ, ಪಕ್ಷ ನಿಷ್ಠೆ ಕೊರತೆ, ನಾನತ್ವದಿಂದಾಗಿ ಈ ಭದ್ರ ಕೋಟೆ ಇಂದು ಆಂತರಿಕವಾಗಿ ಛಿದ್ರವಾದಂತೆ ಭಾಸವಾಗುತ್ತಿದೆ.
ಹೆಚ್.ಡಿ. ದೇವೇಗೌಡರ ತತ್ವಗಳು ಮತ್ತು ಕುಮಾರಸ್ವಾಮಿ ಅವರ ಜನಪರ ಆಡಳಿತವನ್ನು ನೆನೆದು ಕಾರ್ಯಕರ್ತರು ಹೆಮ್ಮೆಯಿಂದ ಬೀಗುತ್ತಿದ್ದ ಮಣ್ಣಿದು. ಆದರೆ, ಇಂದು ಅದೇ ಕೋಟೆ ಆಂತರಿಕವಾಗಿ ಛಿದ್ರವಾಗಿ ಹೋಗಿದೆ. ಇದಕ್ಕೆ ಕಾರಣ ವಿರೋಧ ಪಕ್ಷಗಳ ಬಲವಲ್ಲ, ಬದಲಿಗೆ ಸ್ವಾರ್ಥ ರಾಜಕಾರಣ, ಒಳ ಒಪ್ಪಂದಗಳು ಮತ್ತು ಪಕ್ಷ ನಿಷ್ಠೆ ಇಲ್ಲದ ಸ್ಥಳೀಯ ನಾಯಕರ ಮನಸ್ಥಿತಿ!.
ಇದು ಹಿರಿಯೂರಿನ ಮಣ್ಣಿನ ಮಗ, ಪಕ್ಷವನ್ನೇ ದೇವರಂತೆ ಪೂಜಿಸುವ ಹರಿಯಬ್ಬೆ ಗ್ರಾಮದ ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತ ಹೆಚ್.ಜಿ. ಗುಂಡಯ್ಯ ಅವರ ಕಳಕಳಿಯ, ಆಕ್ರೋಶಭರಿತ ಭಾವನಾತ್ಮಕ ಅಳಲು.
ಪಕ್ಷವನ್ನು ನಂಬಿ, ಹಗಲಿರುಳು ದುಡಿಯುವ ಸಾಮಾನ್ಯ ಕಾರ್ಯಕರ್ತ ಯಾವತ್ತೂ ಸ್ವಾರ್ಥ ಬಯಸುವುದಿಲ್ಲ. ಅವನಿಗೆ ಬೇಕಿರುವುದು ಪಕ್ಷದ ಗೆಲುವು ಮತ್ತು ನಾಯಕರ ಒಗ್ಗಟ್ಟು. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ, ಅವು ಪಕ್ಷದ ಅಸ್ತಿತ್ವಕ್ಕೇ ಕೊಡಲಿ ಪೆಟ್ಟು ನೀಡಬಾರದು. ವೈಯಕ್ತಿಕ ಪ್ರತಿಷ್ಠೆ, ಅಹಂಗಳನ್ನು ಬದಿಗಿಟ್ಟು, ನಿಮ್ಮನ್ನೇ ನಂಬಿ ಬಿಸಿಲು-ಮಳೆಯೆನ್ನದೆ ದುಡಿಯುವ ಸಾಮಾನ್ಯ ಕಾರ್ಯಕರ್ತರ ಮುಖವನ್ನು ಒಮ್ಮೆ ನೋಡಿ. ನಾಯಕರ ನಡೆ ಕಾರ್ಯಕರ್ತರಲ್ಲಿ ನಿರಾಶೆ ಮೂಡಿಸಬಾರದು, ಬದಲಿಗೆ ಹೋರಾಡುವ ಕಿಚ್ಚು ಹಚ್ಚಬೇಕು.
ಒಳ ಒಪ್ಪಂದ ನಿಲ್ಲಿಸಿ, ಅಹಂ ಬಿಟ್ಟು ಕಾರ್ಯಕರ್ತರ ಕಡೆ ನೋಡಿ!:
ಪಕ್ಷದ ಬಾವುಟ ಹಿಡಿದು, ಬಿಸಿಲು-ಮಳೆಯೆನ್ನದೆ, ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡು ಜೆಡಿಎಸ್ ಗೆಲ್ಲಿಸಲು ಹಗಲಿರುಳು ದುಡಿಯುವ ಸಾಮಾನ್ಯ ಕಾರ್ಯಕರ್ತ ಯಾವತ್ತೂ ತನ್ನ ಸ್ವಾರ್ಥ ಬಯಸುವುದಿಲ್ಲ. ಆದರೆ, ಮುಂಚೂಣಿಯಲ್ಲಿರುವ ನಾಯಕರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬೇರೆ ಪಕ್ಷಗಳೊಂದಿಗೆ ‘ಒಳ ಒಪ್ಪಂದ’ ಮಾಡಿಕೊಂಡರೆ ಆ ನಿಷ್ಠಾವಂತ ಕಾರ್ಯಕರ್ತನ ಜೀವ ಹಿಂಡಿದಂತಾಗುವುದಿಲ್ಲವೇ?.
ಹಿರಿಯೂರಿನ ಮುಂಚೂಣಿ ನಾಯಕರಾದ ಡಿ. ಯಶೋಧರ, ಪಿಲಾಜನಹಳ್ಳಿ ಎಂ. ಜಯಣ್ಣ, ಶ್ರವಣಗೆರೆ ಶಿವಪ್ರಸಾದ್ ಗೌಡ, ಪರಾಜಿತ ಅಭ್ಯರ್ಥಿ ಎಂ. ರವೀಂದ್ರಪ್ಪ, ಜಿಲ್ಲಾಧ್ಯಕ್ಷ ಮಂಜುನಾಥ್, ಹಾಲಿ ಜೆಡಿಎಸ್ ಅಧ್ಯಕ್ಷರುಗಳಾದ ಹನುಮಂತರಾಯಪ್ಪ, ರಂಗೇನಹಳ್ಳಿ ಶಂಕರಮೂರ್ತಿ ಸೇರಿದಂತೆ ಮತ್ತಿತರ ಸ್ಥಳೀಯ ಮುಂಚೂಣಿ ನಾಯಕರಾದ ನಿಮ್ಮೆಲ್ಲರಲ್ಲೂ ಕಾರ್ಯಕರ್ತ ಗುಂಡಯ್ಯ ಕೇಳುತ್ತಿರುವುದು ಒಂದೇ ಪ್ರಶ್ನೆ—ಜೆಡಿಎಸ್ ಭದ್ರ ಕೋಟೆ ಇಂದು ಏಕೆ ಛಿದ್ರವಾಗಿದೆ. ಈ ಕೋಟೆ ಕಟ್ಟಲು ನಿಮ್ಮಗಳ ಪ್ರಮಾಣಿಕ ಪ್ರಯತ್ನ ಏನು, ಎಷ್ಟು ದಿನ ಸಾಮಾನ್ಯ ಕಾರ್ಯಕರ್ತರು ಅಧಿಕಾರ ಇಲ್ಲದೆ ಇರಲು ಸಾಧ್ಯ, ನೀವೆಲ್ಲಾ ಏಕೆ ಒಂದಾಗುತ್ತಿಲ್ಲ. ನಿಮ್ಮ ವೈಯಕ್ತಿಕ ಪ್ರತಿಷ್ಠೆ, ಅಹಂಕಾರ ಮತ್ತು ರಹಸ್ಯ ಒಪ್ಪಂದಗಳಿಗೆ ಸಾಮಾನ್ಯ ಕಾರ್ಯಕರ್ತರ ಬಲಿದಾನ ಏಕೆ? ನಾಯಕರಾದವರು ಮೊದಲು ಒಳ ಒಪ್ಪಂದಗಳಿಂದ ದೂರ ಸರಿದು, ಪಕ್ಷಕ್ಕೆ ಪ್ರಾಮಾಣಿಕ ನಿಷ್ಠೆ ತೋರಿಸಬೇಕಿದೆ. ಪಕ್ಷವನ್ನೇ ಉಸಿರಾಗಿಸಿಕೊಂಡಿರುವ ತಳಮಟ್ಟದ ಕಾರ್ಯಕರ್ತರ ಕಣ್ಣೀರನ್ನು ಒರೆಸಬೇಕಿದೆ.






ಕುಮಾರಣ್ಣನ ಹೋರಾಟಕ್ಕೆ ದ್ರೋಹ ಬಗೆಯಬೇಡಿ...
ನಾವು ಮರೆಯಬಾರದು, ಜೆಡಿಎಸ್ ಇಂದಿಗೂ ಜೀವಂತವಾಗಿರುವುದು ಮತ್ತು ಸಾಮಾನ್ಯ ಜನರಲ್ಲಿ ಭರವಸೆ ಮೂಡಿಸಿರುವುದು ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ನಿರಂತರ ಹೋರಾಟದಿಂದ. ಕುಮಾರಣ್ಣ, ನಿಖಿಲ್ ಅವರು ರಾಜ್ಯದ ಮೂಲೆ ಮೂಲೆ ಸುತ್ತಿ ಪಕ್ಷ ಕಟ್ಟುತ್ತಿದ್ದರೆ, ಹಿರಿಯೂರಿನಲ್ಲಿ ಸ್ಥಳೀಯ ನಾಯಕರು ಸ್ವಾರ್ಥಕ್ಕೆ ಬಿದ್ದು ಪಕ್ಷವನ್ನು ದುರ್ಬಲಗೊಳಿಸುತ್ತಿರುವುದು ಎಷ್ಟು ಸರಿ? ಎಂದು ಅಪ್ಪಟ ಜೆಡಿಎಸ್ ಅಭಿಮಾನಿ ಭೀಮಣ್ಣ, ಗುಂಡಯ್ಯ ಇವರು ಖಾರವಾಗಿ ಪ್ರಶ್ನಿಸುತ್ತಾರೆ.
"ನಾವು ನಾಯಕರ ಮುಖ ನೋಡಿ ಪಕ್ಷಕ್ಕೆ ಬಂದವರಲ್ಲ, ಕುಮಾರಣ್ಣನ ರೈತಪರ ಕಾಳಜಿ ನೋಡಿ ಬಂದವರು. ನಾಯಕರು ತಮ್ಮ ಅಹಂ ಬಿಟ್ಟು, ಕುಮಾರಸ್ವಾಮಿ ಅವರ ಕೈಬಲಪಡಿಸಲು ಮತ್ತು ಹಿರಿಯೂರಿನಲ್ಲಿ ಜೆಡಿಎಸ್ ಗೆಲ್ಲಿಸಲು ಒಂದೇ ತಾಯಿಯ ಮಕ್ಕಳಂತೆ ಪಣ ತೊಡಬೇಕಿದೆ."
ಇದು ಹರಿಯಬ್ಬೆ ಗುಂಡಯ್ಯ ಅವರ ಧ್ವನಿ.
ಕಾಲ ಮಿಂಚಿಲ್ಲ, ಕೋಟೆ ಮತ್ತೆ ಒಂದಾಗಲಿ:
ಕಾರ್ಯಕರ್ತರು ಪಕ್ಷದ ಅಡಿಪಾಯ. ಅಡಿಪಾಯವೇ ಕಡು ನಿಷ್ಠೆಯಿಂದ ಇರುವಾಗ, ಗೋಡೆಯಂತಿರುವ ನಾಯಕರು ಒಪ್ಪಂದಗಳ ಹೆಸರಲ್ಲಿ ಬಿರುಕು ಮೂಡಿಸುವುದು ಆತ್ಮದ್ರೋಹಕ್ಕೆ ಸಮ. ಹರಿಯಬ್ಬೆ ಗ್ರಾಮದ ಹೆಚ್.ಜಿ. ಗುಂಡಯ್ಯ, ಭೀಮಣ್ಣ ಅವರ ಈ ಕಳಕಳಿಯು ಕೇವಲ ಒಬ್ಬ ವ್ಯಕ್ತಿಯದ್ದಲ್ಲ, ಇದು ಹಿರಿಯೂರು ಕ್ಷೇತ್ರದ ಪ್ರತಿಯೊಬ್ಬ ಮೂಲೆ ಮೂಲೆಯ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತನ ಆಕ್ರೋಶ ಮತ್ತು ಅಂತರಾಳದ ಬೇಡಿಕೆಯಾಗಿದೆ.
ಕೋಟೆ ಮತ್ತೆ ಒಂದಾಗಲಿ...
ಹಿರಿಯೂರಿನಲ್ಲಿ ಜೆಡಿಎಸ್ ಇತಿಹಾಸ ಸಣ್ಣದಲ್ಲ. ಇತಿಹಾಸವನ್ನು ಮರುಸೃಷ್ಟಿಸುವ ಶಕ್ತಿ ಈಗಲೂ ಸ್ಥಳೀಯ ನಾಯಕರ ಕೈಯಲ್ಲಿದೆ. ಎಲ್ಲ ನಾಯಕರು ಒಂದೇ ವೇದಿಕೆಗೆ ಬಂದು, ಕಾರ್ಯಕರ್ತರ ಕೈ ಹಿಡಿದು ಮುನ್ನಡೆದರೆ ಛಿದ್ರವಾಗಿರುವ ಕೋಟೆಯನ್ನು ಮತ್ತೆ ಭದ್ರವಾಗಿ ಕಟ್ಟಬಹುದು.
ಇನ್ನಾದರೂ ಹಿರಿಯೂರಿನ ನಾಯಕರು ಎಚ್ಚೆತ್ತುಕೊಳ್ಳಲಿ, ಒಳ ಒಪ್ಪಂದದ ರಾಜಕಾರಣಕ್ಕೆ ತಿಲಾಂಜಲಿ ಹಾಡಲಿ, ಪಕ್ಷವೇ ದೇವರೆಂದು ನಂಬಿದ ಕಾರ್ಯಕರ್ತರ ಕೈ ಹಿಡಿದು ಮುನ್ನಡೆಯಲಿ. ನನಗೆ ಟಿಕೆಟ್ ಬೇಕು, ಇವನಿಗೇಕೆ ಟಿಕೆಟ್ ಎನ್ನುವ ಆತ್ಮ ವಂಚಿತ ದೂರುಗಳಿಂದ ನಾಯಕರು ದೂರ ಉಳಿಯಬೇಕಿದೆ.



