Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಿಯೂರು ನಗರಸಭೆ ವ್ಯವಸ್ಥಾಪಕಿ ಬಿ.ಆರ್. ಮಂಜುಳಮ್ಮ ಅವರಿಗೆ ಭಾವುಕ ಬೀಳ್ಕೊಡುಗೆ: "ಸಲ್ಲುವ ಆದರ್ಶ ನಾರಿ" ಎಂದು ಗುಣಗಾನ

Advertisement
Advertisement

ಚಂದ್ರವಳ್ಳಿ ನ್ಯೂಸ್, ಹಿರಿಯೂರು: 
ಸ್ಥಳೀಯ ಸಂಸ್ಥೆಗಳ ಅಧಿಕಾರಿ
, ನೌಕರರನ್ನು ಜನಸಾಮಾನ್ಯರು ಕೊಂಡಾಡುವುದು ತೀರಾ ಅಪರೂಪ. ಆದರೆ, ತಮ್ಮ ನಿಸ್ವಾರ್ಥ ಸೇವೆ, ಅಪ್ರತಿಮ ತಾಳ್ಮೆ ಹಾಗೂ ಹೋರಾಟದ ಮನೋಭಾವದಿಂದ ಎಲ್ಲರ ಮನಗೆದ್ದ ಹಿರಿಯೂರು ನಗರಸಭೆ ವ್ಯವಸ್ಥಾಪಕಿ ಬಿ.ಆರ್. ಮಂಜುಳಮ್ಮ ಅವರು ಶನಿವಾರ ಕಣ್ಣೀರ ಹನಿಗಳ ಮಧ್ಯೆ ವಯೋನಿವೃತ್ತಿ ಹೊಂದಿದರು.

ನಗರದ ಹೊರವಲಯದ ವೈಟ್ ವಾಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಬೀಳ್ಕೊಡುಗೆ ಸಮಾರಂಭವು ಅತ್ಯಂತ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಅಭಿಮಾನಿಗಳು, ಸಹೋದ್ಯೋಗಿಗಳು ಹಾಗೂ ರಾಜಕೀಯ ಮುಖಂಡರು ಜಾತಿ, ಪಕ್ಷ ಭೇದ ಮರೆತು ನೆಚ್ಚಿನ ಅಧಿಕಾರಿಗೆ ಹರಸಲು ಸಾಗರೋಪಾದಿಯಲ್ಲಿ ಹರಿದುಬಂದಿದ್ದರು.

ಶೇ. 90ರಷ್ಟು ಕೆಲಸವನ್ನು ಮಂಜುಳಮ್ಮ ಒಬ್ಬರೇ ಮಾಡುತ್ತಿದ್ದರು: ಜಿ.ಎಸ್. ಮಂಜುನಾಥ್
ಸಮಾರಂಭದಲ್ಲಿ ಭಾಗವಹಿಸಿ ಭಾವುಕರಾಗಿ ಮಾತನಾಡಿದ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್
, "ನಗರಸಭೆಯ ಪೌರಕಾರ್ಮಿಕರಿಂದ ಹಿಡಿದು ಅಧ್ಯಕ್ಷರವರೆಗೆ ಎಲ್ಲರ ಪ್ರೀತಿ ಗಳಿಸುವುದು ಸಾಮಾನ್ಯದ ಮಾತಲ್ಲ. ಮಂಜುಳಮ್ಮ ಅವರು ಶೇ. 10ರಷ್ಟು ಕೆಲಸವನ್ನು ಬೇರೆಯವರಿಗೆ ವಹಿಸಿ, ಶೇ. 90ರಷ್ಟು ಜವಾಬ್ದಾರಿಯನ್ನು ತಾವೇ ಹೆಗಲಿಗೇರಿಸಿಕೊಳ್ಳುತ್ತಿದ್ದರು. ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕೂರಿಸಿ ಸಮಸ್ಯೆ ಆಲಿಸುತ್ತಿದ್ದ ಇವರು ಎಲ್ಲರಿಗೂ ಸಲ್ಲುವ ಆದರ್ಶ ನಾರಿ" ಎಂದು ಮಂಜುನಾಥ್ ಗದ್ಗದಿತರಾದರು.

news_1782830755_0_637.webp

 

ಕಪ್ಪು ಚುಕ್ಕೆ ಇಲ್ಲದ ಸೇವೆ: ಗಣ್ಯರ ಶ್ಲಾಘನೆ
ಮಾಜಿ ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮಾತನಾಡಿ, "ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವುದು ಕತ್ತಿಯ ಮೇಲಿನ ನಡಿಗೆ. ಆದರೆ
, ಮಂಜುಳಮ್ಮ ಅವರು ಎಲ್ಲರಿಗೂ ಅಮ್ಮ, ಅಕ್ಕನಂತೆ ಕೆಲಸ ಮಾಡಿಕೊಟ್ಟು, ತಮ್ಮ ಇಡೀ ಸೇವಾವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನಿವೃತ್ತಿ ಹೊಂದುತ್ತಿರುವುದು ಹೆಮ್ಮೆಯ ವಿಚಾರ" ಎಂದು ಹೇಳಿದರು.

ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್: "ನಾನು ಅಧ್ಯಕ್ಷೆಯಾಗಿದ್ದಾಗ ಆಡಳಿತದ ಅನೇಕ ಸೂಕ್ಷ್ಮಗಳನ್ನು ಇವರಿಂದಲೇ ಕಲಿತೆ. ಯಾವುದೇ ಕಾನೂನು ಬಾಹಿರ ಕೆಲಸಕ್ಕೆ ಕೈಹಾಕದೆ, ಇಡೀ ನಗರಸಭೆಯ ವಾತಾವರಣವನ್ನು ಶಾಂತವಾಗಿಟ್ಟ ದಕ್ಷ ಅಧಿಕಾರಿ ಇವರು" ಎಂದು ಸ್ಮರಿಸಿದರು.

ಪೌರಾಡಳಿತ ನಿರ್ದೇಶನಾಲಯದ ಮೇಲಾಧಿಕಾರಿ ತುಷಾರಮಣಿ & ಸಮಾಜ ಸೇವಕಿ ಶಶಿಕಲಾ ರವಿಶಂಕರ್ ಮಾತನಾಡಿ, "ಮಂಜುಳಮ್ಮ ಮಹಿಳಾ ಸಬಲೀಕರಣಕ್ಕೆ ಮಾದರಿ. ಅತ್ಯಂತ ಗಟ್ಟಿ ಮನಸ್ಸಿನ ಮಹಿಳೆಯಾಗಿ ಇಡೀ ಆಡಳಿತವನ್ನು ದಕ್ಷತೆಯಿಂದ ನಿಭಾಯಿಸಿದ್ದಾರೆ" ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತ ಎ. ವಾಸೀಂ ಮಾತನಾಡಿ. "ಹೊರಗುತ್ತಿಗೆ ನೌಕರರಾಗಿ ಆರಂಭಿಸಿ, ದಿಟ್ಟ ಹೋರಾಟದ ಮೂಲಕ ಉನ್ನತ ಸ್ಥಾನಕ್ಕೇರಿದ ಇವರು ಹುಟ್ಟೂರಿನಲ್ಲೇ ನಿವೃತ್ತಿಯಾಗುತ್ತಿರುವುದು ಹೆಮ್ಮೆ. ಅವರು ಕೆಲಸಕ್ಕೆ ಸೇರಿದಾಗ ಇದ್ದ ಅದೇ ಉತ್ಸಾಹ, ಸಂಭ್ರಮ ಇಂದೂ ಅವರ ಮುಖದಲ್ಲಿದೆ. ಚಿತ್ರದುರ್ಗ, ಹಿರಿಯೂರಿನಿಂದ ಬಂದಿರುವ ಈ ಜನಸಾಗರವೇ ಅವರ ಶಕ್ತಿಗೆ ಸಾಕ್ಷಿ" ಎಂದು ಹೇಳಿದರು.

"ಹುಟ್ಟೂರಿನ ಜನರಿಗೆ ಸೇವೆ ಮಾಡಬೇಕೆಂಬ ಆಸೆಯಿಂದ ಇಲ್ಲಿಗೆ ಬಂದಿದ್ದೆ. ಆರಂಭದಲ್ಲಿ ಒಂದಿಷ್ಟು ಕಿರಿಕಿರಿಗಳು ಎದುರಾಗಿದ್ದು ನಿಜ. ಆದರೆ, ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಸೇವೆ ಮುಗಿಸಿದ್ದೇನೆ. ಅಧಿಕಾರದಿಂದ ನಿವೃತ್ತಿಯಾಗಿದ್ದೇನೆಯೇ ಹೊರತು ಸಮಾಜದಿಂದಲ್ಲ. ಮುಂದೆಯೂ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯಳಾಗಿರುತ್ತೇನೆ."
ಬಿ.ಆರ್. ಮಂಜುಳಮ್ಮ
, ನಿವೃತ್ತ ವ್ಯವಸ್ಥಾಪಕಿ.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಆಲೂರು ಹನುಮಂತರಾಯಪ್ಪ, ಮಾಜಿ ನಗರಸಭಾ ಅಧ್ಯಕ್ಷರಾದ ಬಾಲಕೃಷ್ಣ, ಈ. ಮಂಜುನಾಥ್, ಮಾಜಿ ಜಿಪಂ ಅಧ್ಯಕ್ಷೆ ಶಾಂತಮ್ಮ, ಮಾಜಿ ಪ್ರಭಾರ ಅಧ್ಯಕ್ಷ ಬಿ.ಎನ್. ಪ್ರಕಾಶ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ.ಡಿ. ಸಣ್ಣಪ್ಪ, ಹನುಮಂತಪ್ಪ, ರುದ್ರಾಣಿ ಗಂಗಾಧರ್, ಸುಹಾಸ್ ಸುಧಾಕರ್ ಸೇರಿದಂತೆ ನೂರಾರು ಅಭಿಮಾನಿಗಳು ಹಾಗೂ ನಗರಸಭೆಯ ಸಿಬ್ಬಂದಿ ಉಪಸ್ಥಿತರಿದ್ದು, ಮಂಜುಳಮ್ಮ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಶುಭ ಹಾರೈಸಿದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.