ಹಿರಿಯೂರಿನಲ್ಲಿ ಅ.3ರಂದು ನಿಖಿಲ್ ನೇತೃತ್ವದಲ್ಲಿ ಜೆಡಿಎಸ್ ಬೃಹತ್ ಪಾದಯಾತ್ರೆ
ಹಿರಿಯೂರು ತಾಲೂಕು ಜೆಡಿಎಸ್ ಅಧ್ಯಕ್ಷ ಗೊಂದಲಕ್ಕೆ ತೆರೆ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಅಕ್ಟೋಬರ್-3ರಂದು ಶನಿವಾರ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹಿರಿಯೂರು ತಾಲೂಕಿನಲ್ಲಿ 'ರೈತ ಸ್ವಾಭಿಮಾನಿ ಯಾತ್ರೆ'ಯನ್ನು ಹಮ್ಮಿಕೊಂಡಿದ್ದಾರೆ.
ಅಂದು ರಂಜಿತ್ ಹೋಟೆಲ್‌ನಿಂದ ಆರಂಭವಾಗುವ ಪಾದಯಾತ್ರೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಶೀಲ್ದಾರ್ ಕಚೇರಿವರೆಗೆ ಸಾಗಲಿದೆ. ಬಳಿಕ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮ ನಿಗದಿಯಾಗಿದೆ.
ಗೊಂದಲ ನಿವಾರಣೆ: ತಾಲೂಕು ಜೆಡಿಎಸ್ ಅಧ್ಯಕ್ಷರ ನೇಮಕ ಸಂಬಂಧ ಪಕ್ಷದಲ್ಲಿ ಉಂಟಾಗಿದ್ದ ಗೊಂದಲಗಳಿಗೆ ಅಧಿಕೃತವಾಗಿ ತೆರೆಬಿದ್ದಿದ್ದು, ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಕೆ. ಶಂಕರಮೂರ್ತಿ ಅವರೇ ಮುಂದುವರಿದಿದ್ದಾರೆ.
ಈ ಪಾದಯಾತ್ರೆಯ ಪೂರ್ವಭಾವಿ ಸಭೆಯನ್ನು ಹಿರಿಯೂರು ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಕೆ. ಶಂಕರಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪಕ್ಷದ ಆಂತರಿಕ ಬೆಳವಣಿಗೆಗಳು ಹಾಗೂ ಕೆಲ ದಿನಗಳಿಂದ ಹರಿದಾಡುತ್ತಿದ್ದ ವಾದ-ವಿವಾದಗಳಿಗೆ ವಿರಾಮ ನೀಡಿರುವ ಜೆಡಿಎಸ್ ಮುಖಂಡರು, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಪಕ್ಷದ ಸಂಘಟನೆಗೆ ಒತ್ತು ನೀಡಿದ್ದಾರೆ.
ಈ ಸಮಾರಂಭದಲ್ಲಿ ಪಕ್ಷದ ಹಿರಿಯ ಹಾಗೂ ಕಿರಿಯ ಮುಖಂಡರು ಒಂದೇ ವೇದಿಕೆಯನ್ನು ಹಂಚಿಕೊಳ್ಳುವ ಮೂಲಕ ಜೆಡಿಎಸ್‌ನಲ್ಲಿ ಯಾವುದೇ ಭಿನ್ನಮತವಿಲ್ಲದಿರುವುದನ್ನು ಸಾರಿದರು.
ಮುಂಬರುವ ದಿನಗಳಲ್ಲಿ ಪಕ್ಷವನ್ನು ತಾಲೂಕಿನಲ್ಲಿ ಮತ್ತಷ್ಟು ಬಲಪಡಿಸಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವುದಾಗಿ ಈ ಸಂದರ್ಭದಲ್ಲಿ ಸಂಕಲ್ಪ ಮಾಡಿ ಹಿರಿಯ ಮುಖಂಡರು ಬೆಂಬಲ ಸೂಚಿಸಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಸಭೆಯಲ್ಲಿ ಸಮಾಲೋಚನೆ ನಡೆಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಪಕ್ಷದ ಪ್ರಮುಖ ಮುಖಂಡರಾದ ಡಿ.ಯಶೋಧರ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಮಂಜುನಾಥ್, ಟಿಕೆಟ್ ಆಕಾಂಕ್ಷಿಗಳಾದ ಎಂ.ರವೀಂದ್ರಪ್ಪ, ಪಿಲಾಜನಹಳ್ಳಿ ಎಂ.ಜಯಣ್ಣ, ಶ್ರವಣಗೆರೆ ಶಿವಪ್ರಸಾದ್ ಗೌಡ, ನಂದಿಹಳ್ಳಿ ಗಿರಿಜಪ್ಪ, ವಕೀಲರಾದ ಕೂಡ್ಲಳ್ಳಿ ಶಿವಶಂಕರ್, ಪಿಟ್ಲಾಲಿ ಕರಿಯಣ್ಣ, ಹೆಚ್.ನಾಗರಾಜ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.




