ಚಂದ್ರವಳ್ಳಿ ನ್ಯೂಸ್, ಪಾಂಡಿಚೇರಿ:
ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಪಾಂಡಿಚೇರಿ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಸಂಘಟನೆಯಲ್ಲಿ ಪಾಂಡಿಚೇರಿಯ ಉಪ್ಪಲಂ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಇತ್ತೀಚೆಗೆ (ಸೆಪ್ಟೆಂಬರ್ 16 ರಿಂದ 18 ರವರೆಗೆ) ಯಶಸ್ವಿಯಾಗಿ ಜರುಗಿದ 37ನೇ ಸೌತ್ ಜೋನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2026 ರಲ್ಲಿ ಕರ್ನಾಟಕದ ಯುವ ಅಥ್ಲೀಟ್ ಅದ್ಭುತ ಸಾಧನೆ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಎ.ರಾಮಕೃಷ್ಣ ಅವರ ಏಕೈಕ ಸುಪುತ್ರ ಎ.ಆರ್ ಸುಭಾಷ್ ಅವರು ಕರ್ನಾಟಕ ರಾಜ್ಯದ ಪರವಾಗಿ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು, ಅತ್ಯಂತ ಕಠಿಣ ಸ್ಪರ್ಧೆಯ ನಡುವೆಯೂ ತೃತೀಯ ಸ್ಥಾನ (ಬೆಳ್ಳಿ/ಕಂಚಿನ ಪದಕ) ಪಡೆದು ಪದಕ ಬಾಜನರಾಗಿದ್ದಾರೆ.
ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ನೂರಾರು ಪ್ರತಿಭಾವಂತ ಕ್ರೀಡಾಪಟುಗಳೊಂದಿಗೆ ಸೆಣಸಾಡಿ ಈ ಯಶಸ್ಸು ಸಾಧಿಸಿರುವ ಸುಭಾಷ್, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈ ಸಾಧನೆಯ ಮೂಲಕ ಅವರು ಮುಂಬರುವ ದಿನಗಳಲ್ಲಿ ಚೆನ್ನೈನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
ಯುವ ಅಥ್ಲೀಟ್‌ನ ಈ ಭರ್ಜರಿ ಯಶಸ್ಸು ಅವರ ಹೆಮ್ಮೆಯ ಪೋಷಕರಿಗೆ ಹಾಗೂ ವಿದ್ಯಾರ್ಥಿಯನ್ನು ಕ್ರೀಡೆಯಲ್ಲಿ ಮುಂಚೂಣಿಗೆ ತರಲು ಶ್ರಮಿಸಿದ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಗುರು ವೃಂದ ವರ್ಗಕ್ಕೆ ಅಪಾರ ಸಂತಸ ತಂದಿದೆ. ಕ್ರೀಡಾಭಿಮಾನಿಗಳು ಮತ್ತು ಸ್ಥಳೀಯರು ಯುವ ಸಾಧಕನಿಗೆ ಅಭಿನಂದನೆಗಳ ಮಹಾಪೂರ ಹರಿಸಿದ್ದಾರೆ.




