ಚಂದ್ರವಳ್ಳಿ ನ್ಯೂಸ್, ಮಂಗಳೂರು:
ಕರಾವಳಿಗರ ದಶಕಗಳ ಕನಸು ಹಾಗೂ ತುಳುನಾಡಿನ ಜನರ ನಿರಂತರ ಹೋರಾಟಕ್ಕೆ ಕೊನೆಗೂ ಐತಿಹಾಸಿಕ ಜಯ ಸಿಕ್ಕಿದೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಶೇಷ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, ತುಳು ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಲು ಸರ್ಕಾರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಸಂಪುಟ ಸಭೆಯಲ್ಲಿ, ತುಳು ಭಾಷಾ ಮಾನ್ಯತೆಯ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮರುನಾಮಕರಣ, ಪುತ್ತೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಧಾರ್ಮಿಕ ಕ್ಷೇತ್ರಗಳಿಗೆ ಅನುದಾನ, ಫಿಶರೀಸ್ ಪಾರ್ಕ್ ಹಾಗೂ ಪ್ರವಾಸೋದ್ಯಮ ಸೇರಿದಂತೆ ಕರಾವಳಿಯ ಸಮಗ್ರ ಅಭಿವೃದ್ಧಿಗೆ ಹಲವು ಮಹತ್ವದ ಘೋಷಣೆಗಳನ್ನು ಮಾಡಲಾಗಿದೆ.
ತುಳು ಭಾಷೆಗೆ ಸಿಕ್ಕ ಅಧಿಕೃತ ಗೌರವ:
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ (ತುಳುನಾಡು) ಜನರ ಬಹುದಿನಗಳ ಹಕ್ಕೊತ್ತಾಯವಾಗಿದ್ದ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಲು ರಾಜ್ಯ ಸರ್ಕಾರ ಅಧಿಕೃತ ಒಪ್ಪಿಗೆ ಸೂಚಿಸಿದೆ.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ಹಾಗೂ 2,000 ವರ್ಷಗಳಿಗಿಂತಲೂ ಹೆಚ್ಚು ಇತಿಹಾಸ ಹೊಂದಿರುವ ತುಳು ಭಾಷೆಯನ್ನು ಜಾಗತಿಕವಾಗಿ ಸುಮಾರು ಒಂದು ಕೋಟಿ ಜನರು ಮಾತನಾಡುತ್ತಿದ್ದಾರೆ.
ಕನ್ನಡ ಆಡಳಿತ ಭಾಷೆಯಾಗಿದ್ದು, ಮೊದಲ ಹೆಚ್ಚುವರಿ ಆಡಳಿತ ಭಾಷೆ ಇಂಗ್ಲಿಷ್ ಆಗಿದ್ದು, ಇನ್ನುಮುಂದೆ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ತುಳು ಸೇರ್ಪಡೆಯಾಗಲಿದೆ.
ಕರಾವಳಿ ಭಾಗದ ಸರ್ಕಾರಿ ಸಂಸ್ಥೆಗಳು ಮತ್ತು ಕಚೇರಿಗಳಲ್ಲಿ ದೈನಂದಿನ ಆಡಳಿತಾತ್ಮಕ ಸಂವಹನಕ್ಕಾಗಿ ಕನ್ನಡದ ಜೊತೆಗೆ ತುಳು ಭಾಷೆಯನ್ನು ಬಳಸಲು ಅಧಿಕೃತ ಅವಕಾಶ ಸಿಗಲಿದೆ. ಜಿಲ್ಲಾಡಳಿತವನ್ನು ಅನುಷ್ಠಾನ ಕೇಂದ್ರವಾಗಿ ಮಾಡಲಾಗಿದ್ದು, ಅನುವಾದ, ತರಬೇತಿ ಮತ್ತು ಭಾಷಾ ಬಳಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಪ್ರತಿ ವರ್ಷ ₹82 ಲಕ್ಷ ನೀಡಲು ನಿರ್ಧರಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಇನ್ನು ಮುಂದೆ 'ಮಂಗಳೂರು ಜಿಲ್ಲೆ'?:
ತುಳು ಭಾಷಾ ಮಾನ್ಯತೆಯ ಜೊತೆಗೆ, ಕರಾವಳಿ ಜನರ ಮತ್ತೊಂದು ಪ್ರಮುಖ ಬೇಡಿಕೆಯಾದ 'ದಕ್ಷಿಣ ಕನ್ನಡ' ಜಿಲ್ಲೆಯನ್ನು ಶೀಘ್ರದಲ್ಲೇ 'ಮಂಗಳೂರು ಜಿಲ್ಲೆ' ಎಂದು ಮರುನಾಮಕರಣ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಗಿದೆ.
ಪುತ್ತೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು:
2025-26ರ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಪುಟ ಅಂತಿಮ ಅನುಮೋದನೆ ನೀಡಿದೆ. ಬನ್ನೂರು ಗ್ರಾಮದ ಸೇಡಿಯಾಪು ಬಳಿ ಗುರುತಿಸಿರುವ ನಿವೇಶನದಲ್ಲಿ ಜಿಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜು, ಬೋಧನಾ ಆಸ್ಪತ್ರೆ ಮತ್ತು ಹಾಸ್ಟೆಲ್ ಮತ್ತಿತರ ಮೂಲಸೌಕರ್ಯಗಳನ್ನು ₹549.79 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಇದು ಬಡ ರೋಗಿಗಳಿಗೆ ವರದಾನವಾಗಲಿದೆ.
ಧಾರ್ಮಿಕ ಕ್ಷೇತ್ರಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಅನುದಾನ:
ಕರಾವಳಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ.
ದೇಗುಲ ಹಾಗೂ ಮಠಗಳ ಅಭಿವೃದ್ಧಿ: ಐತಿಹಾಸಿಕ ದೇವಸ್ಥಾನಗಳು ಮತ್ತು ಮಠಗಳ ಜೀರ್ಣೋದ್ಧಾರ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ಒಟ್ಟು ₹12 ಕೋಟಿ ವಿಶೇಷ ಅನುದಾನ ನೀಡಲಾಗಿದೆ. ಇದರಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರಿಗೆ ₹5 ಕೋಟಿ ಹಾಗೂ ಒಡಿಯೂರು ಮಠ, ಮಾಣಿಲ ಮಠ, ಕಾಣಿಯೂರು ಚಾಮುಂಡೇಶ್ವರಿ ಕ್ಷೇತ್ರ, ಪಿಲಿಚಾಮುಂಡಿ ದೇವಸ್ಥಾನ, ಕನ್ಯಾಡಿ ರಾಮ ಕ್ಷೇತ್ರ, ಕೇಮಾರು ಮಠ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ತಲಾ ₹1 ಕೋಟಿ ಹಂಚಿಕೆಯಾಗಿದೆ.
ಸೌಹಾರ್ದತೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ: ಉಳ್ಳಾಲ ಸೈಯದ್ ಮದನಿ ಜುಮ್ಮಾ ಮಸೀದಿಗೆ ₹5 ಕೋಟಿ ಸೇರಿದಂತೆ ವಿವಿಧ ಮಸೀದಿಗಳು, ದಾರುನ್ನೂರು ಹಾಗೂ ಅಲ್-ಮರ್ಕಜುಲ್ ಇಸ್ಲಾಮಿ ಸೇರಿದಂತೆ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಿಗೆ ಹಾಗೂ ಸೇಂಟ್ ಜೋಸೆಫ್ ವಾಜ್ ಶ್ರೈನ್ ಮುಡಿಪು, ಇನ್‌ಫೆಂಟ್ ಜೀಸಸ್ ಶ್ರೈನ್ ಬಿಕರ್ನಕಟ್ಟೆ, ಸೇಂಟ್ ಲಾರೆನ್ಸ್ ಶ್ರೈನ್ ಬೊಂದೇಲ್ ಮುಂತಾದ ಚರ್ಚ್‌ಗಳ ಅಭಿವೃದ್ಧಿಗೂ ವಿಶೇಷ ನೆರವು ಘೋಷಿಸಲಾಗಿದೆ.
ಕೈಗಾರಿಕೆ, ಮೀನುಗಾರಿಕೆ ಹಾಗೂ ಕರಾವಳಿ ಅಭಿವೃದ್ಧಿ:
ಮುಲ್ಕಿಯಲ್ಲಿ ಫಿಶರೀಸ್ ಪಾರ್ಕ್: ಕರಾವಳಿಯ ಮೀನುಗಾರಿಕೆಗೆ ಇನ್ನಷ್ಟು ಕೈಗಾರಿಕಾ ಸ್ಪರ್ಶ ನೀಡಲು ಮುಲ್ಕಿ ತಾಲ್ಲೂಕಿನ ಕೊಲ್ಲೂರು, ಬಳ್ಳುಂಜೆ ಮತ್ತು ಉಳಿಪಾಡಿ ಗ್ರಾಮಗಳಲ್ಲಿ 150 ಎಕರೆ ಜಾಗವನ್ನು ಫಿಶರೀಸ್ ಪಾರ್ಕ್‌ಗಾಗಿ ಕಾಯ್ದಿರಿಸಲಾಗಿದೆ.
ಉಡುಪಿ ಹೆಬ್ರಿಯಲ್ಲಿ ಕೈಗಾರಿಕಾ ವಲಯ: ಹೆಬ್ರಿ ತಾಲ್ಲೂಕಿನ ಕೆರೆಬೆಟ್ಟು ಮತ್ತು ಶಿವಪುರ ಗ್ರಾಮಗಳಲ್ಲಿ 113.89 ಎಕರೆ ಜಮೀನನ್ನು ಡೇಟಾ ಸೆಂಟರ್‌ಗಳು ಮತ್ತು ನೂತನ ಉತ್ಪಾದನಾ ಘಟಕಗಳ ಸ್ಥಾಪನೆಗೆ ಅಭಿವೃದ್ಧಿಪಡಿಸಲಾಗುತ್ತಿದೆ.
ಜಾನಪದ ಕ್ರೀಡೆ ಕಂಬಳ: ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಜಾನಪದ ಕ್ರೀಡೆಯಾದ 'ಕಂಬಳ'ಕ್ಕೆ ನೀಡುತ್ತಿದ್ದ ವಾರ್ಷಿಕ ಅನುದಾನವನ್ನು ₹40 ಲಕ್ಷದಿಂದ ₹1 ಕೋಟಿಗೆ ಭರ್ಜರಿಯಾಗಿ ಏರಿಕೆ ಮಾಡಲಾಗಿದೆ.
ಕಡಲ ಕೊರೆತ ತಡೆ: ಕರಾವಳಿ ತೀರದಲ್ಲಿ ಕಡಲ ಕೊರೆತ ತಡೆ ಕಾಮಗಾರಿಗಳಿಗಾಗಿ ಎನ್‌ಡಿಆರ್‌ಎಫ್ ಮಾರ್ಗಸೂಚಿ ಅಡಿಯಲ್ಲಿ ₹208.94 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಒತ್ತಾಯಿಸಲಾಗಿದೆ.
ಪ್ರವಾಸೋದ್ಯಮ ಮತ್ತು ಸಾರಿಗೆ ಮೂಲಸೌಕರ್ಯ:
ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ 2026: ₹500 ಕೋಟಿ ವೆಚ್ಚದಲ್ಲಿ ಕರಾವಳಿ, ಪಶ್ಚಿಮಘಟ್ಟ ಮತ್ತು ಸಾಹಸ ಪ್ರವಾಸೋದ್ಯಮ ಸರ್ಕ್ಯೂಟ್‌ಗಳ ಅಭಿವೃದ್ಧಿ. ಜೊತೆಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಒಟ್ಟು 12 ದ್ವೀಪಗಳ ಅಭಿವೃದ್ಧಿ.
ವಿಶೇಷ ರೆಸಾರ್ಟ್ ಯೋಜನೆಗಳು: ಮಂಗಳೂರು ಲೈಟ್‌ಹೌಸ್‌ಆವರಣದಲ್ಲಿ ₹60.34 ಕೋಟಿ ವೆಚ್ಚದಲ್ಲಿ 3-ಸ್ಟಾರ್ ಹೋಟೆಲ್, ಕೋಡಿಕಲ್‌ನಲ್ಲಿ ರಿವರ್‌ಫ್ರಂಟ್‌ವೆಲ್‌ನೆಸ್ ರೆಸಾರ್ಟ್(₹73 ಕೋಟಿ), ತಣ್ಣೀರುಬಾವಿಯಲ್ಲಿ ಗ್ಲಾಂಪಿಂಗ್ & ಸಾಗರ ಅನುಭವ ಕೇಂದ್ರ (₹53 ಕೋಟಿ).
ಸಾರಿಗೆ ಮತ್ತು ಸಂಪರ್ಕ: ಕಾರವಾರ ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ ₹250.05 ಕೋಟಿ ಅನುಮೋದನೆ ಪರಿಷ್ಕರಣೆ ಹಾಗೂ ಗುರುಪುರ-ನೇತ್ರಾವತಿ ನದಿಗಳಲ್ಲಿ ಜಲ ಮೆಟ್ರೋ ಅನುಷ್ಠಾನಕ್ಕೆ ತಾತ್ವಿಕ ಒಪ್ಪಿಗೆ. ಕರಾವಳಿಯಲ್ಲಿ ಪಾಲಿಮಾರ್, ಕೋಟೆಪುರ-ಬೋಳಾರ, ಮರವೂರು, ಕಟೀಲು ಸೇರಿದಂತೆ 6 ಪ್ರಮುಖ ಸೇತುವೆಗಳ ನಿರ್ಮಾಣ.
ಆರೋಗ್ಯ ಮತ್ತು ಶಿಕ್ಷಣ: ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆ ಉನ್ನತೀಕರಣ (ಹೆಚ್ಚುವರಿ 200 ಹಾಸಿಗೆಗಳು), ಕರಾವಳಿಯ 49 ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ₹245 ಕೋಟಿ ಹಾಗೂ ಮಂಗಳಾ ಕ್ರೀಡಾಂಗಣವನ್ನು ಅಂತರರಾಷ್ಟ್ರೀಯ ದರ್ಜೆಗೆ ಏರಿಸಲು ₹20 ಕೋಟಿ ಅನುದಾನ ನೀಡಲಾಗಿದೆ.




