ಚಂದ್ರವಳ್ಳಿ ನ್ಯೂಸ್, ರಾಜ್ಗಢ (ಮಧ್ಯಪ್ರದೇಶ):
ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಕರಣವೊಂದರ ಆರೋಪಿಯ ಬಂಧನಕ್ಕಾಗಿ ತೆರಳಿದ್ದ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ನಾಲ್ವರು ಪ್ರಯಾಣಿಕರು ದುರಂತವಾಗಿ ಮೃತಪಟ್ಟಿದ್ದಾರೆ.
ಮೃತಪಟ್ಟ ಅಧಿಕಾರಿಯನ್ನು ಬೆಂಗಳೂರಿನ ಆಗ್ನೇಯ ಸೈಬರ್ ಕ್ರೈಂ ಠಾಣೆಯ ಇನ್ಸ್ಪೆಕ್ಟರ್ ರವಿ ಕೆ.ಬಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅವರ ತಂಡದಲ್ಲಿದ್ದ ಪೊಲೀಸ್ ಸಿಬ್ಬಂದಿಯಾದ ವಿಶ್ವನಾಥ್ ಹಾಗೂ ರಮೇಶ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಘಟನೆಯ ವಿವರ: ಖಾಸಗಿ ಬಸ್ ಕಾನ್ಪುರದಿಂದ ಇಂದೋರ್ ಕಡೆಗೆ ಪ್ರಯಾಣಿಸುತ್ತಿದ್ದಾಗ, ರಾಜ್ಗಢದ ಬಿಯೋರಾದ ಭೋಪಾಲ್ ಬೈಪಾಸ್ ಸೇತುವೆಯ ತಿರುವಿನಲ್ಲಿ ಭಾರಿ ವೇಗದಲ್ಲಿದ್ದ ಬಸ್ ನಿಯಂತ್ರಣ ತಪ್ಪಿ ಸೇತುವೆಯ ಗೋಡೆಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬಸ್ನ ಮೇಲಿನ ಡೆಕ್ನ ಸೀಟ್ಗಳಲ್ಲಿದ್ದ ಪ್ರಯಾಣಿಕರು ಕಿಟಕಿಗಳಿಂದ ಹೊರಗೆ ಎಸೆಯಲ್ಪಟ್ಟು ಸೇತುವೆಯಿಂದ ಕೆಳಗೆ ಬಿದ್ದಿದ್ದಾರೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಶವಗಳು ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ.
11 ಪ್ರಯಾಣಿಕರಿಗೆ ಗಾಯ: ಘಟನೆಯಲ್ಲಿ 11 ಜನರು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸ್ಥಳೀಯರ ಹಾಗೂ ಪೊಲೀಸರ ನೆರವಿನಿಂದ ರಕ್ಷಿಸಿ ಬಿಯೋರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಆರೋಪಿ ಬಂಧನಕ್ಕೆ ತೆರಳಿದ್ದ ಅಧಿಕಾರಿ: ಘಟನೆ ಕುರಿತು ಮಾಹಿತಿ ನೀಡಿದ ರಾಜ್ಗಢ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಟೋಲಾನಿ, "ಬಸ್ನ ಅತಿಯಾದ ವೇಗವೇ ಅಪಘಾತಕ್ಕೆ ಪ್ರಾಥಮಿಕ ಕಾರಣವೆಂದು ತಿಳಿದುಬಂದಿದೆ. ಬೆಂಗಳೂರು ಸೈಬರ್ ಕ್ರೈಂ ಇನ್ಸ್ಪೆಕ್ಟರ್ ರವಿ ಕೆ.ಬಿ. ಅವರು ಪ್ರಕರಣವೊಂದರ ಆರೋಪಿ ಬಂಧಿಸಲು ತಂಡದೊಂದಿಗೆ ಆಗಮಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅವರ ತಂಡದ ವಿಶ್ವನಾಥ್ ಮತ್ತು ರಮೇಶ್ ಗಾಯಗೊಂಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ" ಎಂದು ತಿಳಿಸಿದ್ದಾರೆ.
ದುರಂತ ಸಂಭವಿಸಿದ ಸ್ಥಳಕ್ಕೆ ಮಧ್ಯಪ್ರದೇಶದ ಸಚಿವ ನಾರಾಯಣ್ ಸಿಂಗ್ ಪನ್ವಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೇತುವೆಯ ತಿರುವಿನಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಸ್ಪೀಡ್ ಬ್ರೇಕರ್ಗಳ ಅಳವಡಿಕೆ ಹಾಗೂ ಅಪಘಾತದ ಸಮಗ್ರ ತನಿಖೆಗೆ ಆದೇಶಿಸುವುದಾಗಿ ಸಚಿವರು ತಿಳಿಸಿದ್ದಾರೆ.




