ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ವಿವಾಹೇತರ ಸಂಬಂಧಕ್ಕೆ ಅಡ್ಡಬಂದ ಪತಿಯನ್ನೇ ಪ್ರಿಯಕರನೊಂದಿಗೆ ಸೇರಿ ₹2 ಲಕ್ಷ ಸುಪಾರಿ ನೀಡಿ ಭೀಕರವಾಗಿ ಕೊಲೆ ಮಾಡಿಸಿದ್ದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೊಣೆಹಳ್ಳಿ ಹೊಸೂರು ಗ್ರಾಮದಲ್ಲಿ ನಡೆದಿದ್ದು, ಜಗಳೂರು ಪೊಲೀಸರ ಕಾರ್ಯಾಚರಣೆಯಿಂದ ಹತ್ಯೆ ಪ್ರಕರಣ ಬಯಲಾಗಿದೆ.
ದೊಣೆಹಳ್ಳಿ ಹೊಸೂರು ಗ್ರಾಮದ ಬಸವರಾಜ್ (37) ಕೊಲೆಯಾದ ದುರದೃಷ್ಟಕರ ಪತಿ. ಹತ್ಯೆ ಎಸಗಿದ ಆರೋಪಿಗಳಾದ ಪತ್ನಿ ಸುನೀತಾ, ಆಕೆಯ ಪ್ರಿಯಕರ ಬೆಣ್ಣೆಹಳ್ಳಿ ತಿಪ್ಪೇಸ್ವಾಮಿ ಹಾಗೂ ಕೃತ್ಯಕ್ಕೆ ನೆರವಾಗಿದ್ದ ಓಂಕಾರಪ್ಪ ಎಂಬುವವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ವಿವಾಹೇತರ ಸಂಬಂಧವೇ ಕೊಲೆಗೆ ಕಾರಣ:
ಪತ್ನಿ ಸುನೀತಾ ಹಾಗೂ ಬೆಣ್ಣೆಹಳ್ಳಿ ತಿಪ್ಪೇಸ್ವಾಮಿ ನಡುವೆ ವಿವಾಹೇತರ ಸಂಬಂಧವಿತ್ತು. ಈ ವಿಚಾರ ತಿಳಿದ ಪತಿ ಬಸವರಾಜ್ ಮನೆಯಲ್ಲಿ ಗಲಾಟೆ ಮಾಡಿಕೊಂಡಿದ್ದನು. ತಮ್ಮ ಅಕ್ರಮ ಸಂಬಂಧಕ್ಕೆ ಬಸವರಾಜ್ ನಿರಂತರವಾಗಿ ಅಡ್ಡಿಯಾಗುತ್ತಿದ್ದರಿಂದ, ಆತನನ್ನು ಮುಗಿಸಲು ಪತ್ನಿ ಸುನೀತಾ ಹಾಗೂ ಆಕೆಯ ಪ್ರಿಯಕರ ಸ್ಕೆಚ್ ಹಾಕಿದ್ದರು.
ಸಾಲ ಕೊಡಿಸುವುದಾಗಿ ನಂಬಿಸಿ ಕಂಠಪೂರ್ತಿ ಕುಡಿಸಿ ಹತ್ಯೆ: ಬಸವರಾಜ್ಗೆ ಸಾಲ ಕೊಡಿಸುವುದಾಗಿ ನಂಬಿಸಿ ಕರೆಸಿಕೊಂಡ ಆರೋಪಿಗಳು, ಆತನಿಗೆ ಕಂಠಪೂರ್ತಿ ಮದ್ಯಪಾನ ಮಾಡಿಸಿದ್ದರು.
ಬಳಿಕ ದೊಣೆಹಳ್ಳಿ ಕ್ರಾಸ್ನಿಂದ ಓಂಕಾರಪ್ಪ ಎಂಬಾತನ ಕಾರಿನಲ್ಲಿ ಬಸವರಾಜ್ನನ್ನು ಕರೆದೊಯ್ದು, ಕತ್ತು ಹಿಸುಕಿ ತಲೆಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿದ್ದರು. ನಂತರ ಮೃತದೇಹವನ್ನು ತುಮಕೂರು ಜಿಲ್ಲೆಯ ಹುಳಿಯಾರು ಬಳಿಯ 'ಕುದುರೆ ಕಣಿವೆ ಅರಣ್ಯ ಪ್ರದೇಶ'ದಲ್ಲಿ ಎಸೆದು ಪರಾರಿಯಾಗಿದ್ದರು.
ಕೊಲೆಯಾದ ಒಂದು ತಿಂಗಳ ಬಳಿಕ ಕಾಣೆಯಾಗಿದ್ದಾನೆಂದು ನಾಟಕ! ಆರೋಪಿಗಳು ಕೊಲೆ ಮಾಡಿದ್ದು ಜೂನ್ ತಿಂಗಳಿನಲ್ಲಿ. ಆದರೆ ಪತ್ನಿ ಸುನೀತಾ ಜುಲೈ ತಿಂಗಳಲ್ಲಿ ಜಗಳೂರು ಪೊಲೀಸ್ ಠಾಣೆಗೆ ತೆರಳಿ, ತನ್ನ ಗಂಡ ಬಸವರಾಜ್ ನಾಪತ್ತೆಯಾಗಿದ್ದಾನೆ ಎಂದು ಮಿಸ್ಸಿಂಗ್ ದೂರು ನೀಡಿದ್ದಳು.
ಕೊಲೆಯಾದ ಬರೋಬ್ಬರಿ ಒಂದು ತಿಂಗಳ ನಂತರ ಪತ್ನಿ ಮಿಸ್ಸಿಂಗ್ ದೂರು ದಾಖಲಿಸಿದ್ದೇ ಪೊಲೀಸರಿಗೆ ಅನುಮಾನ ಮೂಡಲು ಕಾರಣವಾಯಿತು.
ಜಗಳೂರು ಪೊಲೀಸ್ ಠಾಣೆಯ ಪಿಐ ಸಿದ್ದರಾಮಯ್ಯ ಅವರ ನೇತೃತ್ವದ ತಂಡ ತಾಂತ್ರಿಕ ಮಾಹಿತಿ ಆಧಾರದ ಮೇಲೆ ಕೂಲಂಕುಷ ತನಿಖೆ ನಡೆಸಿದಾಗ ಈ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಆರೋಪಿಗಳು ಪ್ರಸ್ತುತ ನಾಪತ್ತೆಯಾಗಿದ್ದು, ಪೊಲೀಸರು ಅವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.




