ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ಮಾನವನ ಮೆದುಳು ಪ್ರಕೃತಿಯ ಅತ್ಯಂತ ವಿಸ್ಮಯಕಾರಿ ಸೃಷ್ಟಿಯಾಗಿದೆ. ಇದು ಕೇವಲ ಒಂದು ಶಾರೀರಿಕ ಅಂಗವಲ್ಲ, ಬದಲಿಗೆ ಜಗತ್ತಿನ ಅತ್ಯಂತ ಬಲಿಷ್ಠ ಸೂಪರ್ ಕಂಪ್ಯೂಟರ್‌ಗಳನ್ನೂ ಮೀರಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ. ಮೆದುಳಿನ ಅಗಾಧ ಸಾಮರ್ಥ್ಯಕ್ಕೆ ಬೇರೆ ಯಾವುದೂ ಸರಿಸಾಟಿಯಿಲ್ಲ" ಎಂದು ಸ್ಮರಣಶಕ್ತಿಯಲ್ಲಿ ವಿಶ್ವ ದಾಖಲೆ ಬರೆದಿರುವ ಅಂತರರಾಷ್ಟ್ರೀಯ ಸ್ಮರಣಶಕ್ತಿ ತರಬೇತುದಾರ ಡಾ. ರವಿಪ್ರಸಾದ್ ಸಜ್ಜನ್ ಎಂ. ಅವರು ಅಭಿಪ್ರಾಯಪಟ್ಟರು.
ಹಿರಿಯೂರು ನಗರದ ಸಮೀಪದ ಭೀಮನಬಂಡೆಯಲ್ಲಿರುವ ಯಾಜ್ಞವಲ್ಕ್ಯ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ “ಮಾನವನ ಮೆದುಳು ಒಂದು ಶಕ್ತಿಶಾಲಿ ಕಂಪ್ಯೂಟರ್” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮೆದುಳಿನ ಅಗಾಧ ಸಾಮರ್ಥ್ಯ:
ವಿಜ್ಞಾನಿಗಳ ಸಂಶೋಧನೆ ಹಾಗೂ ಅಧ್ಯಯನಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ಮನುಷ್ಯನ ಮೆದುಳು ಸರಿಸುಮಾರು 2.5 ಪೆಟಾಬೈಟ್ (ಅಂದರೆ ಸುಮಾರು 25 ಲಕ್ಷ ಜಿಬಿ) ಮಾಹಿತಿಯನ್ನು ಸಂಗ್ರಹಿಸಿಡುವ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಇದು ಸರಿಸುಮಾರು 3 ಮಿಲಿಯನ್ (30 ಲಕ್ಷ) ಗಂಟೆಗಳ ಹೆಚ್‌ಡಿ ವಿಡಿಯೋ ಸಂಗ್ರಹಣೆಗೆ ಮತ್ತು 340 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ವಿಡಿಯೋ ಪ್ಲೇಬ್ಯಾಕ್ ಮಾಡಲು ಸಮಾನವಾಗಿದೆ. ಈ ಕಾರಣದಿಂದಾಗಿಯೇ ಮಾನವನ ಮೆದುಳನ್ನು ಅತ್ಯಂತ ಶಕ್ತಿಶಾಲಿ ಕಂಪ್ಯೂಟರ್ ಎಂದು ಕರೆಯಲಾಗುತ್ತದೆ ಎಂದರು.
ನಮ್ಮ ಮೆದುಳಿನಲ್ಲಿ ಸರಿಸುಮಾರು 86 ಶತಕೋಟಿ ನರಕೋಶಗಳಿದ್ದು, ಪ್ರತಿಯೊಂದು ನರಕೋಶವೂ 'ಸಿನಾಪ್ಸ್' ಎಂದು ಕರೆಯಲ್ಪಡುವ ಸಾವಿರಾರು ಸಂಪರ್ಕ ಜಾಲಗಳನ್ನು ಹೊಂದಿವೆ. ಈ ಅದ್ಭುತ ಜಾಲವೇ ಮೆದುಳಿನಲ್ಲಿ ಅಪಾರ ಪ್ರಮಾಣದ ಮಾಹಿತಿ ಸಂಗ್ರಹವಾಗಲು ಕಾರಣವಾಗಿದೆ ಎಂದು ಅವರು ವಿವರಿಸಿದರು.
"ಜಗತ್ತು ಕಂಡ ಅತ್ಯದ್ಭುತ ಮೇಧಾವಿ ಆಲ್ಬರ್ಟ್ ಐನ್‌ಸ್ಟೀನ್ ಅವರೇ ತಮ್ಮ ಜೀವಿತಾವಧಿಯಲ್ಲಿ ಮೆದುಳಿನ ಒಟ್ಟು ಸಾಮರ್ಥ್ಯದ ಕೇವಲ ಶೇಕಡಾ 7ರಷ್ಟನ್ನು ಮಾತ್ರ ಬಳಸಿ ಮಹಾನ್ ಮೇಧಾವಿಯಾಗಿದ್ದರು. ಆದರೆ ಜನಸಾಮಾನ್ಯರಾದ ನಾವು ನಮ್ಮ ಮೆದುಳಿನಲ್ಲಿ ಅಗಾಧ ಶಕ್ತಿ ಇದ್ದರೂ ಅದರ ಸಂಪೂರ್ಣ ಉಪಯೋಗ ಪಡೆಯುತ್ತಿಲ್ಲ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪ್ರಕೃತಿ ದತ್ತವಾಗಿ ನೀಡಿರುವ ಈ ಮೆದುಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಉನ್ನತ ಸಾಧನೆಗೈದು ಯಶಸ್ವಿ ವ್ಯಕ್ತಿಗಳಾಗಬೇಕು."
ಡಾ. ರವಿಪ್ರಸಾದ್ ಸಜ್ಜನ್.
ವಿದ್ಯಾರ್ಥಿಗಳಿಗೆ ತರಬೇತುದಾರರು ಒಂದು ವರದಾನ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಾಜ್ಞವಲ್ಕ್ಯ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಶ್ರೀನಿವಾಸಮೂರ್ತಿ ಅವರು, "ಡಾ. ರವಿಪ್ರಸಾದ್ ಸಜ್ಜನ್ ಅವರು ವಿಶ್ವಮಟ್ಟದಲ್ಲಿ 'ವರ್ಲ್ಡ್ ಮೆಮೊರಿ ಮ್ಯಾನ್' ಎಂದೇ ಪ್ರಸಿದ್ಧರಾಗಿದ್ದಾರೆ. ಸೃಜನಾತ್ಮಕ ಸ್ಮರಣಶಕ್ತಿ ಮತ್ತು ವ್ಯಕ್ತಿತ್ವ ವಿಕಸನ ಕ್ಷೇತ್ರದಲ್ಲಿ ವಿಶೇಷ ಪಾಂಡಿತ್ಯ ಹೊಂದಿರುವ ಇವರ ಉಪನ್ಯಾಸ ಹಾಗೂ ಕಾರ್ಯಾಗಾರಗಳಿಂದ ದೇಶದಾದ್ಯಂತ ಈಗಾಗಲೇ 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡಿದ್ದಾರೆ. ಮೂಲತಃ ಹಿರಿಯೂರಿನವರೇ ಆದ ಇವರು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡುತ್ತಿರುವುದು ಹೆಮ್ಮೆಯ ವಿಷಯ. ಇಂತಹ ತರಬೇತುದಾರರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊರೆತ ದೊಡ್ಡ ವರದಾನ" ಎಂದು ಶ್ಲಾಘಿಸಿದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಪ್ರಮುಖರಾದ ವೇಣುಕುಮಾರ್, ನವೀನ್ ಪ್ರಭು ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



