ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಸ್ತುತ ದಿನಗಳಲ್ಲಿ ಮಾನವ ಜಗತ್ತು ಅಭಿವೃದ್ಧಿಯ ಹೊಸ ಶಿಖರಗಳನ್ನು ಏರುತ್ತಿದೆ. ಆದರೆ, ಈ ಪ್ರಗತಿಯ ಓಟದಲ್ಲಿ ನಾವು ಏನನ್ನು ಪಡೆಯುತ್ತಿದ್ದೇವೆ ಮತ್ತು ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಆತ್ಮಾವಲೋಕನ ಮಾಡಿಕೊಳ್ಳುವ ಅನಿವಾರ್ಯತೆ ಎಂದಿಗಿಂತಲೂ ಇಂದು ಹೆಚ್ಚಾಗಿದೆ. ಇಂದಿನ ಆಧುನಿಕ ಜೀವನ ವಿಧಾನವು ಸಂಪೂರ್ಣವಾಗಿ ಯಂತ್ರ ಹಾಗೂ ತಂತ್ರೋಪಕರಣಗಳ ಮೇಲೆ ಅವಲಂಬಿತವಾಗುತ್ತಿದ್ದು, ಈ ಆವಿಷ್ಕಾರಗಳ ನಡುವೆ ಮನುಷ್ಯ ತನ್ನ ಸಹಜ ಬಾಂಧವ್ಯಗಳ ಸ್ವಾರಸ್ಯವನ್ನು ಕಳೆದುಕೊಳ್ಳುತ್ತಿದ್ದಾನೆಯೇ ಎಂಬ ಆತಂಕ ತೀವ್ರವಾಗಿ ಎದುರಾಗಿದೆ.
ಕೈಬೆರಳ ತುದಿಯಲ್ಲಿ ಜಗತ್ತು: ಅನುಕೂಲವೋ, ಅತಿಯಾದ ಆವಲಂಬನೆಯೋ?
ಬೆಳಗಿನಿಂದ ರಾತ್ರಿ ಮಲಗುವವರೆಗೆ ಮನುಷ್ಯ ನಡೆಸುವ ಚಟುವಟಿಕೆಗಳ ಒಟ್ಟು ಮೊತ್ತವೇ ಜೀವನ ಪದ್ಧತಿ. ಇಂದಿನ ದಿನಗಳಲ್ಲಿ ಇಂಟರ್ನೆಟ್, ಸ್ಮಾರ್ಟ್‌ಫೋನ್, ಫೋನ್ ಪೇ, ಗೂಗಲ್ ಪೇನಂತಹ ಡಿಜಿಟಲ್ ಬ್ಯಾಂಕಿಂಗ್ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳು ದೈನಂದಿನ ಕೆಲಸಗಳನ್ನು ಸುಲಭ, ಸರಳ ಮತ್ತು ವೇಗವಾಗಿಸಿವೆ ನಿಜ. ನಾವಿರುವ ಜಾಗದಿಂದಲೇ ಇಡೀ ಜಗತ್ತನ್ನು ನಿಯಂತ್ರಿಸುವ ಶಕ್ತಿ ಇಂದು ನಮಗೆ ಸಿಕ್ಕಿದೆ. ಆದರೆ, ಇದೆಲ್ಲದರ ನಡುವೆ ಮಾನವನ ಮನಸ್ಸಿನ ನೆಮ್ಮದಿಯ ಮೇಲೆ ಈ ಆಧುನಿಕತೆ ಗಂಭೀರ ಪರಿಣಾಮ ಬೀರುತ್ತಿದೆ. ತಂತ್ರಜ್ಞಾನವು ಮನುಷ್ಯರನ್ನು ಹತ್ತಿರ ತರಬೇಕಿತ್ತೇ ಹೊರತು ದೂರ ಮಾಡಬಾರದಿತ್ತು. ಆದರೆ ಇಂದು ಮನುಷ್ಯ ಮನುಷ್ಯನನ್ನು ಪ್ರೀತಿಸುವುದನ್ನು ಬಿಟ್ಟು ವಸ್ತುಗಳನ್ನು ಪ್ರೀತಿಸುತ್ತಿರುವುದು ಇಂದಿನ ದುರಂತ.
ಜಂಕ್ ಫುಡ್ ಅಬ್ಬರ: ಆರೋಗ್ಯದ ಆಯಸ್ಸು ಕಡಿತ:
ಹಿಂದಿನ ಕಾಲದ ಸರಳ ಹಾಗೂ ಸಮೃದ್ಧ ಬದುಕಿಗೆ ಪೌಷ್ಟಿಕ ಆಹಾರವೇ ಮೂಲಾಧಾರವಾಗಿತ್ತು. ಅಂದಿನ ರೊಟ್ಟಿ, ಮುದ್ದೆ, ಕಾಳು ಪಲ್ಯ, ಗೆಡ್ಡೆ-ಗೆಣಸುಗಳಂತಹ ಸ್ವಾಭಾವಿಕ ಆಹಾರ ಕ್ರಮವನ್ನು ಇಂದಿನ ಪಿಜ್ಜಾ, ಬರ್ಗರ್, ನೂಡಲ್ಸ್‌ನಂತಹ ಐದು ನಿಮಿಷಗಳಲ್ಲಿ ತಯಾರಾಗುವ ಜಂಕ್ ಫುಡ್‌ಗಳು ಸಂಪೂರ್ಣವಾಗಿ ನುಂಗಿ ಹಾಕಿವೆ. ಈ ನಾಲಿಗೆಯ ರುಚಿ ಮನುಷ್ಯನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಾರಂಭಿಸಿದ್ದು, ಆಯಸ್ಸನ್ನೇ ಕಸಿದುಕೊಳ್ಳುತ್ತಿದೆ.
ಇದರೊಂದಿಗೆ ಸಾರಿಗೆ ವ್ಯವಸ್ಥೆಯ ಅತಿಯಾದ ಆಧುನಿಕತೆಯೂ ಮಾರಕವಾಗುತ್ತಿದೆ. ಹಿಂದೆ ಸೈಕಲ್, ಎತ್ತಿನ ಗಾಡಿಗಳ ಬಳಕೆಯಿಂದ ಪರಿಸರ ಸ್ವಚ್ಛವಾಗಿತ್ತು, ವಾಯುಮಾಲಿನ್ಯವಿರಲಿಲ್ಲ. ಆದರೆ ಇಂದು ತಂತ್ರಜ್ಞಾನದ ನೆರವಿನಿಂದ ಒಂದೇ ಮನೆಯಲ್ಲಿ ನಾಲ್ಕಾರು ವಾಹನಗಳಿದ್ದರೂ ತೃಪ್ತಿಯಿಲ್ಲ. ಈ ಅತಿಯಾದ ಅವಲಂಬನೆ ಗಾಳಿಯನ್ನು ವಿಷವಾಗಿಸುತ್ತಿದ್ದು, ಉಸಿರಾಟದ ತೊಂದರೆಯಂತಹ ಹತ್ತಾರು ರೋಗಗಳಿಗೆ ನಾವೇ ಆಹ್ವಾನ ನೀಡುತ್ತಿದ್ದೇವೆ.
ಸ್ಕ್ರೀನ್ ಮರೆಯಲ್ಲಿ ಕರಗಿದ ಬಾಲ್ಯ ಮತ್ತು ಜ್ಞಾನ ಸಂಸ್ಕೃತಿ:
ಹಿಂದಿನ ತಲೆಮಾರಿನ ಜನರಿಗೆ ಜ್ಞಾನಾರ್ಜನೆಗೆ ಇದ್ದದ್ದು ಎರಡೇ ದಾರಿ; ಒಂದು ಹಿರಿಯರ ಅನುಭವದ ಮಾತುಗಳು, ಮತ್ತೊಂದು ಗ್ರಂಥಾಲಯದ ಪುಸ್ತಕಗಳು. ಪುಸ್ತಕಗಳ ಆಳವಾದ ಓದು ಮನುಷ್ಯನಿಗೆ ವೈಚಾರಿಕತೆ ನೀಡುತ್ತಿತ್ತು, ಹಿರಿಯರ ಸಲಹೆಗಳು ಬದುಕಿಗೆ ದಾರಿದೀಪವಾಗುತ್ತಿದ್ದವು. ಆದರೆ ಇಂದಿನ ಇಂಟರ್ನೆಟ್ ಯುಗದಲ್ಲಿ ಯಾರಿಗೂ ಯಾರ ಮಾತು ಕೇಳುವ ತಾಳ್ಮೆಯಿಲ್ಲ. ಮುಖಾಮುಖಿ ಸಿಗುವ ಸ್ನೇಹ, ಪ್ರೀತಿಯನ್ನು ನಿರ್ಲಕ್ಷಿಸಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್‌ಗಳ ವರ್ಚುವಲ್ ಲೋಕದಲ್ಲಿ ನೆಮ್ಮದಿ ಹುಡುಕಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಲೈಕ್ಸ್, ಕಾಮೆಂಟ್‌ಗಳ ಸಂತೋಷ ಕೇವಲ ಕ್ಷಣಿಕ ಮತ್ತು ತಾತ್ಕಾಲಿಕ ಎಂಬ ಸತ್ಯವನ್ನು ನಾವು ಮರೆಯುತ್ತಿದ್ದೇವೆ.
ಬಾಲ್ಯದ ದಿನಗಳೂ ಸಹ ಇಂದು ಮೊಬೈಲ್ ಸ್ಕ್ರೀನ್‌ಗೆ ಬಲಿಯಾಗಿವೆ. ಹಿಂದೆ ಹಳ್ಳಿಗಳ ಬೀದಿಯಲ್ಲಿ ಕಾಣುತ್ತಿದ್ದ ಕಣ್ಣಾಮುಚ್ಚಾಲೆ, ಚಿನ್ನಿದಾಂಡು, ಮರಕೋತಿ, ಕುಂಟೆಬಿಲ್ಲೆ, ಬುಗುರಿಯಂತಹ ದೈಹಿಕ ಕ್ರೀಡೆಗಳ ಜಾಗವನ್ನು ಇಂದಿನ ಸ್ಮಾರ್ಟ್‌ಫೋನ್ ವಿಡಿಯೋ ಗೇಮ್‌ಗಳು ಕಸಿದುಕೊಂಡಿವೆ. ಇದರಿಂದಾಗಿ ಇಂದಿನ ಮಕ್ಕಳಲ್ಲಿ ದೈಹಿಕ ಶ್ರಮ ಹಾಗೂ ಸಾಮಾಜಿಕವಾಗಿ ಬೆರೆಯುವ ಗುಣಗಳೇ ಇಲ್ಲದಂತಾಗಿದೆ.
'ಅರಿವೇ ಗುರು' – ನೆಮ್ಮದಿಯ ಬದುಕಿಗೆ ಬೇಕಿದೆ ಎಚ್ಚರ:
ಒಟ್ಟಾರೆಯಾಗಿ, ಆಧುನಿಕ ಮಾನವ ಹಗಲಿರುಳು ಮೆಟ್ರೋ ರೈಲಿನಂತೆ ಯಾಂತ್ರಿಕವಾಗಿ ಓಡುತ್ತಿದ್ದಾನೆ. ಕೈತುಂಬಾ ಹಣ, ಆಸ್ತಿ, ಐಶ್ವರ್ಯ ಗಳಿಸುತ್ತಿದ್ದರೂ ನೆಮ್ಮದಿ ಮತ್ತು ಆರೋಗ್ಯಕ್ಕಾಗಿ ಮತ್ತೆ ಅದೇ ಹಣವನ್ನು ಆಸ್ಪತ್ರೆಗಳಿಗೆ ಸುರಿಯುತ್ತಿದ್ದಾನೆ. ತಾಳ್ಮೆ, ಸಹನೆ, ನೆಮ್ಮದಿ ಮತ್ತು ನಿಜವಾದ ಸಂಭ್ರಮ ಮಾರುಕಟ್ಟೆಯಲ್ಲಿ ಹಣ ಕೊಟ್ಟು ಕೊಳ್ಳುವ ವಸ್ತುಗಳಲ್ಲ ಎಂಬ ಕಟು ಸತ್ಯವನ್ನು ನಾವಿನ್ನೂ ಅರಿತಿಲ್ಲ.
ಆಧುನಿಕ ಬದುಕಿಗೆ ತಂತ್ರಜ್ಞಾನದ ಅನಿವಾರ್ಯತೆ ಇದೆ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ತಂತ್ರಜ್ಞಾನ ನಮ್ಮ ಅಗತ್ಯಕ್ಕೆ ಇರಬೇಕೇ ಹೊರತು, ನಾವೇ ಅದರ ಗುಲಾಮರಾಗಬಾರದು. 'ಅರಿವೇ ಗುರು' ಎನ್ನುವಂತೆ ಎಚ್ಚರಿಕೆಯಿಂದ ಅಜ್ಞಾನದ ಕತ್ತಲಿಗೆ ಸಿಲುಕದೆ ಜ್ಞಾನ ವೃದ್ಧಿಸಿಕೊಳ್ಳಬೇಕಿದೆ. ದಿನದಲ್ಲಿ ಒಂದಿಷ್ಟು ಸಮಯವನ್ನು ಮೊಬೈಲ್‌ನಿಂದ ದೂರವಿಟ್ಟು, ಕುಟುಂಬದವರೊಂದಿಗೆ ಕಳೆಯುವುದನ್ನು ರೂಢಿಸಿಕೊಳ್ಳಬೇಕು. ಕೃತಕ ಬದುಕನ್ನು ಬದಿಗಿಟ್ಟು, ಸಂಬಂಧಗಳನ್ನು ಉಳಿಸಿಕೊಂಡು, ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಆಧುನಿಕ ಜೀವನಕ್ಕೆ ಒಂದು ಅರ್ಥ ಸಿಗಲು ಸಾಧ್ಯ.
ಲೇಖನ: ಶ್ರಾವ್ಯ ಪಿ. ತೃತೀಯ ಬಿಸಿಎ ವಿದ್ಯಾರ್ಥಿನಿ, ಚಿತ್ರದುರ್ಗ.



