ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಣ್ಣದೊಂದು ಭಯ ಅಥವಾ ಪ್ರಮಾದ ಹೇಗೆ ಜೀವರಾಶಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯು ತನ್ನಂತರಂಗವನ್ನು ಹೇಗೆ ಶೋಧಿಸಿಕೊಳ್ಳಬೇಕು ಎಂಬುದಕ್ಕೆ ಮುರುಘಾ ಮಠದ ಡಾ.ಬಸವ ಕುಮಾರ ಸ್ವಾಮೀಜಿ ಅವರು ಸಾಕ್ಷಿಯಾಗಿ ಕಾರ್ಯಕ್ರಮವೊಂದರಲ್ಲಿ ಹಿರಿಯರೊಬ್ಬರು ಹಂಚಿಕೊಂಡ ಜೀವನದ ಅನುಭವ ಮತ್ತು ಆತ್ಮಾವಲೋಕನದ ಮಾತುಗಳು ಎಲ್ಲರ ಮನ ಮುಟ್ಟುವಂತೆ ಮಾಡಿವೆ.
ಇಲ್ಲಿನ ತರಾಸು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಪ್ರಾಜೆಕ್ಟ್ ಪಂಚತಂತ್ರ ನಾಟಕದ ಸಮಾರೋಪದಲ್ಲಿ ಅವರು ಮಾತನಾಡಿದರು.
ಒಂದು ಕ್ಷಣದ ಭಯ, ಮರಿಗಳ ಸಾವು:
ತಮ್ಮ ಯೋಗವನ ಕಟ್ಟಡದ ಮುಂಭಾಗದ ಗಿಡದಲ್ಲಿ ಪಕ್ಷಿಯೊಂದು ಎಂಟು-ಹತ್ತು ದಿನಗಳಿಂದ ಎರಡು ಮೊಟ್ಟೆಗಳನ್ನಿಟ್ಟು ಕಣ್ಣೆತ್ತಿ ನೋಡುತ್ತಾ ಸ್ಪಂದಿಸುತ್ತಿದ್ದುದನ್ನು ನೆನಪಿಸಿಕೊಂಡ ಅವರು, 11ನೇ ದಿನದಂದು ಯೋಗವನದೊಳಗೆ ಸಣ್ಣ ಹಾವೊಂದು ಕಾಣಿಸಿಕೊಂಡಿದ್ದನ್ನು ವಿವರಿಸಿದರು. ಹಾವನ್ನು ಕಂಡು ಉಂಟಾದ ಭಯದಿಂದಾಗಿ, ಯೋಗವನದ ಸುತ್ತಲಿನ ಮರದ ರೆಂಬೆ-ಕೊಂಬೆಗಳನ್ನು ಕಡಿಯುವಂತೆ ಕೆಲಸಗಾರರಿಗೆ ಸೂಚನೆ ನೀಡಿದ್ದರು. ಆದರೆ ಆ ಕ್ಷಣದಲ್ಲಿ ಗಿಡದಲ್ಲಿದ್ದ ಪಕ್ಷಿಯ ಮೊಟ್ಟೆಗಳ ನೆನಪು ಅವರಿಗೆ ಬರಲಿಲ್ಲ.
ಬೆಂಗಳೂರಿಗೆ ತೆರಳಿ ಹಿಂತಿರುಗುವಷ್ಟರಲ್ಲಿ, ಮರದ ಕೊಂಬೆಗಳನ್ನು ಕಡಿಯಲಾಗಿತ್ತು. ಗಿಡದ ಕೆಳಗೆ ಆ ಮೊಟ್ಟೆಗಳಿಂದ ಹೊರಬಂದಿದ್ದ ಸಣ್ಣ ಮರಿಗಳು ಬಿದ್ದು ಸತ್ತುಹೋಗಿದ್ದವು. "ಆ ಸತ್ತ ಮರಿಗಳನ್ನು ಕಂಡು ಮನಸ್ಸಿಗೆ ತೀವ್ರ ಆಘಾತವಾಯಿತು. ಸಿಟ್ಟಿನಿಂದ ಮರ ಕಡಿದವನನ್ನು ಹುಡುಕಿ ಕರೆತನ್ನಿ ಎಂದರೂ, ತಾನು ಮಾಡಿದ್ದು ತಪ್ಪು ಎಂಬ ಅರಿವಿನಿಂದ ಆತ ಎರಡು ದಿನ ಬರಲೇ ಇಲ್ಲ," ಎಂದು ಆ ಘಟನೆಯನ್ನು ನೆನೆದು ಸ್ವಾಮೀಜಿ ಅವರು ಭಾವುಕರಾದರು.
ಆತ್ಮಾವಲೋಕನ ಮತ್ತು ಸತ್ಯದ ದರ್ಶನ:
"ಇಲ್ಲಿ ಯಾರದ್ದು ತಪ್ಪು? ಕಡಿಸಿದ ನನ್ನದೋ ಅಥವಾ ಕಡಿದವನದೋ? ಪ್ರತಿಯೊಂದು ಸಮಸ್ಯೆಗೆ ಇತರರನ್ನು ಹೊಣೆ ಮಾಡುವುದಕ್ಕಿಂತ, ನಮಗೆ ನಾವೇ ಕನ್ನಡಿ ಹಿಡಿದುಕೊಳ್ಳಬೇಕು. ನಾನೇ ಕ್ರೂರಿ, ನಾನೇ ಪ್ರೇಮಿ, ನಾನೇ ಎಲ್ಲವೂ ಎಂಬುದನ್ನು ಅರ್ಥಮಾಡಿಕೊಳ್ಳಬೇಕು," ಎಂದು ಅವರು ಬಸವ ಕುಮಾರ ಸ್ವಾಮೀಜಿಗಳು ಪ್ರತಿಪಾದಿಸಿದರು.
ಪ್ರತಿಯೊಬ್ಬ ವ್ಯಕ್ತಿಯ ಅಂತರಂಗದಲ್ಲಿ ಅನ್ವೇಷಣೆಯಾಗಿ ಸತ್ಯದ ದರ್ಶನವಾಗಬೇಕು ಹಾಗೂ ಇಡೀ ಜಗತ್ತು ಪ್ರೀತಿ, ಪ್ರೇಮ, ಮತ್ತು ವಿಶ್ವಸತ್ವದಿಂದ ತುಂಬಿ ತುಳುಕಬೇಕು ಎಂಬ ಸಂದೇಶವನ್ನು ನೀಡಿದರು.
ಯುವ ರಂಗ ಕಲಾವಿದರಿಗೆ ಅಭಿನಂದನೆ ಹಾಗೂ ಶ್ರೀಮಠದಿಂದ ಗೌರವ:ಪ್ರಾಜೆಕ್ಟ್ ಪಂಚತಂತ್ರ ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 20 ರಿಂದ 30 ವರ್ಷದ ಆಸುಪಾಸಿನ ಯುವ ರಂಗ ಕಲಾವಿದರ ಅಭಿನಯ ಮತ್ತು ಸಮಾಜಕ್ಕೆ ಕನ್ನಡಿ ಹಿಡಿಯುವ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ಎಲ್ಲ ಯುವ ಕಲಾವಿದರಿಗೆ ಕೋಟಿ ಕೋಟಿ ಧನ್ಯವಾದಗಳನ್ನು ಸ್ವಾಮೀಜಿ ಅವರು ಸಲ್ಲಿಸಿದರು.
ಮುಂದಿನ ದಿನಗಳಲ್ಲಿ ಈ ಯುವ ತಂಡವನ್ನು ಶ್ರೀಮುರುಘಾ ಮಠಕ್ಕೆ ಆಹ್ವಾನಿಸಿ, ಕೆ.ಎಮ್. ವೀರೇಶ್ ಹಾಗೂ ತಹಶೀಲ್ದಾರ್ ಅವರ ಸಮ್ಮುಖದಲ್ಲಿ ಗೌರವ ಸನ್ಮಾನ ನೆರವೇರಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ತೊಡರನಾಳ್ ವಿನಯ್ ಕುಮಾರ್, ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗುರುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್, ಕೆ.ಎಂ ವೀರೇಶ್ ಸೇರಿದಂತೆ ನಾಟಕದ ಪಾತ್ರಧಾರಿಗಳು ಹಾಜರಿದ್ದರು.




