ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮುಂಬರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ತಮಗೇ ಸಿಗುವ ಪೂರ್ಣ ವಿಶ್ವಾಸವಿದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸಿ.ಬಿ. ಪಾಪಣ್ಣ ಹೇಳಿದ್ದಾರೆ.
ತಾಲೂಕಿನ ಜವನಗೊಂಡನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ತಮ್ಮ ಬೆಂಬಲಿಗರ ಪ್ರಮುಖ ಸಭೆಯಲ್ಲಿ ಅವರು ಮಾತನಾಡಿದ್ದಾರೆ.
"2023ರ ಚುನಾವಣೆಯಲ್ಲೇ ನಾನು ಆಕಾಂಕ್ಷಿಯಾಗಿದ್ದೆ. ಆದರೆ ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ಅವಕಾಶ ಕೊಡುವ ಭರವಸೆ ನೀಡಿದ್ದರಿಂದ ಕಣದಿಂದ ಹಿಂದೆ ಸರಿದಿದ್ದೆ. ಈಗ ಆ ಸಮಯ ಬಂದಿದೆ" ಎಂದು ಅವರು ನೆನಪಿಸಿಕೊಂಡರು. ಒಂದೆರಡು ದಿನಗಳಲ್ಲಿ ತಾವು ಉಪಚುನಾವಣೆಯ ಅಧಿಕೃತ ಆಕಾಂಕ್ಷಿಯಾಗಿ ಜಿಲ್ಲಾಧ್ಯಕ್ಷರಿಗೆ ಮನವಿ ಸಲ್ಲಿಸುವುದಾಗಿ ಅವರು ಹೇಳಿದರು.
ಮೃತರ ಕುಟುಂಬಕ್ಕೇ ಟಿಕೆಟ್ ಎಂಬುದು ಸುಳ್ಳು:
ಉಪಚುನಾವಣೆಗಳಲ್ಲಿ ಕೇವಲ ಮೃತರ ಕುಟುಂಬದವರಿಗೇ ಟಿಕೆಟ್ ಸಿಗುತ್ತದೆ ಎಂಬ ವಾದವನ್ನು ತಳ್ಳಿಹಾಕಿದ ಪಾಪಣ್ಣ, "ದಾವಣಗೆರೆಯಲ್ಲಿ ಸಮರ್ಥ್ ಅವರಿಗೆ ಟಿಕೆಟ್ ನೀಡಲು ಅಲ್ಲಿನ ಲಿಂಗಾಯಿತ ಸಮುದಾಯದ ಜನಸಂಖ್ಯೆ ಹಾಗೂ ಅವರ ಪೋಷಕರ ರಾಜಕೀಯ ಹಿನ್ನೆಲೆ ಕಾರಣವಾಗಿತ್ತು. ಆದರೆ, ನಮ್ಮ ಕ್ಷೇತ್ರದಲ್ಲಿ ದಿವಂಗತ ಸುಧಾಕರ್ ಅವರು ಅಲ್ಪಸಂಖ್ಯಾತ ಜೈನ ಸಮುದಾಯಕ್ಕೆ ಸೇರಿದವರಾಗಿದ್ದರು. ಅವರ ಪುತ್ರನಿಗೆ ರಾಜಕೀಯ ಅನುಭವದ ಕೊರತೆ ಇರುವುದರಿಂದ, ಈ ಬಾರಿ ಕಾಂಗ್ರೆಸ್ ಟಿಕೆಟ್ ಬೇರೆಯವರಿಗೂ ಸಿಗುವ ಸಾಧ್ಯತೆ ದಟ್ಟವಾಗಿದೆ. ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಕಾಡುಗೊಲ್ಲ ಜನಾಂಗಕ್ಕೆ ಸೇರಿದ ನನಗೆ ಈ ಬಾರಿ ಟಿಕೆಟ್ ನೀಡಬೇಕು" ಎಂದು ಅವರು ಒತ್ತಾಯಿಸಿದರು.
ರಾಜ್ಯದ ಸುಮಾರು 45 ಕ್ಷೇತ್ರಗಳಲ್ಲಿ ಕಾಡುಗೊಲ್ಲರ ಮತಗಳು ನಿರ್ಣಾಯಕವಾಗಿದ್ದು, ತಮಗೆ ಟಿಕೆಟ್ ನೀಡಿದರೆ ಅದು 2028ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಮಟ್ಟದ ಲಾಭ ತಂದುಕೊಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
"ಸ್ಥಳೀಯರಿಗೆ ಆದ್ಯತೆ ನೀಡಿ, ವಲಸಿಗರಿಗೆ ಬೇಡ"
ಸ್ವಾತಂತ್ರ್ಯ ಬಂದಾಗಿನಿಂದ ಹಿರಿಯೂರು ಕ್ಷೇತ್ರವನ್ನು ಹೆಚ್ಚಾಗಿ ಹೊರಗಿನವರೇ (ವಲಸಿಗರು) ಪ್ರತಿನಿಧಿಸುತ್ತಾ ಬಂದಿದ್ದಾರೆ. ಈ ಬಾರಿ 'ಸ್ಥಳೀಯರಿಗೆ ಆದ್ಯತೆ' ಎಂಬ ಕೂಗು ಜೋರಾಗಿದೆ ಎಂದ ಪಾಪಣ್ಣ, ಹೊರಗಿನವರ ರಾಜಕಾರಣದಿಂದಾಗಿ ಕ್ಷೇತ್ರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಪಟ್ಟಿ ಮಾಡಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದರು.
ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕ್ಷೇತ್ರಕ್ಕೆ ಇಂದಿಗೂ ಕುಡಿಯುವ ನೀರಿನ ಶಾಶ್ವತ ಪರಿಹಾರ ಸಿಕ್ಕಿಲ್ಲ. ರೈತಾಪಿ ವರ್ಗಕ್ಕೆ ಯಾವುದೇ ನೀರಾವರಿ ಮೂಲ ಇಲ್ಲದೆ ಇರುವುದರಿಂದ ಬೆಂಗಳೂರಿಗೆ ಉದ್ಯೋಗ ಹುಡುಕಿ ಗುಳೆ ಹೋಗುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಧರ್ಮಪುರ, ಕಲ್ವಳ್ಳಿ ಭಾಗ, ಐಮಂಗಲ ಹೋಬಳಿ ಸೇರಿದಂತೆ ಕ್ಷೇತ್ರಾದ್ಯಂತ ಅಂತರ್ಜಲ ಮಟ್ಟ ಬರೋಬ್ಬರಿ ಸಾವಿರ ಅಡಿವರೆಗೆ ಕುಸಿದು ಹೋಗಿದೆ. 2016 ರಿಂದ ಈಚೆಗೆ ನೀರಿನ ಅಭಾವದಿಂದಾಗಿ ಸಾವಿರಾರು ಎಕರೆ ತೆಂಗು ಮತ್ತು ಅಡಿಕೆ ತೋಟ ಸೇರಿದಂತೆ ಇತರೆ ಹಣ್ಣಿನ ತೋಟಗಳು ನಾಶವಾಗಿವೆ ಎಂದು ಪಾಪಣ್ಣ ಆತಂಕ ವ್ಯಕ್ತಪಡಿಸಿದರು.
ಸ್ಥಳೀಯವಾಗಿ ಸಾವಿರಾರು ಉದ್ಯೋಗ ನೀಡಿದ್ದ ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ತುಕ್ಕು ಹಿಡಿದಿದೆ. ಸ್ಥಳೀಯ ಸಕ್ಕರೆ ಕಾರ್ಖಾನೆಯ ಯಂತ್ರಗಳು ಸಂಪೂರ್ಣವಾಗಿ ತುಕ್ಕು ಹಿಡಿದು ನಿಂತಿವೆ. ವಿವಿ ಸಾಗರ ಭರ್ತಿಯಾಗುತ್ತಿದ್ದು ಇಂದಿಗೂ ಕಾರ್ಖಾನೆ ಆರಂಭಿಸುವ ಕುರಿತು ಚಿಂತನೆ ಮಾಡುತ್ತಿಲ್ಲ ಎಂದು ಪಾಪಣ್ಣ ಕಿಡಿಕಾರಿದರು.
ನಿರುದ್ಯೋಗ: ಪದವೀಧರ ಯುವಕರಿಗೆ ಉದ್ಯೋಗ ಸಿಗದೆ ಹಳ್ಳಿಗಳಲ್ಲೇ ಉಳಿಯುವಂತಾಗಿದೆ. "ಈ ಎಲ್ಲಾ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ಹಾಡಲು ಸ್ಥಳೀಯನಾದ ನನಗೆ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು" ಎಂದು ಪಾಪಣ್ಣ ಪ್ರತಿಪಾದಿಸಿದರು.
ರೈತರ ಮತ್ತು ಮುಖಂಡರ ಒತ್ತಾಯ:
ಸಭೆಯಲ್ಲಿ ಮಾತನಾಡಿದ ರೈತ ಮುಖಂಡ ಸಿ. ತಿಪ್ಪೇಸ್ವಾಮಿ, "ವಾಣಿವಿಲಾಸ ಅಣೆಕಟ್ಟೆಯ ನೀರನ್ನು ಕಲ್ವಳ್ಳಿ ಭಾಗದ ಕೆರೆಗಳಿಗೆ ಹಾಗೂ ತಾಲೂಕಿನ ಎಲ್ಲಾ ಕೆರೆಗಳಿಗೆ ತುಂಬಿಸಬೇಕು. ಮುಚ್ಚಿ ಹೋಗಿರುವ ಸಕ್ಕರೆ ಕಾರ್ಖಾನೆಯ ಸೈರನ್ ಮತ್ತೆ ಮೊಳಗಬೇಕು. ನಗರದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕಾಲೇಜು ಆರಂಭವಾಗಬೇಕು. ಈ ಎಲ್ಲಾ ಅಭಿವೃದ್ಧಿ ಕೆಲಸಗಳು ಸಾಧ್ಯವಾಗಬೇಕಾದರೆ ಸ್ಥಳೀಯರಾದ ಪಾಪಣ್ಣನವರಿಗೆ ಟಿಕೆಟ್ ಸಿಗಲೇಬೇಕು" ಎಂದು ಒತ್ತಾಯಿಸಿದರು.
ಈ ಪ್ರಮುಖ ಸಭೆಯಲ್ಲಿ ಮುಖಂಡರಾದ ಅಲ್ತಾಫ್ ಪಾಷಾ, ಬಾಬು, ನಾಸಿರ್ ಅಹಮದ್, ಮಹಮದ್ ಇರ್ಷಾದ್, ಆರ್. ಮೊಹಮ್ಮದ್, ರೂಹುಲ್ಲಾ, ಮೆಹದಿನ್ ಷಫೀವುಲ್ಲಾ, ಜಲೀಲ್ ಅಹಮದ್, ಇಬ್ರಾಹಿಂ ಸಾಬ್, ಮಹಮದ್ ನಯಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



