ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಸ್ತಾವಿತ 'ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್' ಯೋಜನೆ ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಬಿಡದಿ ಟೌನ್‌ಶಿಪ್ ಯೋಜನೆ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಡುವಿನ ಜಿದ್ದಾಜಿದ್ದಿ ತಾರಕಕ್ಕೇರಿದ್ದು, ವೈಯಕ್ತಿಕ ಕೆಸರೆರಚಾಟಕ್ಕೆ ಸಾಕ್ಷಿಯಾಗಿದೆ.
ವಿಶೇಷವಾಗಿ ಬಿಡದಿ ರಸ್ತೆಗಳಲ್ಲಿ ವಿರೋಧ ಪಕ್ಷದ ನಾಯಕರನ್ನು ವ್ಯಂಗ್ಯವಾಡುವ ಪೋಸ್ಟರ್‌ಗಳು ಪ್ರತ್ಯಕ್ಷವಾಗಿರುವುದು ಉಭಯ ನಾಯಕರ ನಡುವಿನ ರಾಜಕೀಯ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ರಾಜ್ಯ ರಾಜಕಾರಣವೇ ಬೆಚ್ಚಿಬೀಳುವಂತಹ ಗಂಭೀರ ವಾಗ್ದಾಳಿ ನಡೆಸಿದ್ದಾರೆ.
ಸಾವಿರ ಪೋಸ್ಟರ್ ಹಾಕಿದರೂ ಹೋರಾಟ ನಿಲ್ಲಲ್ಲ: ಹೆಚ್‌ಡಿಕೆ ಗುಡುಗು ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
"ನನ್ನ ವಿರುದ್ಧ ಭೂ ಮಾಫಿಯಾ ಸಂಪರ್ಕದ ಆರೋಪ ಹೊರಿಸಿ ಬಿಡದಿ ಬಳಿ ವ್ಯಂಗ್ಯಚಿತ್ರದ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಮಾಧ್ಯಮದವರು ನನ್ನನ್ನು ತಪ್ಪು ತಿಳಿಯಬಾರದು, ಆದರೆ ಕನಿಷ್ಠಪಕ್ಷ ಈ ರಾಜ್ಯದ ಮುಖ್ಯಮಂತ್ರಿಯಾದ ನಂತರವಾದರೂ ಅವರು ಇಂತಹ ನೀಲಿ ಚಿತ್ರಗಳು ಮತ್ತು ಪೋಸ್ಟರ್‌ಗಳನ್ನು ಮಾಡುವುದನ್ನು ಬಿಡುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಅವರಿಗೆ ಈಗಲೂ ಅಂತಹ ಹಳೇ ಅಭ್ಯಾಸಗಳು ಹೋಗಿಲ್ಲ" ಎಂದು ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.
"ಇಂತಹ ಸಾವಿರ ಪೋಸ್ಟರ್‌ಗಳನ್ನು ಹಂಚಿದರೂ, ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ನಾವು ನಡೆಸುತ್ತಿರುವ ಹೋರಾಟವನ್ನು ಕುಗ್ಗಿಸಲು ಸಾಧ್ಯವಿಲ್ಲ" ಎಂದು ಅವರು ಸವಾಲು ಹಾಕಿದರು.
"ವೈಯಕ್ತಿಕ ಲಾಭಕ್ಕಾಗಿ ರೈತರ ಭೂಮಿ ಲೂಟಿ"
ಬಿಡದಿಯ ರೈತರ ಹಿತರಕ್ಷಣೆಗಾಗಿ ತಾವು ಬದ್ಧರಾಗಿರುವುದಾಗಿ ಹೇಳಿದ ಎಚ್‌ಡಿಕೆ, "ನಾವು ಬಿಡದಿಯ ರೈತರ ಪರವಾಗಿ ನಿಂತಿದ್ದೇವೆ, ಅವರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಡಿ.ಕೆ. ಶಿವಕುಮಾರ್ ತಮ್ಮ ವೈಯಕ್ತಿಕ ಲಾಭ ಹಾಗೂ ರಿಯಲ್ ಎಸ್ಟೇಟ್ ಹಿತಾಸಕ್ತಿಗಾಗಿ ರೈತರ ಫಲವತ್ತಾದ ಕೃಷಿಭೂಮಿಯನ್ನು ಕಿತ್ತುಕೊಳ್ಳಲು ಸಂಚು ರೂಪಿಸುತ್ತಿದ್ದಾರೆ" ಎಂದು ಗಂಭೀರ ಆರೋಪ ಮಾಡಿದರು.
ಗರಗನಹಳ್ಳಿ ಹಗರಣ ಪ್ರಸ್ತಾಪಿಸಿ ವಾಗ್ದಾಳಿ
ಮುಂದುವರಿದು ಮಾತನಾಡಿದ ಕುಮಾರಸ್ವಾಮಿ, "ಗರಗನಹಳ್ಳಿಯಲ್ಲಿ ಸತ್ತವರ ಹೆಸರಿನಲ್ಲಿ ಭೂಮಿ ಲಪಟಾಯಿಸಿದ ಅದೇ ವ್ಯಕ್ತಿ (ಡಿಕೆಶಿ) ಇಂದು ನನ್ನ ಮೇಲೆ ಬೇರೆ ರೀತಿಯ ಚಿತ್ರಣ ನೀಡಲು ಯತ್ನಿಸುತ್ತಿದ್ದಾರೆ. ಇದನ್ನು ಜನರು ನಂಬುತ್ತಾರೆಯೇ? ಕನಿಷ್ಠ ಪಕ್ಷ ಸಿಎಂ ಆದ ಮೇಲಾದರೂ ನೈತಿಕತೆ ಪ್ರದರ್ಶಿಸಬೇಕಲ್ಲವೇ? ಯಾವುದೇ ಮಾನದಂಡಗಳಿಲ್ಲದೆ ಇಂತಹ ಕೀಳುಮಟ್ಟದ ರಾಜಕಾರಣ ಮಾಡುವುದರಿಂದ ರಾಜ್ಯ ಯಾವ ಕಡೆಗೆ ಹೋಗುತ್ತಿದೆ ಎಂಬುದು ತಿಳಿಯುತ್ತದೆ. ಇದು ಅವರ ತೆವಳುವ ಮನಸ್ಥಿತಿಯನ್ನು ತೋರಿಸುತ್ತದೆ, ಇಂತಹ ಕೆಲಸಗಳ ಮೂಲಕವೇ ಅವರು ಬೆಳೆದು ಬಂದಿದ್ದಾರೆ" ಎಂದು ಹರಿಹಾಯ್ದರು.
ಪ್ರತಿಷ್ಠೆಯ ಕಣವಾದ ಬಿಡದಿ ಟೌನ್‌ಶಿಪ್
ಸದ್ಯ ಬಿಡದಿ ಟೌನ್‌ಶಿಪ್ ಯೋಜನೆ ಕೇವಲ ಅಭಿವೃದ್ಧಿ ವಿಷಯವಾಗಿ ಉಳಿದಿಲ್ಲ. ಬದಲಿಗೆ ಹಳೇ ಮೈಸೂರು ಭಾಗದ ಇಬ್ಬರು ಪ್ರಭಾವಿ ನಾಯಕರ ವೈಯಕ್ತಿಕ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಯೋಜನೆ ವಿರೋಧಿಸಿ ಬಿಜೆಪಿ-ಜೆಡಿಎಸ್ ಜಂಟಿ ಪ್ರತಿಭಟನೆಗೆ ಮುಂದಾಗಿದ್ದರೆ, ಇತ್ತ ಕಾಂಗ್ರೆಸ್ ಪೋಸ್ಟರ್ ವಾರ್ ಮೂಲಕ ತಿರುಗೇಟು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.



