ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಯೋಧ್ಯೆಯ ರಾಮಮಂದಿರದ ಹುಂಡಿ ಹಣ ದುರುಪಯೋಗ ಹಾಗೂ ಆರ್‌ಎಸ್‌ಎಸ್ ನಾಯಕ ರಾಮ್ ಮಾಧವ್ ಅವರ ವಿದೇಶಿ ಪ್ರವಾಸಗಳ ಕುರಿತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಬುಧವಾರ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪಗಳ ಸುರಿಮಳೆಗೈದಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಅವರು, "ಇಷ್ಟು ದಿನಗಳ ಕಾಲ ದೇವಸ್ಥಾನಗಳ ಮುಂದೆ 'ಚಪ್ಪಲಿ ಕಳ್ಳರಿದ್ದಾರೆ' ಎಂದು ಬೋರ್ಡ್ ಹಾಕಲಾಗುತ್ತಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ 'ಹುಂಡಿ ಹಣ ಕಳ್ಳರಿದ್ದಾರೆ' ಎಂದು ಬೋರ್ಡ್ ಹಾಕಬೇಕಾಗುತ್ತದೆ," ಎಂದು ಲೇವಡಿ ಮಾಡಿದರು.
ರಾಮಮಂದಿರದ 200 ಕೋಟಿ ಹಗರಣಕ್ಕೆ ಕರ್ನಾಟಕದ ನಂಟು?
ರಾಮಮಂದಿರಕ್ಕೆ ಸೇರಿದ ಸುಮಾರು 200 ಕೋಟಿ ರೂಪಾಯಿ ದೇಣಿಗೆ ಹಣ ದುರ್ಬಳಕೆಯಾಗಿದೆ ಎಂದು ಆರೋಪಿಸಿದ ಹರಿಪ್ರಸಾದ್, ಈ ಬಗ್ಗೆ ನಡೆಯುತ್ತಿರುವ ಎಸ್‌ಐಟಿ ತನಿಖೆ ಆಮೆಗತಿಯಲ್ಲಿದೆ ಎಂದರು. ಆದ್ದರಿಂದ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರಿಂದ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಕರ್ನಾಟಕದ ನಂಟು: "ಈ ದುರ್ಬಳಕೆಯಾಗಿರುವ ಹಣದಲ್ಲಿ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರಿಗೂ ಪಾಲು ತಲುಪಿದೆ. ಈ ಹಿಂದೆ ಗೋಹತ್ಯೆ ತಡೆ ಕಾಯ್ದೆ ಜಾರಿಗೆ ತರಲು ಸಹಕರಿಸಿದ್ದಕ್ಕಾಗಿ ಆ ವ್ಯಕ್ತಿಗೆ ಹಲವು ಬಹುಮಾನಗಳು (ರಿವಾರ್ಡ್‌ಗಳು) ಬಂದಿವೆ. ನಿಷ್ಪಕ್ಷಪಾತ ತನಿಖೆಯಾದರೆ ಸತ್ಯ ಹೊರಬರಲಿದೆ," ಎಂದು ಅವರು ಹೊಸ ಬಾಂಬ್ ಸಿಡಿಸಿದರು.
ರಾಮ್ ಮಾಧವ್ ಪಾಕಿಸ್ತಾನದೊಂದಿಗೆ ಗುಪ್ತ ಸಭೆ ನಡೆಸಿದ್ದೇಕೆ? ರಾಜಧಾನಿಯಲ್ಲಿ ಸದ್ಯದಲ್ಲೇ ನಡೆಯಲಿರುವ ಗ್ರೇಟರ್ ಬೆಂಗಳೂರು ಅಥಾರಿಟಿ ಚುನಾವಣೆಗೆ ಬಿಜೆಪಿ ಹೈಕಮಾಂಡ್ ರಾಮ್ ಮಾಧವ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿರುವುದನ್ನು ಪ್ರಶ್ನಿಸಿದ ಹರಿಪ್ರಸಾದ್, ದೇಶದ ಭದ್ರತೆಗೆ ಸಂಬಂಧಿಸಿದಂತೆ ಕೆಲವು ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟರು.
ನಾಲ್ಕು ರಹಸ್ಯ ಸಭೆಗಳು: "ರಾಮ್ ಮಾಧವ್ ಅವರು ಕೊಲಂಬೊ ಮತ್ತು ಲಂಡನ್‌ನಲ್ಲಿ ಪಾಕಿಸ್ತಾನದ ಐಎಸ್‌ಐನ ಮಾಜಿ ಮೇಜರ್ ಜನರಲ್ ಜೊತೆಗೆ 4 ಬಾರಿ ಗುಪ್ತ ಸಭೆಗಳನ್ನು ನಡೆಸಿದ್ದಾರೆ. ಇವರಿಗೆ ವಿದೇಶಾಂಗ ನೀತಿಯ ಬಗ್ಗೆ ತೀರ್ಮಾನ ಕೈಗೊಳ್ಳಲು ಅಧಿಕಾರ ಕೊಟ್ಟವರು ಯಾರು? ಇವರು ಸಚಿವರೂ ಅಲ್ಲ, ಸಂಸದರೂ ಅಲ್ಲ. ಕೇವಲ ಆರ್‌ಎಸ್‌ಎಸ್ ಪ್ರಚಾರಕರಾಗಿ ರಹಸ್ಯ ಸಭೆ ನಡೆಸಿದ್ದನ್ನು ದೇಶದ ಜನರಿಂದ ಏಕೆ ಮುಚ್ಚಿಡಲಾಗಿದೆ?" ಎಂದು ಪ್ರಶ್ನಿಸಿದರು.
ಬಿಜೆಪಿಯ ದ್ವಂದ್ವ ನೀತಿ: "ಇತ್ತೀಚೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಪಾಕಿಸ್ತಾನದ ಜೊತೆ ಮಾತುಕತೆ ನಡೆಸುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ. ಆದರೆ ಇದೇ ಮಾತುಗಳನ್ನು ನಾನು ಆಡಿದ್ದಾಗ 2 ವರ್ಷಗಳ ಕಾಲ ನನ್ನ ಹಿಂದೆ ಬಿದ್ದಿದ್ದರು. ಇವರು ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದ ಮೇಲಷ್ಟೇ ನನ್ನ ಸಹವಾಸ ಬಿಟ್ಟರು," ಎಂದು ಕುಟುಕಿದರು.
'ಆಪರೇಷನ್ ಸಿಂಧೂರ್' ಸೈನಿಕರ ಸಾವು ಮುಚ್ಚಿಟ್ಟಿದ್ದೇಕೆ?
ಸೇನಾ ಕಾರ್ಯಾಚರಣೆಯ ವಿಚಾರದಲ್ಲೂ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ ಹರಿಪ್ರಸಾದ್, "'ಆಪರೇಷನ್ ಸಿಂಧೂರ್'ನಲ್ಲಿ ನಮ್ಮ ಯಾವುದೇ ಯೋಧರು ಸತ್ತಿಲ್ಲ ಎಂದು ಮೊದಲು ಹೇಳಲಾಗಿತ್ತು. ಆದರೆ ಮೊನ್ನೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 6 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ದೇಶಕ್ಕಾಗಿ ಪ್ರಾಣ ಕೊಟ್ಟವರ ಹೆಸರನ್ನು ಇಷ್ಟು ದಿನ ಮುಚ್ಚಿಟ್ಟಿದ್ದು ಏಕೆ?" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಬಂದಾಗಲೆಲ್ಲಾ ಬಿಜೆಪಿಯವರು ಪಾಕಿಸ್ತಾನ, ಚಿಕನ್, ಮಟನ್, ಹಲಾಲ್, ಹಿಜಾಬ್ ಮತ್ತು ಮಂಗಳಸೂತ್ರದ ಬಗ್ಗೆ ಮಾತನಾಡುತ್ತಾರೆ. ರಾಮ್ ಮಾಧವ್ ಅವರು ಬೆಂಗಳೂರಿಗೆ ಬರುವ ಮುನ್ನ ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಸವಾಲು ಹಾಕಿದರು.
ಮತದಾರರ ಪಟ್ಟಿ ಪರಿಷ್ಕರಣೆ: ಕಾರ್ಯಕರ್ತರಿಗೆ ಕರೆ
ರಾಜ್ಯದಲ್ಲಿ ಆರಂಭವಾಗಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಬಗ್ಗೆ ಮಾತನಾಡಿದ ಅವರು, "ಕೇವಲ ಗ್ಯಾರಂಟಿ ಯೋಜನೆಗಳ ಹಣ ಬರುತ್ತಿದೆ ಎಂದು ಜನರು ನಿರ್ಲಕ್ಷ್ಯ ಮಾಡಬಾರದು. ಹೆಸರು ಪಟ್ಟಿಯಿಂದ ಕೈಬಿಟ್ಟರೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ಇದಕ್ಕಾಗಿ ಕಾಂಗ್ರೆಸ್ ವತಿಯಿಂದಲೂ ಮನೆ-ಮನೆ ಸಮೀಕ್ಷೆ ನಡೆಸಿ ನೈಜತೆ ಪರಿಶೀಲಿಸಲು ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ," ಎಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಸರಿಯಾಗಿ ಅಧಿಕಾರಿಗಳನ್ನು ನಿಯೋಜಿಸದ ಕಾರಣ ಪಕ್ಷಕ್ಕೆ ಹಿನ್ನಡೆಯಾಗಿತ್ತು ಎಂದು ಅವರು ಒಪ್ಪಿಕೊಂಡರು.



