ಚಂದ್ರವಳ್ಳಿ ನ್ಯೂಸ್, ರಾಮನಗರ:
ಬಿಡದಿಯ ನೊಂದ ರೈತರ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವಿನ ಜಟಾಪಟಿ ತಾರಕಕ್ಕೇರಿದೆ. "ರೈತರ ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿ ನಾನು ಜೂನ್ 27ರ ಶನಿವಾರದಂದು ಬಿಡದಿಯ ಭೈರಮಂಗಲಕ್ಕೆ ಹೋಗುತ್ತಿದ್ದೇನೆ. ಸಿಎಂ ಚರ್ಚೆಗೆ ಬರುವುದಾದರೆ ಬರಲಿ, ನಾನು ಮಧ್ಯಾಹ್ನದವರೆಗೂ ಅಲ್ಲಿಯೇ ಕಾಯುತ್ತೇನೆ" ಎಂದು ಕುಮಾರಸ್ವಾಮಿ ಬಹಿರಂಗ ಸವಾಲು ಹಾಕಿದ್ದಾರೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಜೊತೆ ಯಾವುದೇ ಪತ್ರ ಸಮರ ನಡೆಸುತ್ತಿಲ್ಲ. ಬದಲಿಗೆ ರೈತರ ಸಮ್ಮುಖದಲ್ಲೇ ಮುಖಾಮುಖಿ ಚರ್ಚೆಯಾಗಲಿ ಎಂಬುದು ತಮ್ಮ ನಿಲುವು ಎಂದು ಸ್ಪಷ್ಟಪಡಿಸಿದರು.
ವಿಧಾನಸೌಧ ಬೇಡ, ಭೈರಮಂಗಲದಲ್ಲೇ ಚರ್ಚೆಯಾಗಲಿ:
ಮುಖ್ಯಮಂತ್ರಿಯವರು ಈ ವಿಷಯವಾಗಿ ಚರ್ಚಿಸಲು ವಿಧಾನಸೌಧಕ್ಕೆ ಬರುವಂತೆ ಪತ್ರ ಬರೆದಿದ್ದರು. ಆದರೆ, ಅದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಎಸಿ ರೂಂ ಚರ್ಚೆ ಬೇಡ ಎಂದು ತಿರಸ್ಕರಿಸಿ ರೈತರ ಬಳಿ ಬರುವಂತೆ ಒತ್ತಾಯಿಸಿದ್ದಾರೆ.
"ನೊಂದ ರೈತರ ಸಮ್ಮುಖದಲ್ಲಿಯೇ ಚರ್ಚೆ ನಡೆಯುವುದು ಸೂಕ್ತ. ಹಾಗಾಗಿ ಶನಿವಾರ ನಾನೇ ಭೈರಮಂಗಲಕ್ಕೆ ಹೋಗುತ್ತಿದ್ದೇನೆ. ಸಿಎಂ ಅವರಿಗೆ ಪತ್ರ ಬರೆದಿದ್ದರೂ ಇನ್ನೂ ಅವರಿಂದ ಉತ್ತರ ಬಂದಿಲ್ಲ."
"ಸರ್ಕಾರದವರು ಭೈರಮಂಗಲದಲ್ಲಿ 144 ಸೆಕ್ಷನ್ ಜಾರಿಗೊಳಿಸಲು ಮುಂದಾಗಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ನಾವೇನು ಅಲ್ಲಿ ಗಲಾಟೆ ಮಾಡಲು ಹೋಗುತ್ತಿಲ್ಲ, ಕಾನೂನು ಚೌಕಟ್ಟಿನಲ್ಲೇ ರೈತರ ಧ್ವನಿಯಾಗಿ ಭಾಗಿಯಾಗುತ್ತಿದ್ದೇವೆ" ಎಂದರು.
ಬಲವಂತದ ಭೂಸ್ವಾಧೀನಕ್ಕೆ ನನ್ನ ವಿರೋಧವಿದೆ:
ಬಿಡದಿ ಉಪನಗರ ಯೋಜನೆಗೆ ಸಂಬಂಧಿಸಿದಂತೆ ಕೆಲವೇ ಕೆಲವು ರೈತರು ಭೂಮಿ ಕೊಡಲು ಒಪ್ಪಿರಬಹುದು, ಆದರೆ ಬಹುಸಂಖ್ಯಾತ ರೈತರು ತಮ್ಮ ಜಮೀನು ನೀಡಲು ಸಿದ್ಧರಿಲ್ಲ ಎಂದು ಹೆಚ್‌ಡಿಕೆ ಪ್ರತಿಪಾದಿಸಿದರು.
"ಇದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಏನೂ ಇಲ್ಲ. ರೈತರು ಸ್ವಇಚ್ಛೆಯಿಂದ ಭೂಮಿ ಕೊಟ್ಟರೆ ನನ್ನದೇನೂ ತಕರಾರಿಲ್ಲ. ಆದರೆ, ರೈತರನ್ನು ಬೆದರಿಸಿ ಬಲವಂತವಾಗಿ ಭೂಮಿ ಕಿತ್ತುಕೊಳ್ಳಲು ಬಂದರೆ ಸಹಿಸುವುದಿಲ್ಲ. ಹಿಂದೆ ನಾನು ಸಿಎಂ ಆಗಿದ್ದಾಗ ಇದೇ ಯೋಜನೆ ಬಂದಾಗ ರೈತರನ್ನು ಕೃಷ್ಣಾ ಗೃಹ ಕಚೇರಿಗೆ ಕರೆಸಿ ಸಭೆ ನಡೆಸಿದ್ದೆ. ಅಂದು ಇದೇ ಕಾಂಗ್ರೆಸ್ ನಾಯಕರು ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಆದರೆ ಇಂದು ರೈತರು ಬೇಡವೆಂದರೂ ಇವರಿಗೆ ಯೋಜನೆ ಏಕೆ ಬೇಕಾಗಿದೆ?" ಎಂದು ಪ್ರಶ್ನಿಸಿದರು.
ಮತ್ತೆ ವಾಚ್ ವಿವಾದ: ಎಸ್‌ಐಟಿ ತನಿಖೆ ಮಾಡಿಸಲಿ ಎಂದು ಟಾಂಗ್!:
ತಮ್ಮ ಬಳಿ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ವಾಚ್‌ಗಳಿವೆ ಎಂಬ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಆರೋಪಕ್ಕೆ ಮತ್ತೊಮ್ಮೆ ಮಾಧ್ಯಮಗಳ ಎದುರೇ ಕೈಲಿದ್ದ ವಾಚ್ ತೋರಿಸಿ ಕುಮಾರಸ್ವಾಮಿ ತಿರುಗೇಟು ನೀಡಿದರು.
"ನೋಡಿ, ನಾನು ಕಟ್ಟಿರುವುದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿತ್ರವಿರುವ ಸಾಧಾರಣ ಎಚ್‌ಎಂಟಿ ವಾಚ್. ಈ ಸರ್ಕಾರದ ಬಳಿ ಪ್ರತಿಯೊಂದಕ್ಕೂ ಎಸ್‌ಐಟಿ ತನಿಖಾ ತಂಡ ಇದೆಯಲ್ಲ? ಅನುಮಾನವಿದ್ದರೆ ನಮ್ಮ ಮನೆಗೆ ಎಸ್‌ಐಟಿ ಕಳುಹಿಸಿ ತನಿಖೆ ಮಾಡಿಸಲಿ" ಎಂದು ವ್ಯಂಗ್ಯವಾಡಿದರು.



