ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಐಮಂಗಲ ಹೋಬಳಿ ಕಲ್ಕುಂಟೆ ಕರಿಯಮ್ಮ ದೇವಸ್ಥಾನದ ಆವರಣದಲ್ಲಿ ನೀರಾವರಿ ಹೋರಾಟ ಸಮಿತಿಯ ಸದಸ್ಯರು ಹಾಗೂ ರೈತ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಮಹತ್ವದ ರೈತರ ಸಭೆ ಜರುಗಿತು. ಐಮಂಗಲ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.
ಸರ್ಕಾರಕ್ಕೆ ಕಾಳಜಿಯಿಲ್ಲ: ಕೆ.ಟಿ. ತಿಪ್ಪೇಸ್ವಾಮಿ ಆಕ್ರೋಶ
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಕೆ.ಟಿ. ತಿಪ್ಪೇಸ್ವಾಮಿ, "ಈ ಭಾಗದ ಕೆರೆಗಳನ್ನು ತುಂಬಿಸುವಂತೆ ಒತ್ತಾಯಿಸಿ ಈಗಾಗಲೇ ಅನೇಕ ಬಾರಿ ಚಳುವಳಿ, ಹೋರಾಟಗಳನ್ನು ಮಾಡಿದ್ದರೂ ಸಹ ಸರ್ಕಾರ ರೈತರ ಬಗ್ಗೆ ಕನಿಷ್ಠ ಕಾಳಜಿ ವಹಿಸುತ್ತಿಲ್ಲ" ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
"ಈಗಾಗಲೇ ಸರ್ಕಾರದ ಗಮನ ಸೆಳೆಯಲಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದು ಏಜೆನ್ಸಿ ಕೂಡ ಫಿಕ್ಸ್ ಆಗಿದೆ. ಹೀಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ತುರ್ತಾಗಿ ಕಾಮಗಾರಿಯನ್ನು ಪ್ರಾರಂಭಿಸಬೇಕು," ಎಂದು ಅವರು ಒತ್ತಾಯಿಸಿದರು.
ಹಿರಿಯೂರಿನಲ್ಲಿ ಬೃಹತ್ ಸಮಾವೇಶ; ಹೆದ್ದಾರಿ ತಡೆಗೆ ಸಿದ್ಧತೆ
ಮುಂದಿನ ಹೋರಾಟದ ಭಾಗವಾಗಿ ಹಿರಿಯೂರು ನಗರದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಚಿವರ ಭೇಟಿಗೆ ಗಡುವು: ಈ ಸಮಾವೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನೀರಾವರಿ ಸಚಿವರು ಖುದ್ದಾಗಿ ಆಗಮಿಸಿ ಮನವಿ ಸ್ವೀಕರಿಸಬೇಕು.
ರಾಷ್ಟ್ರೀಯ ಹೆದ್ದಾರಿ ಬಂದ್: ಸಚಿವರು ಬಂದು ಮನವಿ ಸ್ವೀಕರಿಸಿ ತಕ್ಷಣವೇ ಕಾಮಗಾರಿ ಅನುಷ್ಠಾನಗೊಳಿಸದಿದ್ದರೆ, ಚಿತ್ರದುರ್ಗ ಜಿಲ್ಲೆಯ ಆರಂಭದ ಗಡಿಯಿಂದ ಕೊನೆಯ ಗಡಿಯವರೆಗೂ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.
ಚುನಾವಣೆ ಬಹಿಷ್ಕಾರದ ಎಚ್ಚರಿಕೆ: ಒಂದು ವೇಳೆ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ತಕ್ಷಣ ಆರಂಭವಾಗದಿದ್ದರೆ, ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವ ಕಠಿಣ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ರೈತ ಮುಖಂಡರು ಖಡಕ್ ಆಗಿ ತಿಳಿಸಿದರು.
ಈ ಬೃಹತ್ ಸಮಾವೇಶಕ್ಕೆ ಚಿತ್ರದುರ್ಗ ಜಿಲ್ಲೆಯ ಆರೂ ತಾಲೂಕುಗಳ ರೈತರು, ರೈತ ಮುಖಂಡರು ಹಾಗೂ ರಾಜ್ಯದ ಪ್ರಮುಖ ರೈತ ನಾಯಕರು ಭಾಗವಹಿಸಲಿದ್ದು, ಈ ಭಾಗದ ಹೆಚ್ಚಿನ ಸಂಖ್ಯೆಯ ಯುವಕರು ಮತ್ತು ರೈತರು ಕೈಜೋಡಿಸಬೇಕೆಂದು ಕರೆ ನೀಡಲಾಯಿತು.
ಸಭೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ್ ಮಾತನಾಡಿದರು. ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ತಿಪ್ಪೀರಯ್ಯ ಬಬ್ಬೂರು, ಮಾಜಿ ತಾಲೂಕು ಪಂಚಾಯತಿ ಸದಸ್ಯ ಯಶವಂತ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕಾಂತಣ್ಣ, ಹಾಗೂ ಮುಖಂಡರಾದ ತುಳಸಿದಾಸ್, ಚಿಕ್ಕಣ್ಣ, ಆನಂದಪ್ಪ, ಏಕಾಂತಪ್ಪ, ಕುಮಾರ್ ಸೇರಿದಂತೆ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.



