ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ, ಗೃಹಕಚೇರಿ 'ಕೃಷ್ಣಾ'ದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ. ತಮ್ಮ 50 ವರ್ಷಗಳ ರಾಜಕೀಯ ಪಯಣ, ತತ್ವ-ಸಿದ್ಧಾಂತಗಳು ಹಾಗೂ ಮುಂದಿನ ನಡೆಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡಿರುವ ಅವರು, ಯಾವುದೇ ಕಾರಣಕ್ಕೂ ತಾವು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ರಾಜ್ಯಸಭೆಯ ಆಫರ್ ಬಂದಿತ್ತು, ಆದರೆ...":
"ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿಯಿಲ್ಲ. ರಾಜ್ಯಸಭೆಗೆ ಹೋಗುವಂತೆ ಹೈಕಮಾಂಡ್‌ನಿಂದ ಆಫರ್ ಬಂದಿತ್ತು. ಅದನ್ನು ನಾನು ವಿನಮ್ರವಾಗಿ ನಿರಾಕರಿಸಿದ್ದೇನೆ. ನಾನು ರಾಜ್ಯ ರಾಜಕಾರಣದಲ್ಲೇ ಸಕ್ರಿಯನಾಗಿರುತ್ತೇನೆ. ಜನ ನನ್ನನ್ನು 50 ವರ್ಷಗಳಿಂದ ಬೆಳೆಸಿದ್ದಾರೆ, ಈ ಬಾರಿಯೂ 5 ವರ್ಷಕ್ಕೆ ಆಯ್ಕೆ ಮಾಡಿದ್ದಾರೆ. ಅಲ್ಲಿಯವರೆಗೆ ಕರ್ನಾಟಕದ ಜನರ ಪರವಾಗಿ ಮತ್ತು ನನ್ನ ಕ್ಷೇತ್ರದ ಜನರ ಪರವಾಗಿ ಕೆಲಸ ಮಾಡುತ್ತೇನೆ" ಎಂದು ಸಿದ್ದರಾಮಯ್ಯ ತಿಳಿಸಿದರು.
"ಸಂವಿಧಾನ ಇಲ್ಲದಿದ್ದರೆ ನನ್ನ ಬದುಕು ಏನಾಗುತ್ತಿತ್ತು?":
ತಮ್ಮ ಹಳ್ಳಿಯ ದಿನಗಳನ್ನು ನೆನೆದು ಕಣ್ಣೀರಾಕಿದ ಸಿದ್ದರಾಮಯ್ಯ, "ನಾನು ಹಳ್ಳಿಯಿಂದ ಬಂದವನು, ನನ್ನ ತಂದೆ-ತಾಯಿ ಅವಿದ್ಯಾವಂತರು. ನಮ್ಮ ಕುಟುಂಬದಲ್ಲಿ ಯಾರೂ ರಾಜಕೀಯದಲ್ಲಿ ಇರಲಿಲ್ಲ. ಒಂದು ವೇಳೆ ಈ ದೇಶದಲ್ಲಿ ಸಂವಿಧಾನ ಇಲ್ಲದೇ ಹೋಗಿದ್ದರೆ ಸಿದ್ದರಾಮಯ್ಯ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ, ವಿದ್ಯಾವಂತನಾಗುತ್ತಿರಲಿಲ್ಲ, ಯಾವುದೇ ಹುದ್ದೆಯನ್ನೂ ಅಲಂಕರಿಸುತ್ತಿರಲಿಲ್ಲ. ಬದಲಿಗೆ ಎಲ್ಲೋ ಕುರಿ ಮೇಯಿಸಿಕೊಂಡು ಇರುತ್ತಿದ್ದೆ. ಸಂವಿಧಾನಕ್ಕೆ ಯಾರೇ ಧಕ್ಕೆ ತಂದರೂ ಕೊನೆ ಉಸಿರಿರುವವರೆಗೂ ಅವರ ವಿರುದ್ಧ, ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತೇನೆ" ಎಂದು ಭಾವುಕರಾದರು.
ಕೊಟ್ಟ ಭರವಸೆ ಈಡೇರಿಸಿದ ತೃಪ್ತಿ: ವಿಪಕ್ಷಗಳಿಗೆ ಚಾಟಿ:
ತಮ್ಮ ಆಡಳಿತಾವಧಿಯ ರಿಪೋರ್ಟ್ ಕಾರ್ಡ್ ಮುಂದಿಟ್ಟ ಸಿದ್ದರಾಮಯ್ಯ, ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ತೀಕ್ಷ್ಣ ತಿರುಗೇಟು ನೀಡಿದರು.
ಅಸಮಾನತೆ ವಿರುದ್ಧ ಹೋರಾಟ: ಕುವೆಂಪು ಅವರು ಹೇಳಿದಂತೆ ಇಡೀ ಸಮಾಜ 'ಶಾಂತಿಯ ತೋಟ' ಆಗಬೇಕು. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎನ್ನುವುದೇ ನನ್ನ ಆಶಯ.
ಭರವಸೆಗಳ ಈಡೇರಿಕೆ: 2013ರಲ್ಲಿ ಕೊಟ್ಟಿದ್ದ 165 ಭರವಸೆಗಳಲ್ಲಿ 158 ಭರವಸೆ ಈಡೇರಿಸಿದ್ದೆ. ಈಗ 2023ರಲ್ಲಿ ಕೊಟ್ಟಿದ್ದ 550ಕ್ಕೂ ಹೆಚ್ಚು ಭರವಸೆಗಳ ಪೈಕಿ ಸುಮಾರು 300 ಭರವಸೆಗಳನ್ನು ಹಾಗೂ ಐದು ಮುಖ್ಯ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇನೆ.
ದಿವಾಳಿ ಎಂದವರಿಗೆ ಉತ್ತರ: "ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತದೆ, ಅಭಿವೃದ್ಧಿಗೆ ದುಡ್ಡಿರಲ್ಲ ಎಂದು ಪ್ರಧಾನಿ ಮೋದಿ ಸೇರಿದಂತೆ ವಿಪಕ್ಷಗಳು ಅಪಪ್ರಚಾರ ಮಾಡಿದ್ದವು. ಆದರೆ, ಗ್ಯಾರಂಟಿ ಜಾರಿಯಾದ ಮೇಲೂ ಕರ್ನಾಟಕ ಇಡೀ ದೇಶದಲ್ಲೇ ತಲಾ ಆದಾಯದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ" ಎಂದು ಹೆಮ್ಮೆಯಿಂದ ಹೇಳಿದರು.
ಒಡನಾಡಿಗಳು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದ:
2006ರಲ್ಲಿ ತಾವು ಕಾಂಗ್ರೆಸ್ ಸೇರಿದ ದಿನಗಳನ್ನು ಸ್ಮರಿಸಿದ ಅವರು, "ಅಂದು ನನ್ನ ಜೊತೆ 8 ಜನ ಶಾಸಕರು ಕಾಂಗ್ರೆಸ್ ಸೇರಿದ್ದರು, ಅವರಲ್ಲಿ ಕೆಲವರು ಇಂದು ಬದುಕಿಲ್ಲ. ಯಾರು ನನ್ನ ಜೊತೆ ನಿಂತಿದ್ದರೋ ಅವರಿಗೆ ನಾನು ಚಿರಋಣಿ. 2013 ರಿಂದ 18 ಹಾಗೂ 2023 ರಿಂದ ಇಲ್ಲಿಯವರೆಗೆ ಎರಡು ಬಾರಿ ಸಿಎಂ ಆಗಿ ಕೆಲಸ ಮಾಡಲು ಸಹಕರಿಸಿದ ಹೈಕಮಾಂಡ್, ಶಾಸಕರು, ಸಂಸದರು ಮತ್ತು ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತೇನೆ. ನನ್ನ ಇಡೀ ರಾಜಕೀಯ ಜೀವನ ಒಂದು ತೆರೆದ ಪುಸ್ತಕ. ನಾನು ಯಾವತ್ತೂ ಅಧಿಕಾರ, ಹಣದ ಹಿಂದೆ ಹೋದವನಲ್ಲ, ನನ್ನ ಮೌಲ್ಯಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ" ಎಂದು ಗದ್ಗದಿತರಾಗಿ ನುಡಿದರು.
ಆದರೆ, ರಾಜೀನಾಮೆ ನೀಡುವ ಅಂತಿಮ ವಿದಾಯದ ಕ್ಷಣದಲ್ಲೂ ಸಿದ್ದರಾಮಯ್ಯ ಅವರು ಭರ್ಜರಿ ಆಡಳಿತಾತ್ಮಕ ಕ್ರಮ ಕೈಗೊಂಡಿದ್ದು, ತಮ್ಮ ಆಪ್ತ ವಲಯದ ಪ್ರಮುಖ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಲೋಕಭವನದಲ್ಲಿ ರಾಜೀನಾಮೆ ಪತ್ರ ಹಸ್ತಾಂತರ:
ಇಂದು ಮಧ್ಯಾಹ್ನ ಲೋಕಭವನಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ಅಧಿಕೃತವಾಗಿ ಹಸ್ತಾಂತರಿಸಿದರು. ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಸದ್ಯ ಇಂದೋರ್ ಪ್ರವಾಸದಲ್ಲಿರುವ ಕಾರಣ, ಸಿದ್ದರಾಮಯ್ಯ ಅವರು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭು ಶಂಕರ್ ಅವರಿಗೆ ರಾಜೀನಾಮೆ ಪತ್ರವನ್ನು ನೀಡಿದರು. ಸದ್ಯಕ್ಕೆ ವಿಶೇಷ ಕಾರ್ಯದರ್ಶಿಗಳು ಪತ್ರವನ್ನು ಸ್ವೀಕರಿಸಿದ್ದರೂ, ಸಾಂವಿಧಾನಿಕ ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ಖುದ್ದಾಗಿ ಸಹಿ ಮಾಡಿದ ಬಳಿಕವೇ ರಾಜೀನಾಮೆ ಪ್ರಕ್ರಿಯೆ ಅಧಿಕೃತವಾಗಿ ಅಂಗೀಕಾರವಾಗಲಿದೆ.



