ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಹುದ್ದೆ ತ್ಯಜಿಸಿದ ಬಳಿಕ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಸೈಡ್‌ಲೈನ್ ಆಗುತ್ತಿದ್ದಾರೆಯೇ ಅಥವಾ ಅವರನ್ನು ಕಡೆಗಣಿಸಲಾಗುತ್ತಿದೆಯೇ ಎಂಬ ಚರ್ಚೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ರೈಲಿನ ಉದಾಹರಣೆಯೊಂದಿಗೆ ಅತ್ಯಂತ ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ರಾಜಕೀಯದ ವೇಗ ಹಾಗೂ ಸದಾ ಜನರ ಸಂಪರ್ಕದಲ್ಲಿರಬೇಕಾದ ಅನಿವಾರ್ಯತೆಯನ್ನು ಮುಕ್ತವಾಗಿ ವಿಶ್ಲೇಷಿಸಿದರು.
ವೇಗಕ್ಕೆ ತಕ್ಕಂತೆ ಓಡದಿದ್ದರೆ 'ಟ್ರೈನ್ ಮಿಸ್' ಖಚಿತ!:
"ಇದು ಅತ್ಯಂತ ವೇಗವಾಗಿ ಓಡುತ್ತಿರುವ ಕಾಲ. ರಾಜಕಾರಣದಲ್ಲಿ ನಾವೂ ಕೂಡ ಆ ಸ್ಪೀಡ್‌ಗೆ ತಕ್ಕಂತೆ ಓಡಬೇಕು. ಒಂದು ವೇಳೆ ಓಡದಿದ್ದರೆ ಟ್ರೈನ್ ಮಿಸ್ ಆಗುತ್ತದೆ. ರಾಜಕಾರಣ ಅಂದರೆ ಹಾಗೇನೇ."
ಸತೀಶ್ ಜಾರಕಿಹೊಳಿ, ಸಚಿವರು.
ಮುಂದಿನ ನಿಲ್ದಾಣಕ್ಕಾದರೂ ಹೋಗಿ ರೈಲು ಹಿಡಿಯಬೇಕು: ಒಮ್ಮೆ ರೈಲು ತಪ್ಪಿಹೋಯಿತು ಎಂದು ಸುಮ್ಮನೆ ಕೂರಲು ಸಾಧ್ಯವಿಲ್ಲ. ಬೇಕಿದ್ದರೆ ತುಮಕೂರಿಗೋ ಅಥವಾ ಅರಸೀಕೆರೆಗೋ ಯಾವುದಾದರೂ ವಾಹನದಲ್ಲಿ ಮುಂದಿ ಹೋಗಿಯಾದರೂ ಆ ರೈಲನ್ನು ಹಿಡಿಯುವ ಪ್ರಯತ್ನ ಮಾಡಬೇಕು. ಒಂದು ವೇಳೆ ನಾವು ರೈಲು ಹಿಡಿಯದೇ ಇದ್ದರೆ, ಜನರು ನಮ್ಮನ್ನು ಮರೆತುಬಿಡುತ್ತಾರೆ. ಇದು ಕೇವಲ ನನ್ನ ವೈಯಕ್ತಿಕ ಮಾತಲ್ಲ, ಜನರ ಅಭಿಪ್ರಾಯವೂ ಹೌದು.
ಜನರ ಸಂಪರ್ಕವಿದ್ದರಷ್ಟೇ ಲೀಡರ್: ಸಿದ್ದರಾಮಯ್ಯ ಅವರು ಮೈಸೂರಲ್ಲೇ ಕೂತು ರಾಜಕಾರಣ ಮಾಡಬಹುದು, ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಒಬ್ಬ ನಾಯಕನಿಗೆ ಜನರ ಸಂಪರ್ಕ ಎಲ್ಲಿಯವರೆಗೆ ಇರುತ್ತದೆಯೋ, ಅಲ್ಲಿಯ ತನಕ ಮಾತ್ರ ಆತ ಲೀಡರ್ ಆಗಿ ಉಳಿಯಲು ಸಾಧ್ಯ ಎಂದು ಸಚಿವರು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದ ನಂತರದ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ, ಸಚಿವ ಸತೀಶ್ ಜಾರಕಿಹೊಳಿ ಅವರ ಈ 'ರೈಲು ಮತ್ತು ನಾಯಕತ್ವ'ದ ಹೋಲಿಕೆ ಈಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.



