ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತಾಲೂಕಿನ ತೋಪಿನಮಾಳಿಗೆ (ಎಣ್ಣೆಗೆರೆ) ಗ್ರಾಮದ ದಲಿತರಿಗೆ ಸೇರಿದ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಲ್ಲು ಕ್ವಾರೆ ನಡೆಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಕ್ವಾರೆ ಚಟುವಟಿಕೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಮಹಾನಾಯಕ ದಲಿತ ಸೇನೆಯು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ತೋಪಿನಮಾಳಿಗೆ ಗ್ರಾಮದ ರೀ.ಸ.ನಂ. 589ರ ದಲಿತರಿಗೆ ಸೇರಿದ ಜಮೀನನ್ನು ಮೆ.ಸಿದ್ಧಾರ್ಥ್ ಕನ್ಸ್ಟ್ರಕ್ಷನ್ಸ್ ಮಾಲೀಕರು ಕಾನೂನುಬಾಹಿರವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಯಾವುದೇ ಅನುಮತಿಯಿಲ್ಲದೆ, ದೌರ್ಜನ್ಯಪೂರ್ವಕವಾಗಿ ಕ್ವಾರೆ ನಡೆಸುತ್ತಿರುವುದರಿಂದ ಜಮೀನಿನ ಮಾಲೀಕರ ಆಸ್ತಿ ಹಕ್ಕು, ಜೀವನೋಪಾಯ ಹಾಗೂ ಭದ್ರತೆಗೆ ತೊಂದರೆಯಾಗಿದೆ. ಅಲ್ಲದೆ, ಸ್ಥಳೀಯವಾಗಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಪ್ರಮುಖ ಬೇಡಿಕೆಗಳು:
ಸ್ಥಳ ಪರಿಶೀಲನೆ ಹಾಗೂ ಸರ್ವೇ: ಸಂಬಂಧಪಟ್ಟ ಜಮೀನಿನ ಸ್ಥಳ ಪರಿಶೀಲನೆ ನಡೆಸಬೇಕು ಮತ್ತು ಸರ್ವೇ ಕಾರ್ಯ ಕೈಗೊಂಡು ಜಮೀನಿನ ಮಾಲೀಕತ್ವ ಹಾಗೂ ಒತ್ತುವರಿಯನ್ನು ಧೃಡೀಕರಿಸಬೇಕು.
ಒತ್ತುವರಿ ತೆರವು: ಅಕ್ರಮ ಒತ್ತುವರಿ ಸಾಬೀತಾದಲ್ಲಿ, ಒತ್ತುವರಿಯನ್ನು ತೆರವುಗೊಳಿಸಿ ಜಮೀನನ್ನು ಮೂಲ ದಲಿತ ಮಾಲೀಕರಿಗೆ ಹಸ್ತಾಂತರಿಸಬೇಕು.
ಪರವಾನಗಿ ಪರಿಶೀಲನೆ: ಕ್ವಾರೆ ನಡೆಸಲು ಕಂದಾಯ, ಗಣಿ ಮತ್ತು ಭೂವಿಜ್ಞಾನ, ಪರಿಸರ ಹಾಗೂ ಇತರ ಇಲಾಖೆಗಳಿಂದ ಪಡೆದಿರುವ ಅನುಮತಿ ಮತ್ತು ಪರವಾನಗಿಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು.
ಅಕ್ರಮ ಕ್ವಾರೆ ಚಟುವಟಿಕೆ ತಡೆ: ಕಾನೂನುಬಾಹಿರವಾಗಿ ಕಲ್ಲು ಕ್ವಾರೆ ನಡೆಸುತ್ತಿರುವುದು ಕಂಡುಬಂದಲ್ಲಿ ತಕ್ಷಣವೇ ಅದನ್ನು ಸ್ಥಗಿತಗೊಳಿಸಿ, ಸ್ಥಳದಲ್ಲಿರುವ ಯಂತ್ರೋಪಕರಣಗಳ ಬಳಕೆಯನ್ನು ನಿಲ್ಲಿಸಬೇಕು.
ಕ್ರಿಮಿನಲ್ ಕ್ರಮ: ಜಮೀನಿನ ಮಾಲೀಕರಿಗೆ ಬೆದರಿಕೆ, ದೌರ್ಜನ್ಯ ಅಥವಾ ಕಿರುಕುಳ ನೀಡುವವರ ವಿರುದ್ಧ ಸೂಕ್ತ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು.
ದಲಿತರ ಜಮೀನು ರಕ್ಷಣೆ: ಇದು ದಲಿತರಿಗೆ ಮಂಜೂರಾದ/ಹಂಚಿಕೆಯಾದ ಜಮೀನಾಗಿದ್ದರೆ, SC/ST (Prevention of Atrocities) Act ಹಾಗೂ ಕರ್ನಾಟಕ ಭೂ ಕಾನೂನುಗಳ ಅಡಿಯಲ್ಲಿ ಅಗತ್ಯ ಕ್ರಮ ಜರುಗಿಸಬೇಕು.
ಲಿಖಿತ ಮಾಹಿತಿ: ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಅರ್ಜಿದಾರರಿಗೆ ಲಿಖಿತವಾಗಿ ಮಾಹಿತಿ ನೀಡಬೇಕು.
ಸ್ಥಳಕ್ಕೆ ಭೇಟಿ ನೀಡಿ ತುರ್ತು ತನಿಖೆ ನಡೆಸಿ, ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಜಮೀನಿನ ಮಾಲೀಕರ ಹಕ್ಕು ಮತ್ತು ಸುರಕ್ಷತೆಯನ್ನು ರಕ್ಷಿಸಬೇಕೆಂದು ಸಂಘಟನೆಯ ಸಂಸ್ಥಾಪಕ ರಾಜ್ಯಾದ್ಯಕ್ಷ ಮಂಜುನಾಥ್.ಎ. ತಾಳಕೆರೆ, ರಾಜ್ಯ ಕಾರ್ಯಾಧ್ಯಕ್ಷ ಕೆ.ಪಿ.ಶ್ರೀನಿವಾಸಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್.ಟಿ.ಎನ್ ಹಾಗೂ ರಾಜ್ಯ ಸಲಹೆಗಾರ ಪ್ರಶಾಂತ್ ಕುಮಾರ್.ಕೆ.ಟಿ ಒತ್ತಾಯಿಸಿದ್ದಾರೆ.




