ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಡ್ಡನಹಳ್ಳಿ ಗ್ರಾಮದ ಕೆರೆಯಲ್ಲಿ ಸರ್ಕಾರದಿಂದ ಯಾವುದೇ ಅಧಿಕೃತ ಪರವಾನಗೆ ಪಡೆಯದೆ, ಕಳ್ಳತನದಿಂದ ಅಕ್ರಮವಾಗಿ ಮಣ್ಣು ತುಂಬಿ ಸಾಗಿಸುತ್ತಿದ್ದ ವಾಹನಗಳನ್ನು ವಶಪಡಿಸಿಕೊಂಡು, ಚಾಲಕರು ಮತ್ತು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕುಶಾಲ್ ಚೌಕ್ಸ್ ಅವರ ಸೂಚನೆ ಹಾಗೂ ಹಿರಿಯೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಗೋಪಾಲಕೃಷ್ಣ ಬಿ.ಎನ್. ಅವರ ಮಾರ್ಗದರ್ಶನದಲ್ಲಿ ವಿಶೇಷ ಪೊಲೀಸ್ ತಂಡವು ಈ ದಾಳಿ ನಡೆಸಿದೆ.
ಹಿರಿಯೂರು ನಗರ ಪೊಲೀಸ್ ನಿರೀಕ್ಷಕರಾದ ಮೊಹಮ್ಮದ್ ಸಿರಾಜ್ (ಹಿ.ಗ್ರಾ.ಠಾಣೆ ಪ್ರಭಾರೆ) ಮತ್ತು ಪಿಎಸ್‌ಐ ಮಹೇಶ್ ಗೌಡ ಅವರ ನೇತೃತ್ವದ ತಂಡದಲ್ಲಿದ್ದ ಸಿಬ್ಬಂದಿ ವೆಂಕಟೇಶ್, ಹನೀಫ್ ಹಡಗಲಿ, ಸಿದ್ದಪ್ಪ, ನವೀನ್ ಕುಮಾರ್, ಜಾಫರ್ ಸಾಧಿಕ್ ಹಾಗೂ ಶ್ರೀಧರ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಡ್ಡನಹಳ್ಳಿ ಕೆರೆಯ ಅಂಗಳದಲ್ಲಿ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಪಾವತಿಸದೆ, ಅಕ್ರಮ ಲಾಭಕ್ಕಾಗಿ ಇಟಾಚಿ ಮೂಲಕ ಟಿಪ್ಪರ್ ಲಾರಿಗಳಿಗೆ ಮಣ್ಣು ತುಂಬಿ ಬೇರೆಡೆಗೆ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು, ಅಕ್ರಮ ಸಾಗಾಟಕ್ಕೆ ಬಳಸುತ್ತಿದ್ದ KA 03 AP 9024, RJ 19 GJ 7587, RJ 19 GJ 7588, KA 03 AP 9022 ಸಂಖ್ಯೆಯ ಟಿಪ್ಪರ್ ಲಾರಿಗಳು, KA 06 AC 7972 ಜೀಪ್ ಹಾಗೂ ಹಿಟಾಚಿ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ನಂ. 369/2026, ಕಲಂ: 303(2) BNS-2023 ಮತ್ತು 42, 43, 44 KMMCR-1994 ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಸಮಯೋಚಿತವಾಗಿ ಕಾರ್ಯನಿರ್ವಹಿಸಿ ಅಕ್ರಮ ತಡೆದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.



