ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೈಸ್ ಸಂಸ್ಥೆಯು ಯೋಜನೆಗೆ ಸಂಬಂಧಿಸಿದಂತೆ ಮೂಲ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಟೋಲ್ ಸಂಗ್ರಹಿಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯೋಜನಾ ಚೌಕಟ್ಟು ಒಪ್ಪಂದದ ಪ್ರಕಾರ ನೈಸ್ ಸಂಸ್ಥೆಯು ಒಟ್ಟು 111 ಕಿ.ಮೀ. ದೂರದ ರಸ್ತೆಯನ್ನು ನಿರ್ಮಾಣ ಮಾಡಬೇಕಿತ್ತು. ಆದರೆ ಕಂಪನಿಯು ಕೇವಲ 5 ಕಿ.ಮೀ. ರಸ್ತೆಯನ್ನು ಮಾತ್ರ ನಿರ್ಮಿಸಿದೆ. ಒಪ್ಪಂದದ ಪ್ರಕಾರ ಪೂರ್ಣ ಪ್ರಮಾಣದ ರಸ್ತೆ ನಿರ್ಮಾಣ ಮಾಡದ ಹೊರತು ಟೋಲ್ ಕಲೆಕ್ಟ್ ಮಾಡುವಂತೆಯೇ ಇಲ್ಲ. ಹೀಗಿದ್ದರೂ ಸಾರ್ವಜನಿಕರಿಂದ ಅಕ್ರಮವಾಗಿ ಟೋಲ್ ಸುಲಿಗೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರವು ಈ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳದೆ ನೈಸ್ ಕಂಪನಿ ಜೊತೆ ಶಾಮೀಲಾಗಿ ಜಾಣಮೌನ ವಹಿಸಿದೆ ಎಂದು ದೂರಿದ ಕುಮಾರಸ್ವಾಮಿ, "ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿರುವಂತಿದೆ. ಮೊದಲೇ ಅಕ್ರಮಗಳ ಆಗರವಾಗಿರುವ ನೈಸ್ ಕಂಪನಿಯನ್ನು ರಾಜ್ಯವನ್ನು ಆಳುತ್ತಿರುವ ಪ್ರಭಾವಿ ವ್ಯಕ್ತಿಯೇ ಖರೀದಿ ಮಾಡಲು ಹೊರಟಿದ್ದಾರೆ" ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ವಿಷಯವನ್ನು ರಾಜ್ಯದ ಗೌರವಾನ್ವಿತ ಹೈಕೋರ್ಟ್ ಹಾಗೂ ತಾವು ಈಗಾಗಲೇ ಪ್ರಶ್ನಿಸಿರುವುದಾಗಿ ತಿಳಿಸಿದ ಅವರು, ರಾಜ್ಯದ ಜನತೆ, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವ ಸಮುದಾಯ ಈ ಹಗಲು ದರೋಡೆಯ ವಿರುದ್ಧ ಧ್ವನಿ ಎತ್ತಿ ಖಂಡಿಸಬೇಕು ಎಂದು ಕರೆ ನೀಡಿದ್ದಾರೆ.




