ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಎಲ್‍ನಿನೋ ಪರಿಣಾಮದಿಂದಾಗಿ ಜಿಲ್ಲೆಯಲ್ಲಿ ಮಳೆ ಕೊರತೆ ತೀವ್ರವಾಗಿದ್ದು, ಬಿತ್ತನೆ ಪ್ರಮಾಣ ಕುಂಠಿತಗೊಂಡಿದೆ. ಈವರೆಗೆ ಜಿಲ್ಲೆಯಲ್ಲಿ ಕೇವಲ 59,555 ಹೆಕ್ಟೇರ್ ಅಂದರೆ ಶೇ.17.55 ರಷ್ಟು ಮಾತ್ರ ಬಿತ್ತನೆಯಾಗಿದೆ. ಮಳೆ ಅಭಾವದಿಂದ ರೈತರು ಆರ್ಥಿಕ ನಷ್ಟಕ್ಕೆ ಗುರಿಯಾಗುವ ಸಂಭವವಿರುವುದರಿಂದ, ಕೃಷಿ ಮತ್ತು ತೋಟಗಾರಿಕೆ ಬೆಳೆಗಾರರು ತಕ್ಷಣವೇ ಬೆಳೆ ವಿಮೆ ಯೋಜನೆಗೆ ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ.
ಚಳ್ಳಕೆರೆ ಶಾಸಕರು ಹಾಗೂ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಟಿ. ರಘುಮೂರ್ತಿ ಮತ್ತು ಹೊಸದುರ್ಗ ಶಾಸಕರು ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಬಿ. ಜಿ. ಗೋವಿಂದಪ್ಪ ಅವರು ಜಿಲ್ಲೆಯ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ’ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗಳ ನೋಂದಣಿ ಪ್ರಗತಿ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಒಟ್ಟು 3,02,505 ರೈತರಿದ್ದು, ಜುಲೈ 22ರ ವರೆಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ 83,948 ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ 13,486 ಸೇರಿದಂತೆ ಒಟ್ಟು 97,434 ರೈತರು ನೋಂದಾಯಿಸಿಕೊಂಡಿದ್ದಾರೆ.
ಸಾಲ ಪಡೆದ ರೈತರು ಡಿ.ಸಿ.ಸಿ ಬ್ಯಾಂಕಿನ 22 ಶಾಖೆಗಳು, 160 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಮತ್ತು ಸಾಲ ಪಡೆಯದ ರೈತರು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನೋಂದಾಯಿಸಿಕೊಳ್ಳಬಹುದು. ಉಳಿದ ರೈತರು ಜುಲೈ 31 ರೊಳಗಾಗಿ ತಮ್ಮ ಎಫ್.ಐ.ಡಿ, ಎಲ್ಲಾ ಸರ್ವೇ ನಂಬರ್‍ಗಳ ವಿವರ, ಆಧಾರ್ ಕಾರ್ಡ್ ಪ್ರತಿ ಹಾಗೂ ಪಹಣಿಯೊಂದಿಗೆ ನೋಂದಣಿ ಮಾಡಿಕೊಂಡು ಯೋಜನೆಯ ಗರಿಷ್ಠ ಪ್ರಯೋಜನ ಪಡೆಯುವಂತೆ ಕೃಷಿ ಇಲಾಖೆ ಹಾಗೂ ಶಾಸಕರು ಕೋರಿದ್ದಾರೆ.



