ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದಲ್ಲಿ ಹೂಡಿಕೆ ಅವಕಾಶಗಳನ್ನು ಮತ್ತಷ್ಟು ವಿಸ್ತರಿಸುವ ಹಾಗೂ ರಾಜ್ಯ ಮತ್ತು ಸಿಂಗಾಪುರ ನಡುವಿನ ವಾಣಿಜ್ಯ ಬಾಂಧವ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಸಿಂಗಾಪುರ ಬಿಸಿನೆಸ್ ಫೆಡರೇಶನ್ ನಿಯೋಗದೊಂದಿಗೆ ಮಹತ್ವದ ಸಭೆ ನಡೆಸಿದರು.34,000ಕ್ಕೂ ಹೆಚ್ಚು ಕಂಪನಿಗಳನ್ನು ಪ್ರತಿನಿಧಿಸುವ 'ಸಿಂಗಾಪುರ ಬಿಸಿನೆಸ್ ಫೆಡರೇಶನ್'ನ ಭಾರತೀಯ ಬಿಸಿನೆಸ್ ಕೌನ್ಸಿಲ್ ಅಧ್ಯಕ್ಷ ಪ್ರಸೂನ್ ಮುಖರ್ಜಿ ಹಾಗೂ ಸಮೀ (SAMEA) ಪ್ರದೇಶದ ಕಾರ್ಯನಿರ್ವಾಹಕ ನಿರ್ದೇಶಕಿ ಸಮಂತಾ ತೇವ್ ಅವರನ್ನೊಳಗೊಂಡ ನಿಯೋಗದೊಂದಿಗೆ ಸಚಿವರು ಸುದೀರ್ಘ ಮಾತುಕತೆ ನಡೆಸಿದರು.
ಸಿಂಗಾಪುರ ಎಂಟರ್‌ಪ್ರೈಸ್ ಸೆಂಟರ್: ಆಗ್ನೇಯ ಏಷ್ಯಾ ದೇಶಗಳನ್ನು ಹೊರತುಪಡಿಸಿ, ಸಿಂಗಾಪುರ ಬಿಸಿನೆಸ್ ಫೆಡರೇಶನ್ ತನ್ನ ಮೊದಲ 'ಸಿಂಗಾಪುರ ಎಂಟರ್‌ಪ್ರೈಸ್ ಸೆಂಟರ್' ಅನ್ನು 2025ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಿತ್ತು. ಈ ಕೇಂದ್ರದ ಸ್ಥಾಪನೆಗೆ ಕರ್ನಾಟಕ ಸರ್ಕಾರ ನೀಡಿದ ಬೆಂಬಲಕ್ಕೆ ನಿಯೋಗವು ಕೃತಜ್ಞತೆ ಸಲ್ಲಿಸಿತು.
ಕೈಗಾರಿಕೆಗಳಿಗೆ ನೆರವು: ಬೆಂಗಳೂರಿನಲ್ಲಿರುವ ಈ ಸೆಂಟರ್ ಮೂಲಕ ಸಿಂಗಾಪುರ ಕಂಪನಿಗಳಿಗೆ ಮಾರುಕಟ್ಟೆ ಸಲಹೆ, ನೆಟ್‌ವರ್ಕಿಂಗ್, ಬಿಸಿನೆಸ್ ಮ್ಯಾಚಿಂಗ್ ಮತ್ತು ಸ್ಥಳೀಯ ಮಟ್ಟದಲ್ಲಿ ಬೆಂಬಲ ದೊರೆಯುತ್ತಿದ್ದು, ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಹಾದಿ ಸುಗಮವಾಗಿದೆ ಎಂದು ಸಚಿವರು ತಿಳಿಸಿದರು.
ಆಗಮನಕ್ಕೆ ಆಹ್ವಾನ: ಮುಂಬರುವ 'ಜಾಗತಿಕ ಹೂಡಿಕೆದಾರರ ಸಮಾವೇಶ-2027' ಕ್ಕೆ ಸಿಂಗಾಪುರ ಬಿಸಿನೆಸ್ ಫೆಡರೇಶನ್ ಹಾಗೂ ಅದರ ಸದಸ್ಯ ಸಂಸ್ಥೆಗಳಿಗೆ ಸಚಿವರು ಅಧಿಕೃತ ಆಹ್ವಾನ ನೀಡಿದರು.
ಉದ್ಯೋಗ ಸೃಷ್ಟಿ ಹಾಗೂ ತಂತ್ರಜ್ಞಾನ: ಉತ್ಪಾದನಾ ಕ್ಷೇತ್ರ, ಉದಯೋನ್ಮುಖ ಉದ್ಯಮಗಳು, ಕೈಗಾರಿಕೆ-ಶೈಕ್ಷಣಿಕ ಕ್ಷೇತ್ರಗಳ ಸಹಭಾಗಿತ್ವ ಹಾಗೂ ಸ್ಥಳೀಯರಿಗೆ ಉನ್ನತ ಮೌಲ್ಯದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕುರಿತು ಸಭೆಯಲ್ಲಿ ವಿಶೇಷವಾಗಿ ಚರ್ಚಿಸಲಾಯಿತು.




