ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಏಷ್ಯನ್ ಕ್ರೀಡಾಕೂಟದ ಪುರುಷರ ಹಾಕಿ ವಿಭಾಗದಲ್ಲಿ ಸತತ ಎರಡನೇ ಬಾರಿ ಐತಿಹಾಸಿಕ ಚಿನ್ನದ ಪದಕ ಗೆದ್ದು ಬೀಗಿದ ಭಾರತೀಯ ಹಾಕಿ ತಂಡಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಭಾರತೀಯ ತಂಡದ ಈ ಅದ್ಭುತ ಪ್ರದರ್ಶನವು ದೇಶವಾಸಿಗಳಿಗೆ ಅವಿಸ್ಮರಣೀಯ ಸಂತಸ ಮತ್ತು ಹೆಮ್ಮೆಯನ್ನು ತಂದುಕೊಟ್ಟಿದೆ ಎಂದು ಅವರು ಶ್ಲಾಘಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಭಿನಂದನಾ ಸಂದೇಶ ಹಂಚಿಕೊಂಡಿರುವ ಅವರು, "ಏಷ್ಯನ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಭಾರತೀಯ ಪುರುಷರ ಹಾಕಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಈ ಗೆಲುವಿನೊಂದಿಗೆ ಭಾರತವು ಪುರುಷರ ಹಾಕಿ ವಿಭಾಗದಲ್ಲಿ ಸತತವಾಗಿ ಎರಡು ಬಾರಿ ಚಿನ್ನದ ಸಾಧನೆ ಮಾಡಿದೆ. ಇದು ತಂಡದ ಆತ್ಮವಿಶ್ವಾಸ ಮತ್ತು ಶ್ರೇಷ್ಠತೆಯೆಡೆಗಿನ ನಿರಂತರ ಪ್ರಯತ್ನವನ್ನು ಪ್ರತಿಬಿಂಬಿಸುವ ಪ್ರಮುಖ ಮೈಲಿಗಲ್ಲು" ಎಂದು ಬಣ್ಣಿಸಿದ್ದಾರೆ.
"ಇದು ಭಾರತೀಯ ಹಾಕಿಯ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ. ಈ ಐತಿಹಾಸಿಕ ಸಾಧನೆಗಾಗಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳು" ಎಂದು ಹೇಳಿರುವ ಕುಮಾರಸ್ವಾಮಿ ಅವರು, ಮುಂದಿನ ಗುರಿ ಲಾಸ್ ಏಂಜಲೀಸ್ 2028ರ ಒಲಿಂಪಿಕ್ಸ್ ಎಂದು ಆಶಯ ವ್ಯಕ್ತಪಡಿಸಿದ್ದಾರೆ.




