ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಲ್ಲಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿರುವ ‘ಅಗ್ರಿಕಾನ್ ಹಾರ್ಟಿಕನೆಕ್ಟ್ 2026’ ಅಂತರರಾಷ್ಟ್ರೀಯ ಕೃಷಿ ಮತ್ತು ತೋಟಗಾರಿಕೆ ಮಹಾ ಮೇಳವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಉದ್ಘಾಟಿಸಿದರು.
ನೆದರ್ಲ್ಯಾಂಡ್ಸ್ ಸರ್ಕಾರದ ಆಹಾರ ಭದ್ರತೆ, ಮೀನುಗಾರಿಕೆ ಮತ್ತು ತೋಟಗಾರಿಕೆ ಸಚಿವ ಸಿಲ್ವಿಯೋ ಎರ್ಕೆನ್ಸ್ ಹಾಗೂ ದೇಶ-ವಿದೇಶಗಳ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಈ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮೂರು ದಿನಗಳ ಕಾಲ ನಡೆಯಲಿರುವ ಈ ಅಂತರರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರದರ್ಶನವು ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದ ಪ್ರಮುಖ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ತರಲಿದೆ. ಈ ಪ್ರದರ್ಶನವು ಆಧುನಿಕ ತಂತ್ರಜ್ಞಾನ, ನಾವೀನ್ಯತೆ, ಹೂಡಿಕೆ, ಜಾಗತಿಕ ವಾಣಿಜ್ಯ ವಹಿವಾಟು ಹಾಗೂ ಅಂತರರಾಷ್ಟ್ರೀಯ ಸಹಭಾಗಿತ್ವಕ್ಕೆ ಹೊಸ ದಾರಿಗಳನ್ನು ತೆರೆಯಲಿದೆ ಎಂದು ತಿಳಿಸಲಾಗಿದೆ.




