ಚಂದ್ರವಳ್ಳಿ ನ್ಯೂಸ್, ಮೈಸೂರು
ಶಾಂತಿ ಇಂತಹ ಪದ ಕೇಳಿದೊಡನೆಯೇ ನಮ್ಮಯ ಕಣ್ಣ ಮುಂದೆ ಯುದ್ಧವಿಲ್ಲದ ಜಗತ್ತು, ಗಡಿಯಲ್ಲಿ ನಿಶ್ಶಬ್ದತೆ, ಭಯವಿಲ್ಲದೆ ಬದುಕುವ ಜನರು, ಶಾಲೆಗೆ ಸುರಕ್ಷಿತವಾಗಿ ಹೋಗುವ ಮಕ್ಕಳು ಎಂಬ ಚಿತ್ರ ಮೂಡುತ್ತದೆ. ಆದರೆ ಶಾಂತಿ ಇಷ್ಟಕ್ಕೇ ಸೀಮಿತವೇ? ಯುದ್ಧದ ಬಂದೂಕುಗಳು ಮೌನವಾದರೂ ಮನಸ್ಸಿನೊಳಗಿನ ದ್ವೇಷದ ಬೆಂಕಿ ಉರಿಯುತ್ತಿದ್ದರೆ ಅದನ್ನು ಶಾಂತಿ ಎನ್ನಬಹುದೇ? ಸಮಾಜದಲ್ಲಿ ಅನ್ಯಾಯ, ಅಸಮಾನತೆ, ಭಯ ಮತ್ತು ಅವಮಾನ ಉಳಿದಿದ್ದರೆ ಕೇವಲ ಕದನವಿರಾಮವನ್ನು ಶಾಂತಿ ಎಂದು ಕರೆಯಲು ಸಾಧ್ಯವೇ? ಈ ಪ್ರಶ್ನೆಗಳನ್ನೇ ನಮ್ಮ ಮುಂದೆ ಇಡುವ ದಿನ ಅಂತಾರಾಷ್ಟ್ರೀಯ ಶಾಂತಿ ದಿನ.
ಪ್ರತಿವರ್ಷ ಸೆಪ್ಟೆಂಬರ್ ೨೧ರಂದು ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲಾಗುತ್ತದೆ. ಇದರ ಹುಟ್ಟು ವಿಶ್ವಸಂಸ್ಥೆಯ ಇತಿಹಾಸದೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ. ೧೯೮೧ರ ನವೆಂಬರ್ ೩೦ರಂದು ವಿಶ್ವಸಂಸ್ಥೆಯ ಮಹಾಸಭೆ ೩೬/೬೭ನೇ ನಿರ್ಣಯದ ಮೂಲಕ ಸೆಪ್ಟೆಂಬರ್ ತಿಂಗಳ ಮೂರನೇ ಮಂಗಳವಾರವನ್ನು ಅಂತಾರಾಷ್ಟ್ರೀಯ ಶಾಂತಿ ದಿನವಾಗಿ ಗುರುತಿಸಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಆರಂಭದ ದಿನಕ್ಕೆ ಈ ಆಚರಣೆಯನ್ನು ಜೋಡಿಸಲಾಗಿತ್ತು. ೧೯೮೨ರ ಸೆಪ್ಟೆಂಬರ್‌ನಲ್ಲಿ ಮೊದಲ ಶಾಂತಿ ದಿನ ಆಚರಿಸಲಾಯಿತು. ಎರಡು ದಶಕಗಳ ನಂತರ ೨೦೦೧ರ ಸೆಪ್ಟೆಂಬರ್ ೭ರಂದು ಮಹಾಸಭೆ ೫೫/೨೮೨ನೇ ನಿರ್ಣಯವನ್ನು ಅಂಗೀಕರಿಸಿ ಸೆಪ್ಟೆಂಬರ್ ೨೧ನ್ನು ಪ್ರತಿವರ್ಷದ ಅಂತಾರಾಷ್ಟ್ರೀಯ ಶಾಂತಿ ದಿನವೆಂದು ನಿಗದಿಪಡಿಸಿತು. ೨೦೦೨ರಿಂದ ಈ ದಿನವನ್ನು ಜಾಗತಿಕವಾಗಿ ಸೆಪ್ಟೆಂಬರ್ ೨೧ರಂದು ಆಚರಿಸಲಾಗುತ್ತಿದೆ. ಇದೇ ನಿರ್ಣಯದ ಮೂಲಕ ಈ ದಿನವನ್ನು ಜಾಗತಿಕ ಕದನವಿರಾಮ ಮತ್ತು ಅಹಿಂಸೆಗೆ ಮೀಸಲಾದ ದಿನವೆಂದು ಘೋಷಿಸಲಾಯಿತು.
ಹೀಗಾಗಿ ಈ ದಿನದ ಹುಟ್ಟು ಕೇವಲ ಒಂದು ಆಚರಣೆಯ ಹುಟ್ಟಲ್ಲ. ಯುದ್ಧಗಳಿಂದ ನಲುಗಿದ ಜಗತ್ತಿನಲ್ಲಿ ಶಾಂತಿ ಎಂಬುದು ಮಾನವಕುಲದ ಸಾಮೂಹಿಕ ಹೊಣೆಗಾರಿಕೆ ಎಂಬ ಅರಿವನ್ನು ಗಟ್ಟಿಗೊಳಿಸುವ ಪ್ರಯತ್ನದ ಒಂದು ಹಂತ. ರಾಷ್ಟ್ರಗಳ ನಡುವಿನ ಸಂಘರ್ಷಗಳನ್ನು ಕಡಿಮೆ ಮಾಡುವುದು, ಹಿಂಸೆಗೆ ಬದಲಾಗಿ ಸಂವಾದಕ್ಕೆ ಅವಕಾಶ ಕಲ್ಪಿಸುವುದು, ಶಾಂತಿಯ ಮೌಲ್ಯಗಳನ್ನು ಜನರಲ್ಲಿ ಬೆಳೆಸುವುದು ಮತ್ತು ಶಿಕ್ಷಣ ಹಾಗೂ ಸಾರ್ವಜನಿಕ ಜಾಗೃತಿಯ ಮೂಲಕ ಶಾಂತಿಯ ಸಂಸ್ಕೃತಿಯನ್ನು ರೂಪಿಸುವುದು ಇದರ ಪ್ರಮುಖ ಉದ್ದೇಶಗಳಾಗಿವೆ. ವಿಶ್ವಸಂಸ್ಥೆಯ ಅಧಿಕೃತ ದಾಖಲೆಗಳಲ್ಲಿಯೂ ಈ ದಿನದ ಉದ್ದೇಶವನ್ನು ರಾಷ್ಟ್ರಗಳ ಒಳಗೂ ರಾಷ್ಟ್ರಗಳ ನಡುವೆಯೂ ಶಾಂತಿಯ ಆದರ್ಶಗಳನ್ನು ಬಲಪಡಿಸುವುದಾಗಿ ವಿವರಿಸಲಾಗಿದೆ.
ಆದರೆ ಇಲ್ಲಿಯೇ ಒಂದು ಗಂಭೀರ ಪ್ರಶ್ನೆ ಎದುರಾಗುತ್ತದೆ. ಶಾಂತಿಯ ದಿನವನ್ನು ಆಚರಿಸುತ್ತಿರುವ ಜಗತ್ತು ನಿಜವಾಗಿಯೂ ಶಾಂತಿಯತ್ತ ಸಾಗುತ್ತಿದೆಯೇ? ಒಂದು ದಿನ ಕದನವಿರಾಮ ಘೋಷಿಸಿ, ಉಳಿದ ದಿನಗಳಲ್ಲಿ ಸಂಘರ್ಷದ ಭಾಷೆ ಮುಂದುವರಿದರೆ ಶಾಂತಿಯ ಉದ್ದೇಶ ಎಷ್ಟರ ಮಟ್ಟಿಗೆ ಸಾಧನೆಯಾಗುತ್ತದೆ? ಶಾಂತಿ ಸಮಾವೇಶಗಳು ನಡೆಯುತ್ತವೆ, ಘೋಷಣೆಗಳು ಹೊರಬರುತ್ತವೆ, ಭಾಷಣಗಳು ಕೇಳಿಬರುತ್ತವೆ. ಆದರೆ ಶಸ್ತ್ರಾಸ್ತ್ರಗಳ ಭೀತಿ, ಅಧಿಕಾರದ ಪೈಪೋಟಿ, ದ್ವೇಷದ ರಾಜಕಾರಣ, ಧಾರ್ಮಿಕ ಮತ್ತು ಸಾಮಾಜಿಕ ವಿಭಜನೆ, ಅಸಮಾನತೆ, ಅನ್ಯಾಯ ಇವುಗಳಿಗೆ ಪರಿಹಾರ ಸಿಗದಿದ್ದರೆ ಶಾಂತಿಯ ಮಾತುಗಳು ಆಚರಣೆಯ ಮಟ್ಟದಲ್ಲೇ ಉಳಿಯುವ ಅಪಾಯವಿದೆ.
ಆದ್ದರಿಂದ ಶಾಂತಿಯನ್ನು ಕೇವಲ ಯುದ್ಧದ ಅನುಪಸ್ಥಿತಿ ಎಂದು ನೋಡುವುದು ದೊಡ್ಡ ತಪ್ಪು. ಯುದ್ಧವಿಲ್ಲದಿದ್ದರೂ ಭಯವಿದ್ದರೆ ಶಾಂತಿ ಎಲ್ಲಿದೆ? ಹಸಿವು ಇದ್ದರೆ ಶಾಂತಿ ಎಲ್ಲಿದೆ? ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಅವಕಾಶವಿಲ್ಲದಿದ್ದರೆ ಶಾಂತಿ ಎಲ್ಲಿದೆ? ಒಬ್ಬ ಸಮುದಾಯ ಮತ್ತೊಬ್ಬ ಸಮುದಾಯವನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ಇದ್ದರೆ ಶಾಂತಿ ಎಲ್ಲಿದೆ? ಶಾಂತಿಯ ಮೂಲದಲ್ಲಿ ಭದ್ರತೆ, ನ್ಯಾಯ, ಗೌರವ, ಸಮಾನ ಅವಕಾಶ ಮತ್ತು ಮಾನವ ಘನತೆ ಇರಬೇಕು.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ೨೦೨೬ರ ಅಂತಾರಾಷ್ಟ್ರೀಯ ಶಾಂತಿ ದಿನದ ಸಂದೇಶದಲ್ಲಿ ಶಾಂತಿಯ ಸ್ಥಿತಿ ಇಂದು ಅಪಾಯಕಾರಿಯಾಗಿ ಕೊರತೆಯಲ್ಲಿದೆ ಎಂದು ಹೇಳುತ್ತಾ, ಹಿಂಸೆ ಮತ್ತು ವಿಭಜನೆಯಿಂದ ಸಮುದಾಯಗಳು ನಲುಗುತ್ತಿವೆ, ಸಂಘರ್ಷಗಳು ವಿಸ್ತರಿಸುತ್ತಿವೆ ಮತ್ತು ಸಂವಾದ ದುರ್ಬಲವಾಗುತ್ತಿದೆ ಎಂದು ಎಚ್ಚರಿಸಿದ್ದಾರೆ. ಅದೇ ಸಂದರ್ಭದಲ್ಲಿ ಅವರು ಸ್ವಯಂಸೇವಕರು, ನಾಗರಿಕ ಸಮಾಜದ ನಾಯಕರು, ಶಾಂತಿ ಕಾರ್ಯಕರ್ತರು ಮತ್ತು ಸಮುದಾಯದ ಜನರು ನೆಲಮಟ್ಟದಿಂದ ಶಾಂತಿಯನ್ನು ನಿರ್ಮಿಸುತ್ತಿರುವುದನ್ನು ಗುರುತಿಸಿದ್ದಾರೆ.
೨೦೨೬ರ ಅಂತಾರಾಷ್ಟ್ರೀಯ ಶಾಂತಿ ದಿನದ ಆಶಯವೂ ಗಮನಾರ್ಹವಾಗಿದೆ. “ಎಲ್ಲರಿಗಾಗಿ, ಎಲ್ಲೆಡೆ, ಪ್ರತಿದಿನ ಶಾಂತಿಯಲ್ಲಿ ಹೂಡಿಕೆ ಮಾಡೋಣ” ಎಂಬ ಸಂದೇಶದ ಮೂಲಕ ಶಾಂತಿ ದೊಡ್ಡ ರಾಜತಾಂತ್ರಿಕ ಸಭೆಗಳಲ್ಲಿ ಮಾತ್ರ ನಿರ್ಮಾಣವಾಗುವುದಿಲ್ಲ, ಪ್ರತಿದಿನದ ಬದುಕಿನ ಸಣ್ಣ ಸಣ್ಣ ಕಾರ್ಯಗಳಲ್ಲಿಯೂ ಅದು ರೂಪುಗೊಳ್ಳುತ್ತದೆ ಎಂಬ ವಿಚಾರವನ್ನು ಮುಂದಿಡಲಾಗಿದೆ.
ಇಲ್ಲಿ “ಶಾಂತಿಯಲ್ಲಿ ಹೂಡಿಕೆ” ಎಂಬ ವಿಚಾರವನ್ನು ಹಣದ ಅರ್ಥದಲ್ಲಿ ಮಾತ್ರ ನೋಡಬಾರದು. ಶಿಕ್ಷಣದಲ್ಲಿ ಹೂಡಿಕೆ ಮಾಡುವುದು ಶಾಂತಿಯಲ್ಲಿ ಹೂಡಿಕೆ. ಯುವಜನರಿಗೆ ಅವಕಾಶ ಕಲ್ಪಿಸುವುದು ಶಾಂತಿಯಲ್ಲಿ ಹೂಡಿಕೆ. ಬಡತನ ಮತ್ತು ಅಸಮಾನತೆಯನ್ನು ಕಡಿಮೆ ಮಾಡುವುದು ಶಾಂತಿಯಲ್ಲಿ ಹೂಡಿಕೆ. ನ್ಯಾಯ ವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಹೆಚ್ಚಿಸುವುದು ಶಾಂತಿಯಲ್ಲಿ ಹೂಡಿಕೆ. ದ್ವೇಷದ ಭಾಷೆಗೆ ಬದಲಾಗಿ ಸಂವಾದವನ್ನು ಬೆಳೆಸುವುದು ಶಾಂತಿಯಲ್ಲಿ ಹೂಡಿಕೆ. ಮಕ್ಕಳಿಗೆ ಭಿನ್ನಾಭಿಪ್ರಾಯವನ್ನು ಗೌರವಿಸುವುದನ್ನು ಕಲಿಸುವುದೂ ಶಾಂತಿಯಲ್ಲಿ ಹೂಡಿಕೆಯೇ.

ಶಾಂತಿಯ ಮಹತ್ವವನ್ನು ಯುದ್ಧದ ನಂತರದ ನಾಶವನ್ನು ನೋಡಿದಾಗ ಹೆಚ್ಚು ಅರ್ಥಮಾಡಿಕೊಳ್ಳಬಹುದು. ಯುದ್ಧದಲ್ಲಿ ಗೆದ್ದವನು ಕೂಡ ಏನನ್ನೋ ಕಳೆದುಕೊಳ್ಳುತ್ತಾನೆ. ಮನೆ ಕಳೆದುಕೊಳ್ಳುವವನು ಸಾಮಾನ್ಯ ನಾಗರಿಕ. ಶಿಕ್ಷಣ ಕಳೆದುಕೊಳ್ಳುವವನು ಮಗು. ಉದ್ಯೋಗ ಕಳೆದುಕೊಳ್ಳುವವನು ಯುವಕ. ಕುಟುಂಬ ಕಳೆದುಕೊಳ್ಳುವವನು ತಂದೆ ಅಥವಾ ತಾಯಿ. ಭವಿಷ್ಯದ ಭರವಸೆ ಕಳೆದುಕೊಳ್ಳುವವನು ಇಡೀ ಸಮಾಜ. ಆದ್ದರಿಂದ ಶಾಂತಿ ಅಭಿವೃದ್ಧಿಗೆ ಪೂರ್ವಶರತ್ತು. ಶಾಂತಿ ಇಲ್ಲದೆ ಶಿಕ್ಷಣ, ಆರೋಗ್ಯ, ಉದ್ಯೋಗ, ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಸ್ಥಿರತೆ ಯಾವುದೂ ಸುಸ್ಥಿರವಾಗಿ ಬೆಳೆಯಲು ಸಾಧ್ಯವಿಲ್ಲ.
ಆದರೆ ಜಗತ್ತಿನ ಶಾಂತಿಯ ಪ್ರಶ್ನೆಯನ್ನು ಕೇವಲ ರಾಷ್ಟ್ರಗಳ ಮಟ್ಟದಲ್ಲಿ ಚರ್ಚಿಸುವುದೂ ಅಪೂರ್ಣ. ಒಂದು ಕುಟುಂಬದಲ್ಲಿ ಸಹೋದರರ ನಡುವೆ ಆಸ್ತಿ ವಿಚಾರವಾಗಿ ದ್ವೇಷ ಬೆಳೆದಾಗ, ಒಂದು ಕಚೇರಿಯಲ್ಲಿ ಅಧಿಕಾರಕ್ಕಾಗಿ ಪರಸ್ಪರ ಅವಮಾನಿಸಿದಾಗ, ನೆರೆಹೊರೆಯವರ ನಡುವೆ ಸಣ್ಣ ವಿಚಾರ ದೊಡ್ಡ ವೈಮನಸ್ಸಾದಾಗ, ಸಾಮಾಜಿಕ ಜಾಲತಾಣದಲ್ಲಿ ಭಿನ್ನಾಭಿಪ್ರಾಯ ವೈಯಕ್ತಿಕ ನಿಂದನೆಗೆ ತಿರುಗಿದಾಗ, ಅಲ್ಲಿಯೂ ಶಾಂತಿಯೇ ಪರೀಕ್ಷೆಗೆ ಒಳಗಾಗುತ್ತದೆ. ದೊಡ್ಡ ಯುದ್ಧಗಳು ರಾಷ್ಟ್ರಗಳ ಗಡಿಯಲ್ಲಿ ಕಾಣಿಸಿಕೊಳ್ಳುತ್ತವೆ. ಸಣ್ಣ ಯುದ್ಧಗಳು ಮನುಷ್ಯನ ಮಾತಿನಲ್ಲಿ ಆರಂಭವಾಗುತ್ತವೆ.
ಇಂದಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳೂ ಶಾಂತಿಯ ಪ್ರಶ್ನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಪರಿಶೀಲಿಸದ ಮಾಹಿತಿಯನ್ನು ಹಂಚುವುದು, ದ್ವೇಷಪೂರಿತ ಭಾಷೆಯನ್ನು ಸಾಮಾನ್ಯಗೊಳಿಸುವುದು, ವ್ಯಕ್ತಿಯ ತಪ್ಪನ್ನು ಇಡೀ ಸಮುದಾಯದ ಮೇಲೆ ಹೊರಿಸುವುದು ಮತ್ತು ಭಿನ್ನಾಭಿಪ್ರಾಯವನ್ನು ವೈರತ್ವವನ್ನಾಗಿ ಮಾಡುವುದು ಸಮಾಜದ ಶಾಂತಿಗೆ ಅಪಾಯ. ೨೦೨೫ರ ಶಾಂತಿ ದಿನದ ಸಂದೇಶದಲ್ಲಿಯೇ ವಿಶ್ವಸಂಸ್ಥೆ ಹಿಂಸೆ, ದ್ವೇಷ, ತಾರತಮ್ಯ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತುವುದು, ಭಿನ್ನ ಅಭಿಪ್ರಾಯಗಳನ್ನು ಆಲಿಸುವುದು, ಅಂತರ್ಜಾಲದಲ್ಲಿಯೂ ಮತ್ತು ಹೊರಗೂ ನಡೆಯುವ ಕಿರುಕುಳವನ್ನು ಪ್ರಶ್ನಿಸುವುದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚುವ ಮೊದಲು ಮಾಹಿತಿಯನ್ನು ಪರಿಶೀಲಿಸುವ ಅಗತ್ಯವನ್ನು ಒತ್ತಿಹೇಳಿತ್ತು.
ಆದರೆ ಹೊರಗಿನ ಶಾಂತಿಗಿಂತ ಕಠಿಣವಾದದ್ದು ಒಳಗಿನ ಶಾಂತಿ. ಮನುಷ್ಯನ ಮನಸ್ಸಿನಲ್ಲಿ ಅಸೂಯೆ, ಅಹಂಕಾರ, ಕೋಪ, ಪ್ರತೀಕಾರ ಮತ್ತು ಅನುಮಾನ ಬೆಳೆದರೆ ಅವನ ಸುತ್ತಲಿನ ಸಂಬಂಧಗಳು ನಿಧಾನವಾಗಿ ಅಶಾಂತವಾಗುತ್ತವೆ. ತನ್ನ ತಪ್ಪನ್ನು ಒಪ್ಪಿಕೊಳ್ಳದ ಮನಸ್ಸು ಸದಾ ಮತ್ತೊಬ್ಬನನ್ನೇ ತಪ್ಪಿತಸ್ಥನನ್ನಾಗಿ ಮಾಡುತ್ತದೆ. ಕ್ಷಮಿಸಲು ಸಾಧ್ಯವಾಗದ ಮನಸ್ಸು ಹಳೆಯ ನೋವನ್ನು ಪ್ರತಿದಿನ ಪುನರುಜ್ಜೀವನಗೊಳಿಸುತ್ತದೆ. ಭಿನ್ನಾಭಿಪ್ರಾಯವನ್ನು ಸಹಿಸಲಾಗದ ಮನಸ್ಸು ಪ್ರತಿಯೊಂದು ಸಂಬಂಧವನ್ನೂ ತನ್ನ ಅಭಿಪ್ರಾಯದ ಅಳತೆಯಲ್ಲಿ ಅಳೆಯುತ್ತದೆ. ಹೀಗಾಗಿ ಜಗತ್ತಿನ ಶಾಂತಿಯ ಚರ್ಚೆ ಅಂತಿಮವಾಗಿ ಮನುಷ್ಯನ ಮನಸ್ಸಿನ ಬಾಗಿಲಿಗೆ ಬಂದು ನಿಲ್ಲುತ್ತದೆ.
ಇಲ್ಲಿ ಶಾಂತಿ ಎಂದರೆ ಅನ್ಯಾಯವನ್ನು ಸಹಿಸಿಕೊಂಡು ಮೌನವಾಗಿರುವುದಲ್ಲ ಎಂಬುದನ್ನೂ ಸ್ಪಷ್ಟಪಡಿಸಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಅಗತ್ಯ. ಆದರೆ ಧ್ವನಿಯಲ್ಲಿ ದ್ವೇಷ ಇರಬೇಕೆಂದಿಲ್ಲ. ನ್ಯಾಯಕ್ಕಾಗಿ ಹೋರಾಡಬಹುದು, ಆದರೆ ಮಾನವೀಯತೆಯನ್ನು ಕಳೆದುಕೊಳ್ಳದೆ ಹೋರಾಡಬಹುದು. ವಿರೋಧಿಸಬಹುದು, ಆದರೆ ಎದುರಾಳಿಯ ಮಾನವ ಘನತೆಯನ್ನು ನಿರಾಕರಿಸಬಾರದು. ಭಿನ್ನಾಭಿಪ್ರಾಯ ಇರಬಹುದು, ಆದರೆ ಶತ್ರುತ್ವ ಅಗತ್ಯವಿಲ್ಲ. ಇದೇ ಶಾಂತಿಯ ಪ್ರೌಢ ಅರ್ಥ.
ವಿಶ್ವಸಂಸ್ಥೆಯ ಶಾಂತಿ ಗಂಟೆಯೂ ಈ ಆಶಯದ ಸಂಕೇತವಾಗಿದೆ. ಜಪಾನ್ ೧೯೫೪ರಲ್ಲಿ ವಿಶ್ವಸಂಸ್ಥೆಗೆ ನೀಡಿದ ಈ ಗಂಟೆ ವಿವಿಧ ದೇಶಗಳ ಜನರು ನೀಡಿದ ನಾಣ್ಯಗಳು ಮತ್ತು ಪದಕಗಳಿಂದ ನಿರ್ಮಾಣಗೊಂಡಿದೆ. ಪ್ರತಿವರ್ಷ ಶಾಂತಿ ದಿನದ ಸಂದರ್ಭದಲ್ಲಿ ಅದರ ಧ್ವನಿ ಜಗತ್ತಿಗೆ ಶಾಂತಿಯ ಸಂದೇಶವನ್ನು ನೆನಪಿಸುತ್ತದೆ. ಆದರೆ ಗಂಟೆಯ ಧ್ವನಿ ಹೊರಗೆ ಕೇಳಿಸುವುದಕ್ಕಿಂತ ಅದರ ಅರ್ಥ ನಮ್ಮೊಳಗೆ ಮೊಳಗುವುದು ಮುಖ್ಯ.
ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಕೇವಲ ಆಚರಣೆಯ ದಿನವನ್ನಾಗಿ ಮಾಡದೆ ಆತ್ಮಪರಿಶೀಲನೆಯ ದಿನವನ್ನಾಗಿ ಮಾಡಬೇಕಾಗಿದೆ. ನಾನು ಯಾರನ್ನಾದರೂ ಅನಗತ್ಯವಾಗಿ ನೋಯಿಸುತ್ತಿದ್ದೇನೆಯೇ? ನನ್ನ ಮಾತು ಸಂಬಂಧವೊಂದರಲ್ಲಿ ಅಶಾಂತಿ ಮೂಡಿಸುತ್ತಿದೆಯೇ? ನನ್ನ ಅಭಿಪ್ರಾಯವೇ ಅಂತಿಮ ಸತ್ಯ ಎಂದು ಭಾವಿಸುತ್ತೇನೆಯೇ? ಪರಿಶೀಲಿಸದ ಮಾಹಿತಿಯನ್ನು ಹರಡುತ್ತಿದ್ದೇನೆಯೇ? ಕ್ಷಮಿಸಬೇಕಾದಲ್ಲಿ ಪ್ರತೀಕಾರವನ್ನು ಆಯ್ಕೆ ಮಾಡುತ್ತಿದ್ದೇನೆಯೇ? ಈ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ಹುಡುಕಿದಾಗ ಮಾತ್ರ ಶಾಂತಿ ನಮ್ಮ ಬದುಕಿನಲ್ಲಿ ಅರ್ಥಪೂರ್ಣವಾಗುತ್ತದೆ.
ಅಂತಾರಾಷ್ಟ್ರೀಯ ಶಾಂತಿ ದಿನದ ನಿಜವಾದ ಮಹತ್ವ ಒಂದು ದಿನದ ಆಚರಣೆಯಲ್ಲಿ ಇಲ್ಲ. ಅದು ಶಾಂತಿಯ ಕುರಿತು ನಮ್ಮ ದೃಷ್ಟಿಕೋನವನ್ನು ಬದಲಿಸುವಲ್ಲಿ ಇದೆ. ಶಾಂತಿ ಎಂದರೆ ಯುದ್ಧ ನಿಲ್ಲಿಸುವುದಷ್ಟೇ ಅಲ್ಲ. ಅದು ಭಯವನ್ನು ಕಡಿಮೆ ಮಾಡುವುದು, ನ್ಯಾಯವನ್ನು ಬಲಪಡಿಸುವುದು, ಗೌರವವನ್ನು ಕಾಪಾಡುವುದು, ಸಂವಾದಕ್ಕೆ ಅವಕಾಶ ನೀಡುವುದು, ದ್ವೇಷವನ್ನು ನಿಯಂತ್ರಿಸುವುದು ಮತ್ತು ಮನುಷ್ಯನೊಳಗಿನ ಅಶಾಂತಿಯನ್ನು ಅರಿಯುವುದು. ಜಗತ್ತಿನ ಶಾಂತಿಗೆ ರಾಷ್ಟ್ರಗಳ ಹೊಣೆಗಾರಿಕೆ ಇದೆ. ಆದರೆ ಅದರ ಮೊದಲ ಹೆಜ್ಜೆ ಪ್ರತಿಯೊಬ್ಬರ ಮನಸ್ಸಿನಿಂದಲೇ ಆರಂಭವಾಗಬೇಕು.
ಯುದ್ಧ ನಿಲ್ಲಿಸಿದರೆ ಕದನವಿರಾಮ ಸಿಗುತ್ತದೆ. ದ್ವೇಷ ನಿಲ್ಲಿಸಿದರೆ ಶಾಂತಿ ಸಿಗುತ್ತದೆ. ಅನ್ಯಾಯ ಕಡಿಮೆಯಾದರೆ ನ್ಯಾಯ ಅರಳುತ್ತದೆ.ಮನಸ್ಸು ಬದಲಾದಾಗಲೇ ಮನುಷ್ಯತ್ವ ಉಳಿಯುತ್ತದೆ.ಇದನ್ನರಿತು ನಡೆದಾಗ ಬದುಕು ಸುಂದರ.
ಲೇಖನ : ಕೆ. ಎಸ್. ಪ್ರಮೋದ್ ಕುಮಾರ್,ಎಂಬಿಎ( ಬಿಇ), (ಕಾಶಿಪಿಕೆ), ಮೈಸೂರು.




