ಚಂದ್ರವಳ್ಳಿ ನ್ಯೂಸ್ ನವದೆಹಲಿ:
ಕರ್ನಾಟಕದ ಜಲ ಹಿತಾಸಕ್ತಿಗಳನ್ನು ಕಾಯುವುದು ಮತ್ತು ರಾಜ್ಯದ ಜನರಿಗೆ ದೀರ್ಘಕಾಲೀನ ನೀರಿನ ಭದ್ರತೆಯನ್ನು ಒದಗಿಸುವುದು ನಮ್ಮ ಸರ್ಕಾರಕ್ಕಿರುವ ಅತ್ಯುನ್ನತ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು ನವದೆಹಲಿಯಲ್ಲಿ ಕಾನೂನು ಮತ್ತು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಪ್ರಮುಖ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ಜಲಸಂಪನ್ಮೂಲ ಹಾಗೂ ಕುಡಿಯುವ ನೀರಿನ ಯೋಜನೆಗಳ ಕುರಿತು ಸಮಗ್ರ ಚರ್ಚೆ ನಡೆಯಿತು.
ಯೋಜನೆಗಳ ಪರಿಶೀಲನೆ: ಸುದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿರುವ ಮತ್ತು ರಾಜ್ಯದ ಪಾಲಿಗೆ ನಿರ್ಣಾಯಕವಾಗಿರುವ 'ಮೇಕೆದಾಟು' ಹಾಗೂ 'ಮಹಾದಾಯಿ' ಯೋಜನೆಗಳ ಪ್ರಸ್ತುತ ಸ್ಥಿತಿಗತಿ ಮತ್ತು ಮುಂದಿನ ಹಂತದ ಕುರಿತು ಕೂಲಂಕಷವಾಗಿ ಪರಿಶೀಲಿಸಲಾಯಿತು.
ಜಲಾಶಯಗಳ ಸ್ಥಿತಿ: ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ಪ್ರಸ್ತುತ ನೀರು ಶೇಖರಣಾ ಪ್ರಮಾಣ ಹಾಗೂ ಕುಡಿಯುವ ನೀರಿನ ಪೂರೈಕೆ ಸ್ಥಿತಿಗತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಯಿತು.
ಕಾನೂನು ಮತ್ತು ಆಡಳಿತಾತ್ಮಕ ಹೋರಾಟ: ಕರ್ನಾಟಕದ ನ್ಯಾಯಯುತ ಜಲ ಹಿತಾಸಕ್ತಿಗಳನ್ನು ರಕ್ಷಿಸಲು ಹಾಗೂ ರಾಜ್ಯದ ಜನರಿಗೆ ನೀರಿನ ಭದ್ರತೆ ಖಚಿತಪಡಿಸಲು ಅಗತ್ಯವಿರುವ ಪ್ರತಿಯೊಂದು ಕಾನೂನಾತ್ಮಕ ಮತ್ತು ಆಡಳಿತಾತ್ಮಕ ಮಾರ್ಗಗಳನ್ನು ಸರ್ಕಾರ ಬದ್ಧತೆಯಿಂದ ಮುಂದುವರಿಸಲಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಈ ಉನ್ನತ ಮಟ್ಟದ ಸಭೆಯಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಡಾ. ಟಿ. ಬಿ. ಜಯಚಂದ್ರ, ಕರ್ನಾಟಕದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಹಾಗೂ ಕಾನೂನು ಮತ್ತು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.



