ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ವಾಯುತ್ತ ಸಂಸ್ಥೆಯಾದ ಕೇಂದ್ರ ಚುನಾವಣಾ ಆಯೋಗ ಮತ್ತು ಆಡಳಿತಾರೂಢ ಬಿಜೆಪಿ ನಡುವಿನ ನಿಕಟ ಬಾಂಧವ್ಯವನ್ನು ಪ್ರಶ್ನಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಆಯೋಗದ ವಿರುದ್ಧ ಯಾವುದೇ ಆರೋಪ ಅಥವಾ ಪ್ರಶ್ನೆಗಳು ಎದ್ದಾಗಲೆಲ್ಲಾ, ಸಂಸ್ಥೆಯ ಪರವಾಗಿ ಆಯೋಗಕ್ಕಿಂತ ಮುಂಚಿತವಾಗಿ ಬಿಜೆಪಿಯೇ ಸಮರ್ಥನೆಗೆ ಧಾವಿಸುವುದರ ಹಿಂದಿನ ಮರ್ಮವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಸಂಸ್ಥೆಯ ಒಳರಚನೆ ಮತ್ತು ನಿರ್ಧಾರಗಳ ಕುರಿತು ಪ್ರಿಯಾಂಕ್ ಖರ್ಗೆ ಎತ್ತಿರುವ ಮುಖ್ಯ ಪ್ರಶ್ನೆಗಳು ಹಾಗೂ ವಿಶ್ಲೇಷಣೆ ಹೀಗಿದೆ:
೧. ಚುನಾವಣಾ ಆಯೋಗ ಬಿಜೆಪಿಯ ‘ಎಲೆಕ್ಷನ್ ಮೋರ್ಚಾ’ವೇ?
ಸ್ವಾಯುತ್ತ ಸಂಸ್ಥೆಯಾದ ಚುನಾವಣಾ ಆಯೋಗವನ್ನು ಸಾರ್ವಜನಿಕವಾಗಿ ಪ್ರಶ್ನಿಸಿದಾಗ, ಆಯೋಗ ನೀಡಬೇಕಾದ ಸ್ಪಷ್ಟನೆಯನ್ನು ಬಿಜೆಪಿ ನಾಯಕರು ಮತ್ತು ವಕ್ತಾರರು ನೀಡುತ್ತಿದ್ದಾರೆ. ಬಿಜೆಪಿಗೂ ಹಾಗೂ ಸ್ವಾಯುತ್ತ ಸಂಸ್ಥೆಯಾದ ಚುನಾವಣಾ ಆಯೋಗಕ್ಕೂ ಇರುವ ಈ ಅವಿನಾಭಾವ ಸಂಬಂಧವನ್ನು ನೋಡಿದರೆ, ಚುನಾವಣಾ ಆಯೋಗವು ಬಿಜೆಪಿಯ ಒಂದು ಅಂಗ ಸಂಸ್ಥೆ "ಎಲೆಕ್ಷನ್ ಮೋರ್ಚಾ"ದಂತೆ ಕಾರ್ಯಾಚರಿಸುತ್ತಿದೆಯೇ ಎಂಬ ಸಂಶಯ ಮೂಡುತ್ತಿದೆ.
೨. ಸರ್ವಾನುಮತದ ನಿರ್ಧಾರವೇ? ಅಥವಾ ಏಕಪಕ್ಷೀಯ ಆದೇಶವೇ?
ಸಂವಿಧಾನಾತ್ಮಕ 'ಆಯೋಗ' ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ; ಸಂಸ್ಥೆಯಲ್ಲಲಿರುವ ಎಲ್ಲ ಸದಸ್ಯರ ಆಲೋಚನೆ ಹಾಗೂ ಸರ್ವಾನುಮತದ ನಿರ್ಧಾರಗಳೇ ಆಯೋಗದ ಅಧಿಕೃತ ನಿರ್ಧಾರ ಎನಿಸಿಕೊಳ್ಳುತ್ತವೆ. ಆದರೆ, ಪ್ರಸ್ತುತ ಕೇಂದ್ರ ಚುನಾವಣಾ ಆಯೋಗದ ಪ್ರಮುಖ ನಿರ್ಧಾರಗಳು ಕೇವಲ ಮುಖ್ಯ ಚುನಾವಣಾ ಆಯುಕ್ತರೊಬ್ಬರ ಏಕಪಕ್ಷೀಯ ನಿರ್ಧಾರಗಳಾಗಿರುವುದು ಬಯಲಾಗಿದೆ. ಆಂತರಿಕವಾಗಿ ಪ್ರಜಾರಾಜಕೀಯ ತತ್ವಗಳನ್ನು ಗಾಳಿಗೆ ತೂರಿ ತೆಗೆದುಕೊಂಡಿರುವ ಈ ಎಲ್ಲಾ ನಿರ್ಧಾರಗಳು ಮತ್ತು ಅದರ ಆಧಾರದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳು ಕಾನೂನು ಬಾಹಿರ ಹಾಗೂ ಅನರ್ಹವಾಗಿವೆ.
೩. ಸಿಇಸಿ ಜ್ಞಾನೇಶ್ ಕುಮಾರ್ ಎಲ್ಲಿ ಬಚ್ಚಿಟ್ಟುಕೊಂಡಿದ್ದಾರೆ?
ಈ ಹಿಂದೆ ರಾಹುಲ್ ಗಾಂಧಿಯವರು ಮತಗಳ ಅಕ್ರಮ ಮತ್ತು 'ಓಟ್ ಚೋರಿ' ಕುರಿತು ಸಾಕ್ಷಿಸಮೇತ ಆರೋಪ ಮಾಡಿದಾಗ ತಕ್ಷಣವೇ ರಾಜಕೀಯ ಪಕ್ಷದ ಧಾಟಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು, ಈಗ ಸಂಸ್ಥೆಯ ವಿಶ್ವಾಸಾರ್ಹತೆಯೇ ಪೂರ್ಣ ಪ್ರಮಾಣದಲ್ಲಿ ಪ್ರಶ್ನೆಗೊಳಗಾಗಿರುವಾಗ ಸಂಪೂರ್ಣ ನಾಪತ್ತೆಯಾಗಿದ್ದಾರೆ. ಆಯೋಗವೇ ಮುನ್ನೆಲೆಗೆ ಬಂದು ಉತ್ತರಿಸಬೇಕಾದ ಜಾಗದಲ್ಲಿ ಬಿಜೆಪಿ ವಕ್ತಾರರು ಆಯೋಗದ ಸಮರ್ಥನೆಗೆ ನಿಂತಿದ್ದಾರೆ.
ಆದ್ದರಿಂದ ಬಿಜೆಪಿಗೆ ನೇರ ಪ್ರಶ್ನೆ: ಜ್ಞಾನೇಶ್ ಕುಮಾರ್ ರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ? ಆಯೋಗದ ಸುಪರ್ದಿಯಲ್ಲಿರಬೇಕಾದ ಪಾರದರ್ಶಕತೆಯನ್ನು ಬಿಜೆಪಿಯ ಕಚೇರಿಯಿಂದ ನಿರ್ವಹಿಸಲಾಗುತ್ತಿದೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.




