ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಳಮೀಸಲಾತಿ ಜಾರಿಕುರಿತಂತೆ ಸರ್ಕಾರಿ ಆದೇಶ ಹೊರಬೀಳುವುದರೊಂದಿಗೆ ಒಂದು ಹಂತದ ಜಯ ವರ್ಗೀಕರಣದ ಹೋರಾಟಕ್ಕೆ ಸಿಕ್ಕಂತಾಗಿದೆ. ಒಟ್ಟು ಒಳಮೀಸಲಾತಿಯ ಜಾರಿಯಲ್ಲಿ ಇನ್ನೂ ಸಾಕಷ್ಟು ಮಾರ್ಪಾಡುಗಳ ಆಗತ್ಯವಿದೆ. ಆದರೂ ಸರ್ಕಾರ ದೃಢ ಹೆಜ್ಜೆಇಟ್ಟು 5.25 : 5.25 : 4.50 ಸೂತ್ರ ರೂಪಿಸಿದೆ. ಒಳಮೀಸಲಾತಿಯ ವಿಷಯದಲ್ಲಿ ಹಲವರು ಸಾಕಷ್ಟು ಒತ್ತಡ ತಂದರೂ ಸರ್ಕಾರ ಸೊಪ್ಪು ಹಾಕದೆ ಜಾರಿ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಒಳಮೀಸಲಾತಿ ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯವೇ, ರೋಸ್ಟರ್ ಸೇರಿದಂತೆ ಎಲ್ಲ ಹಂತಗಳಲ್ಲಿ ಜಾರಿಯಾಗಬೇಕೆಂಬುದು ಶ್ರೀಮಠದ ಆಶಯವಾಗಿದೆ. ಈ ಬಗ್ಗೆ ಮತ್ತೊಂದು ಹಂತ ಚರ್ಚೆಗಳು ನೆಡೆದು ಸೂಕ್ತ ಮಾರ್ಪಾಡುಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಸರ್ಕಾರ ನಿಗಾ ವಹಿಸಬೇಕು.
ಸುಪ್ರೀಂಕೋರ್ಟ್ ತೀರ್ಪು ಬಂದು ಸುಮಾರು 20 ತಿಂಗಳುಗಳ ತರುವಾಯ ಸ್ವತಃ ಮುಖ್ಯಮಂತ್ರಿಗಳೇ ಮುತುವರ್ಜಿ ವಹಿಸಿ ಒಳಮೀಸಲಾತಿ ಜಾರಿಮಾಡಿ ಅಭಿನಂದನೆಗೆ ಪಾತ್ರರಾಗಿದ್ದಾರೆ.
ಸಮುದಾಯದ ಹಿರಿಯರೂ, ಸಚಿವರೂ ಆದ ಕೆ ಹೆಚ್ ಮುನಿಯಪ್ಪ ಮತ್ತು ಆರ್ ಬಿ ತಿಮ್ಮಾಪುರ ಅವರು ಜಟಿಲ ಸನ್ನಿವೇಶಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ತಮ್ಮದೇ ಆದ ರೀತಿಯಲ್ಲಿ ಮಹತ್ವದ ಪಾತ್ರವಹಿಸಿ ಅಭಿನಂದನೆಗೆ ಪಾತ್ರರಾಗಿದ್ದಾರೆ. ಮೂವತ್ತು ವರ್ಷಗಳ ಸುದೀರ್ಘ ಹೋರಾಟದಲ್ಲಿ ಪಾಲ್ಗೊಂಡ ಎಲ್ಲ ಸಮಾಜ ಬಂಧುಗಳ ಕೊಡುಗೆಯನ್ನು ಶ್ರೀ ಮಠ ಈ ಸಂದರ್ಭದಲ್ಲಿ ಸ್ಮರಿಸುತ್ತದೆ ಎಂದು ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠಾಧ್ಯಕ್ಷರಾದ ಡಾ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.


